
ನವದೆಹಲಿ(ಡಿ.04): ಎಂಥಾ ಕಾಲ ಬಂತು ನೋಡಿ. ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು ದೇಶಕ್ಕೆ ಹೆಮ್ಮೆ ತರುವಂತಹ ಸಾಧನೆ ಮಾಡಿದರೂ, ಅಂತಹ ಸಾಧಕರಿಂದಲೂ ಆಮದು ಸುಂಕ ವಸೂಲಿ ಮಾಡಲು ಭಾರತ ಸರ್ಕಾರ ಮುಂದಾಗಿರುವುದು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇದೇ ವರ್ಷದ(2020) ಆಗಸ್ಟ್ ತಿಂಗಳಿನಲ್ಲಿ ಫಿಡೆ ಆಯೋಜಿಸಿದ್ದ ಆನ್‌ಲೈನ್ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತ ಚೆಸ್ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಂಡಿತ್ತು. ಕೊರೋನಾ ಕಾರಣದಿಂದಾಗಿ ಮೊದಲ ಬಾರಿಗೆ ಆನ್‌ಲೈನ್ ಚೆಸ್ ಟೂರ್ನಿ ಆಯೋಜಿಸಿತ್ತು. ಈ ಟೂರ್ನಿಯಲ್ಲಿ ಭಾರತ ಹಾಗೂ ರಷ್ಯಾ ತಂಡಗಳು ಜಂಟಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದವು.
ಭಾರತ ತಂಡದ ಈ ಸಾಧನೆ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಅಭಿನಂದನೆ ಸಲ್ಲಿಸಿದ್ದರು.
ಇದೀಗ ಬೆಂಗಳೂರಿನಲ್ಲಿ ನೆಲೆಸಿರುವ ಭಾರತ ಚೆಸ್ ತಂಡದ ಉಪನಾಯಕ ಶ್ರೀನಾಥ್ ನಾರಾಯಣ್ 3 ತಿಂಗಳ ಹಿಂದೆ ಗೆದ್ದ ಟೂರ್ನಿಯ ಬಗ್ಗೆ ಪದಕ ಪಡೆಯಲು ಅನುಭವಿಸಿದ ಹರಸಾಹಸದ ಬಗ್ಗೆ ಟ್ವೀಟ್ ಮೂಲಕ ತಿಳಿಸಿದ್ದಾರೆ. ಅಂತು ಕೊನೆಗೂ ಪದಕಗಳು ಕೈ ಸೇರಿದವು. FIDE ಗೆ ಧನ್ಯವಾದಗಳು. ಪದಕ ಪಡೆಯುವುದು ಅಷ್ಟು ಸುಲಭವಾಗಿರಲಿಲ್ಲ. ರಷ್ಯಾದಿಂದ ಪದಕಗಳು ಭಾರತಕ್ಕೆ ತಲುಪಲು 3 ದಿನಗಳು ಬೇಕಾಯಿತು.ಆದರೆ ಭಾರತದಲ್ಲೇ ಪದಕಗಳು ಬೆಂಗಳೂರು ತಲುಪಲು ಒಂದು ವಾರವೇ ಹಿಡಿಯಿತು. ಅದೂ ಆಮದು ಸುಂಕ ಕಟ್ಟಿ ಎಂದು ಟ್ವೀಟ್ ಮಾಡಿದ್ದಾರೆ.
ಚೆಸ್ ಒಲಿಂಪಿಯಾಡ್: ಭಾರತ-ರಷ್ಯಾ ಜಂಟಿ ಚಾಂಪಿಯನ್
ಜೂನ್ 30, 2017ರ ಕೇಂದ್ರ ಸರ್ಕಾರದ ಸುತ್ತೋಲೆಯ ಪ್ರಕಾರ ಭಾರತೀಯ ತಂಡ ಅಥವಾ ಆಟಗಾರರು ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಅಥವಾ ಟ್ರೋಫಿ ಗೆದ್ದರೆ ಅಂತಹವುಗಳಿಗೆ ಆಮದು ಸುಂಕ ವಿಧಿಸುವಂತಿಲ್ಲ ಎಂದು ತಿಳಿಸಿದೆ. ಆದಾಗ್ಯೂ ಶ್ರೀನಾಥ್ ನಾರಾಯಣ್ ಅವರ ಟ್ವೀಟ್ ಹೊಸ ಚರ್ಚೆ ಹುಟ್ಟುಹಾಕಿದೆ.
ಮಿಂಟ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ನಾರಾಯಣ್, ತಾವು ಪದಕ ಪಡೆಯಲು 6,300 ರುಪಾಯಿ ಆಮದು ಸುಂಕ ಕಟ್ಟಿರುವುದಾಗಿ ತಿಳಿಸಿದ್ದಾರೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.