
ನ್ಯೂಯಾರ್ಕ್: ಕಜಕಸ್ತಾನದ ಎಲೆನಾ ರಬೈಕೆನಾ ವರ್ಷದ ಕೊನೆಯ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಾದ ಯುಎಸ್ ಓಪನ್‌ನ ಮಹಿಳಾ ಸಿಂಗಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಫೈನಲ್‌ನಲ್ಲಿ ಈ ಹಿಂದಿನ ಷ್ಬಾರಿ ಚಾಂಪಿಯನ್, ಬೆಲಾರುಸ್‌ನ ಅರೈನಾ ಸಬಲೆಂಕಾ ವಿರುದ್ಧ 6-4, 5-7, 6-2 ಸೆಟ್‌ಗಳಲ್ಲಿ ಜಯಗಳಿಸಿದರು. ಇದರೊಂದಿಗೆ ಸತತ 3 ಬಾರಿ ಯುಎಸ್ ಓಪನ್ ಗೆಲ್ಲುವ ಸಬಲೆಂಕಾ ಕನಸು ಭಗ್ನಗೊಂಡಿತು.
ಸಬಲೆಂಕಾ ಯುಎಸ್ ಓಪನ್‌ನಲ್ಲಿ ಸತತ 19 ಪಂದ್ಯ ಜಯಿಸಿದ್ದರು. 2023ರ ಫೈನಲ್‌ನಲ್ಲಿ ಕೊಕೊ ಗಾಫ್ ವಿರುದ್ಧದ ಸೋಲಿನ ಬಳಿಕ ಅವರು ಸೋತಿರಲಿಲ್ಲ. ಆದರೆ, ಗೆಲುವಿನ ಓಟಕ್ಕೆ ರಬೈಕೆನಾ ತಡೆಯೊಡ್ಡಿದರು. ಈ ವರ್ಷ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಸಬಲೆಂಕಾಗೆ ಸೋಲುಣಿಸಿದ್ದ ರಬೈಕೆನಾ, ಯುಎಸ್ ಓಪನ್‌ನಲ್ಲೂ ಜಯಿಸಿ, ಈ ವರ್ಷದ 2ನೇ ಹಾಗೂ ಒಟ್ಟಾರೆ 3ನೇ ಟ್ರೋಫಿ ಗೆದ್ದರು.
₹52.58 ಕೋಟಿ: ಚಾಂಪಿಯನ್ ಆದ ರಬೈಕೆನಾಗೆ ಸಿಕ್ಕ ಪ್ರಶಸ್ತಿ ಮೊತ್ತ.
₹26.75 ಕೋಟಿ: ರನ್ನರ್-ಅಪ್ ಆದ ಸಬಲೆಂಕಾಗೆ ದೊರೆತ ಪ್ರಶಸ್ತಿ ಮೊತ್ತ.
ಯುಎಸ್ ಓಪನ್ ಗೆಲುವಿನೊಂದಿಗೆ ರಬೈಕೆನಾ ವಿಶ್ವ ರ್‍ಯಾಂಕಿಂಗ್ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಲಿದ್ದಾರೆ. ಸೋಮವಾರ ಪರಿಷ್ಕೃತ ಪಟ್ಟಿ ಪ್ರಕಟಗೊಳ್ಳಲಿದೆ. ಸತತ 99 ವಾರ (ಸುಮಾರು 2 ವರ್ಷ) ಅಗ್ರಸ್ಥಾನ ಕಾಯ್ದುಕೊಂಡಿದ್ದ ಸಬಲೆಂಕಾ, 2ನೇ ಸ್ಥಾನಕ್ಕೆ ಕುಸಿಯಲಿದ್ದಾರೆ.
