German Open‌: ಫೈನಲಲ್ಲಿ ಎಡವಿದ ಲಕ್ಷ್ಯ ಸೆನ್‌

By Kannadaprabha News  |  First Published Mar 14, 2022, 9:36 AM IST

* ಜರ್ಮನ್‌ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ನಲ್ಲಿ ಲಕ್ಷ್ಯ ಸೆನ್‌ಗೆ ನಿರಾಸೆ

* ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ 20 ವರ್ಷದ ಲಕ್ಷ್ಯ ಸೆನ್‌

* ಥಾಯ್ಲೆಂಡ್‌ನ ಕುನ್ಲಾವುಟ್‌ ವಿಟಿಡ್‌ಸರ್ನ್‌ ವಿರುದ್ಧ ಫೈನಲ್‌ನಲ್ಲಿ ಸೋಲು


ಮುಯೆಲ್ಹೀಮ್‌ ಆನ್‌ ಡೆರ್‌ ರುಹ್ರ್(ಮಾ.14): ಜರ್ಮನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ (German Open Badmiton) ಭಾರತದ 20 ವರ್ಷದ ಲಕ್ಷ್ಯ ಸೆನ್‌ (Lakshya Sen) ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಭಾನುವಾರ 57 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ ಪಂದ್ಯದಲ್ಲಿ ಥಾಯ್ಲೆಂಡ್‌ನ ಕುನ್ಲಾವುಟ್‌ ವಿಟಿಡ್‌ಸರ್ನ್‌ (Kunlavut Vitidsarn) ವಿರುದ್ಧ ಸೆನ್‌ 21-15, 21-18 ನೇರ ಗೇಮ್‌ಗಳಿಂದ ಸೋಲುನುಭವಿಸಿದರು.

ಮೊದಲ ಗೇಮ್‌ನ ಆರಂಭದಲ್ಲೇ ಭಾರತೀಯ ಆಟಗಾರನ ವಿರುದ್ಧ ಮೇಲುಗೈ ಸಾಧಿಸಿದ್ದ ವಿಶ್ವ ನಂ.20 ಕುನ್ಲಾವುಟ್‌ ಪಂದ್ಯದುದ್ದಕ್ಕೂ ಮುನ್ನಡೆಯನ್ನು ಕಾಯ್ದುಕೊಳ್ಳುತ್ತಲೇ ಸಾಗಿದರು. 2ನೇ ಗೇಮ್‌ನಲ್ಲಿ ಸೆನ್‌ ಥಾಯ್ಲೆಂಡ್‌ ಆಟಗಾರನಿಗೆ ತೀವ್ರ ಪೈಪೋಟಿ ಒಡ್ಡಿದರು. ಆದರೆ ಭಾರೀ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಅಂತಿಮವಾಗಿ ಕುನ್ಲಾವುಟ್‌ ಮೇಲುಗೈ ಸಾಧಿಸಿ ಪ್ರಶಸ್ತಿ ತನ್ನದಾಗಿಸಿಕೊಂಡರು. ಶನಿವಾರ ನಡೆದಿದ್ದ ಸೆಮಿಫೈನಲ್‌ನಲ್ಲಿ ಸೆನ್‌ ಹಾಲಿ ಒಲಿಂಪಿಕ್‌ ಚಾಂಪಿಯನ್‌, ವಿಶ್ವ ನಂ.1 ಡೆನ್ಮಾರ್ಕ್‌ನ ವಿಕ್ಟರ್‌ ಆಕ್ಸೆಲ್ಸೆನ್‌ ವಿರುದ್ಧ 21-13, 12-21, 23-21 ಗೇಮ್‌ಗಳಲ್ಲಿ ಗೆದ್ದಿದ್ದರು.

Tap to resize

Latest Videos

ಹಾಕಿ: ಜರ್ಮನಿ ವಿರುದ್ಧ ಸೇಡು ತೀರಿಸಿದ ಭಾರತ

ಭುವನೇಶ್ವರ: ಎಫ್‌ಐಎಚ್‌ ಪ್ರೊ ಲೀಗ್‌ನ (FIH League) ಜರ್ಮನಿ ವಿರುದ್ಧದ 2ನೇ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಶೂಟೌಟ್‌ನಲ್ಲಿ 3-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಶನಿವಾರ ಮೊದಲ ಪಂದ್ಯದಲ್ಲಿ ಶೂಟೌಟ್‌ನಲ್ಲಿ 1-2 ರಿಂದ ಸೋತಿದ್ದ ಭಾರತ ಈ ಪಂದ್ಯದಲ್ಲಿ ಸೇಡು ತೀರಿಸಿಕೊಂಡಿತು. 