ಎಲೆನಾ ರಬೈಕೆನಾ ಪ್ರಶಸ್ತಿ ಹಾದಿ ಸುಲಭವಾಗಿರಲಿಲ್ಲ. ಅವರಿಗೆ ಪ್ರತಿ ಹಂತದಲ್ಲೂ ಕಠಿಣ ಸವಾಲು ಎದುರಾಯಿತು. ಆದರೆ, ರಬೈಕೆನಾ ಎಲ್ಲವನ್ನೂ ಸಲೀಸಾಗಿ ಎದುರಿಸಿ ಮುಂದೆ ಸಾಗಿದರು. ಪ್ರಶಸ್ತಿ ಹಾದಿಯಲ್ಲಿ ಅವರು ಮೂವರು ಮಾಜಿ ಗ್ರ್ಯಾನ್ ಸ್ಲಾಂ ಚಾಂಪಿಯನ್ನರಾದ ಜಪಾನ್‌ನ ನವೊಮಿ ಒಸಾಕ, ಅಮೆರಿಕದ ಕೊಕೊ ಗಾಫ್ ಹಾಗೂ ಅರೈನಾ ಸಬಲೆಂಕಾರನ್ನು ಸೋಲಿಸಿದರು. ಇನ್ನು, 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಚೀನಾದ ಕಿನ್‌ವೆನ್ ಝೆಂಗ್ ವಿರುದ್ಧವೂ ಜಯಿಸಿದರು.
4 ಗ್ರ್ಯಾನ್‌ಸ್ಲಾಂಗಳ ಒಡತಿ ಅರೈನಾ ಸಬಲೆಂಕಾ 2022ರ ಬಳಿಕ ಮೊದಲ ಬಾರಿಗೆ ಒಂದು ವರ್ಷದಲ್ಲಿ ಒಂದೂ ಗ್ರ್ಯಾನ್ ಸ್ಲಾಂ ಗೆದ್ದಿಲ್ಲ. 2023, 2024ರಲ್ಲಿ ಆಸ್ಟ್ರೇಲಿಯನ್ ಓಪನ್, 2024, 2025ರಲ್ಲಿ ಯುಎಸ್ ಓಪನ್ ಜಯಿಸಿದ್ದರು.
ಅಂಕಣದಲ್ಲಿ ಹಾಗೂ ಅಂಕಣದಾಚೆ ತಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವುದಕ್ಕೆ ಸಬಲೆಂಕಾ ಹೆಸರುವಾಸಿ. ಅದೇ ರೀತಿ, ರಬೈಕೆನಾ ವಿರುದ್ಧ ಸೋಲುತ್ತಿದ್ದಂತೆ ಹತಾಶೆಯಿಂದ ಸಬಲೆಂಕಾ ಅಂಕಣದಲ್ಲೇ ತಮ್ಮ ರಾಕೆಟ್ ಒಡೆದು ಹಾಕಿದರು. ಬಳಿಕ ಕ್ಯಾಮೆರಾಮನ್‌ಗೆ ಅವಾಶ್ಚ್ಯ ಶಬ್ಧದಿಂದ ನಿಂದಿಸಿದರು. ಈ ವಿಡಿಯೋಗಳು ವೈರಲ್ ಆಗಿವೆ. ಈ ಹಿಂದೆಯೂ ಸಬಲೆಂಕಾ ಇಂತಹ ವರ್ತನೆಗಳಿಂದ ವಿವಾದಕ್ಕೀಡಾಗಿದ್ದರು.
ಒಂದು ವರ್ಷದಲ್ಲಿ ಗ್ರ್ಯಾನ್ ಸ್ಲಾಂ ಫೈನಲ್‌ನಲ್ಲಿ 2 ಬಾರಿ ವಿಶ್ವ ನಂ.1 ಆಟಗಾರ್ತಿಯನ್ನು ಸೋಲಿಸಿದ ಕೇವಲ 2ನೇ ಆಟಗಾರ್ತಿ ಎಲೆನಾ ರಬೈಕೆನಾ. 1995ರಲ್ಲಿ ಜರ್ಮನಿಯ ಸ್ಟೆಫಿ ಗ್ರಾಫ್ ಈ ಸಾಧನೆ ಮಾಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.