German Open‌: ವಿಶ್ವ ನಂ.1 ವಿಕ್ಟರ್‌ ಆಕ್ಸೆಲ್ಸೆನ್‌ ಮಣಿಸಿ ಫೈನಲ್‌ ಪ್ರವೇಶಿಸಿದ ಲಕ್ಷ್ಯ ಸೆನ್‌

ಭಾನುವಾರ ನಡೆದ ಪಂದ್ಯ ನಿಗದಿತ 60 ನಿಮಿಷಗಳ ಮುಕ್ತಾಯಕ್ಕೆ 1-1 ಗೋಲುಗಳಲ್ಲಿ ಸಮಗೊಂಡಿತ್ತು. ಭಾರತ ಪರ ನಿಶಾ(40ನೇ ನಿಮಿಷ), ಜರ್ಮನಿ ಪರ ವೀಡರ್‌ಮನ್‌(29) ಗೋಲು ಬಾರಿಸಿದರು. ಬಳಿಕ ಶೂಟೌಟ್‌ನಲ್ಲಿ ಭಾರತದ ಪರ ಸಲೀಮಾ ಟೆಟೆ, ಸಂಗೀತಾ ಕುಮಾರಿ ಹಾಗೂ ಸೋನಿಕಾ ಗೋಲು ಬಾರಿಸಿದರು. ಜರ್ಮನಿ ಆಟಗಾರ್ತಿಯರು ಎಲ್ಲಾ ಮೂರು ಅವಕಾಶಗಳನ್ನು ವ್ಯರ್ಥಗೊಳಿಸಿದರು. 6 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿರುವ ಭಾರತ ಅಂಕಪಟ್ಟಿಯಲ್ಲಿ 12 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. ಏಪ್ರಿಲ್ 2 ಮತ್ತು 3ಕ್ಕೆ ಇಂಗ್ಲೆಂಡ್‌ ವಿರುದ್ಧ ಇದೇ ಕ್ರೀಡಾಂಗಣದಲ್ಲಿ ಸೆಣಸಾಡಲಿದೆ.

ಪಿಂಕ್‌ ಟೆಸ್ಟ್‌ ಸ್ಮರಣಾರ್ಥ ವಿಶೇಷ ಪೋಸ್ಟಲ್‌ ಕವರ್‌!

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೊಚ್ಚಲ ಹಗಲು-ರಾತ್ರಿ ಟೆಸ್ಟ್‌ (ಪಿಂಕ್‌ ಬಾಲ್‌ ಟೆಸ್ಟ್‌) ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ನೆನಪಿಗಾಗಿ ಅಂಚೆ ಇಲಾಖೆ ವಿಶೇಷ ಪೋಸ್ಟಲ್‌ ಕವರ್‌ ಅನ್ನು ಬಿಡುಗಡೆ ಮಾಡಿದೆ. ಈ ಕಾರ‍್ಯಕ್ರಮ ಭಾನುವಾರ ಭೋಜನ ವಿರಾಮದ ವೇಳೆ ಕ್ರೀಡಾಂಗಣದಲ್ಲಿ ನಡೆಯಿತು. ಇದೇ ವೇಳೆ ಕೆಎಸ್‌ಸಿಎ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸ್ಮರಣೀಯ ಪಂದ್ಯಗಳ ಕುರಿತ ವಿಶೇಷ ಸಂಚಿಕೆಯನ್ನೂ ಬಿಡುಗಡೆ ಮಾಡಿತು.

ಟೆಸ್ಟ್‌ನಲ್ಲಿ ವೇಗದ ಅರ್ಧಶತಕ: ಕಪಿಲ್‌ ದಾಖಲೆ ಮುರಿದ ಪಂತ್‌

ಬೆಂಗಳೂರು: ಭಾರತದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಭಾನುವಾರ ಲಂಕಾ ವಿರುದ್ಧ 2ನೇ ಟೆಸ್ಟ್‌ನಲ್ಲಿ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ, ಟೆಸ್ಟ್‌ ಕ್ರಿಕೆಟ್‌ನಲ್ಲಿ ವೇಗದ ಅರ್ಧಶತಕ ಬಾರಿಸಿದ ಭಾರತೀಯ ಎನ್ನುವ ದಾಖಲೆ ಬರೆದರು. 1982ರ ಕರಾಚಿ ಟೆಸ್ಟ್‌ನಲ್ಲಿ ಪಾಕಿಸ್ತಾನ ವಿರುದ್ಧ ಕಪಿಲ್‌ ದೇವ್‌ 30 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಅವರ ದಾಖಲೆಯನ್ನು ಪಂತ್‌ ಮುರಿದರು. ಅಲ್ಲದೇ ಟೆಸ್ಟ್‌ನಲ್ಲಿ ವೇಗದ ಅರ್ಧಶತಕ ಬಾರಿಸಿದ ವಿಕೆಟ್‌ ಕೀಪರ್‌ ಎನ್ನುವ ವಿಶ್ವ ದಾಖಲೆಯನ್ನೂ ಬರೆದರು. ಆಸ್ಪ್ರೇಲಿಯಾದ ಇಯಾನ್‌ ಸ್ಮಿತ್‌ ಹಾಗೂ ಭಾರತದ ಎಂ.ಎಸ್‌.ಧೋನಿ ಇಬ್ಬರೂ 34 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದು ಈ ವರೆಗಿನ ದಾಖಲೆ ಎನಿಸಿತ್ತು.

click me!