ಕಾಮನ್‌ವೆಲ್ತ್ ಗೇಮ್ಸ್ ತ್ರಿಪಲ್ ಜಂಪ್‌ನಲ್ಲಿ ಭಾರತಕ್ಕೆ ಚಿನ್ನ, 47 ಪದಕದೊಂದಿಗೆ 5ನೇ ಸ್ಥಾನ!

By Suvarna NewsFirst Published Aug 7, 2022, 7:09 PM IST
Highlights

ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಇದೀಗ ಮತ್ತೊಂದು ಚಿನ್ನದ ಪದಕವನ್ನು ಬಾಚಿಕೊಂಡಿದೆ. 

ಬರ್ಮಿಂಗ್‌ಹ್ಯಾಮ್(ಆ.07): ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪರಾಕ್ರಮ ಮುಂದುವರಿದಿದೆ. ಇದೇ ಮೊದಲ ಬಾರಿಗೆ ಕಾಮನ್‌ವೆಲ್ತ್ ಕ್ರೀಡಾಕೂಟದ ತ್ರಿಪಲ್ ಜಂಪ್‌ನಲ್ಲಿ ಭಾರತ ಚಿನ್ನದ ಪದಕ ಗೆದ್ದುಕೊಂಡಿದೆ. ಕೇರಳದ ಎಲ್ದೋಸ್ ಪೌಲ್ ಫೈನಲ್‌ನ ಮೂರನೇ ಪ್ರಯತ್ನದಲ್ಲಿ 17.03 ಮೀಟರ್ ಉದ್ದ ಜಿಗಿಯುವ ಮೂಲಕ ವೈಯುಕ್ತಿ ದಾಖಲೆ ಬರೆದರು. ಈ ಮೂಲಕ ಭಾರತ ಟ್ರಾಕ್ ಅಂಡ್ ಫೀಲ್ಡ್‌ನಲ್ಲಿ ಚಿನ್ನದ ಪದಕದ ಸಾಧನೆ ಮಾಡಿತು. ಕೇರಳದ ಅಬ್ದುಲ್ಲಾ ಅಬೂಬ್ಬಕರ್ 17.02 ಮೀಟರ್ ದೂರ ಜಿಗಿಯುವ ಮೂಲಕ ಬೆಳ್ಳಿ ಪದಕ ಗೆದ್ದುಕೊಂಡರು. ಇನ್ನು ಬರ್ಮುಡಾದ ಜಾಲ್ ನಾಲ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.  ಭಾರತ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ ತ್ರಿಪಲ್ ಜಂಪ್ ವಿಭಾಗದಲ್ಲಿ ಇದುವರೆಗೆ 4 ಪದಕ ಗೆದ್ದುಕೊಂಡಿದೆ. ಆದರೆ ಇದೇ ಮೊದಲ ಬಾರಿಗೆ ಚಿನ್ನ ಹಾಗೂ ಬೆಳ್ಳಿ ಪದಕ ಗೆದ್ದ ದಾಖಲೆ ಬರೆದಿದೆ.

ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ ತ್ರಿಪಲ್ ಜಂಪ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಕ್ರೀಡಾಪಟು ಅನ್ನೋ ಹೆಗ್ಗಳಿಕೆಗೆ ಎಲ್ಡೋಸ್ ಪೌಲ್ ಪಾತ್ರರಾಗಿದ್ದರು. ಇದೀಗ ಫೈನಲ್‌ನಲ್ಲಿ ಚಿನ್ನ ಗೆದ್ದು ಹೊಸ ದಾಖಲೆ ನಿರ್ಮಿಸಿದ್ದಾರೆ. ಭಾರತೀಯ ನೌಕಾಪಡೆಯಲ್ಲಿ ಉದ್ಯೋಗಿಯಾಗಿರುವ ಎಲ್ದೋಸ್ ಪೌಲ್,  ಬೆಂಗಳೂರಿನ ಸಾಯಿ ಕೇಂದ್ರದಲ್ಲಿ ಎಂ ಹರಿಕೃಷ್ಣ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ.

ಪೂಜಾ ಗೆಹ್ಲೋಟ್‌ ಸಂತೈಸಿದ ಪ್ರಧಾನಿ: ಸಾಮಾಜಿಕ ಜಾಲತಾಣದಲ್ಲಿ ‘ನಮೋ’ಗೆ ಪ್ರಶಂಸೆಯ ಸುರಿಮಳೆ

ಎಲ್ದೋಸ್ ಪೌಲ್ ಚಿನ್ನ ಹಾಗೂ ಅಬ್ದುಲ್ ಅಬೂಬ್ಬಕರ್ ಬೆಳ್ಳಿ ಪದಕದೊಂದಿಗೆ ಭಾರತ ಕಾಮನ್‌ವೆಲ್ತ್ ಗೇಮ್ಸ್ 2022ರ ಪದಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಭಾರತ ಇದುವರೆಗೆ 16 ಚಿನ್ನ, 12 ಬೆಳ್ಳಿ ಹಾಗೂ 19 ಕಂಚಿನ ಪದಕದೊಂದಿಗೆ ಒಟ್ಟು 47 ಪದಕಗಳನ್ನು ಗೆದ್ದುಕೊಂಡಿದೆ. ಪದಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಆಸ್ಟ್ರೇಲಿಯಾ 61 ಚಿನ್ನ, 51 ಬೆಳ್ಳಿ ಹಾಗೂ 52 ಕಂಚಿನ ಪದಕದೊಂದಿಗೆ, ಒಟ್ಟು 164 ಪದಕಗಳನ್ನು ಗೆದ್ದುಕೊಂಡಿದೆ. ಇಂಗ್ಲೆಂಡ್, ಕೆನಡಾ ಹಾಗೂ ನ್ಯೂಜಿಲೆಂಡ್ ಕ್ರಮವಾಗಿ 2, 3 ಮತ್ತು 4ನೇ ಸ್ಥಾನದಲ್ಲಿದೆ.

Commonwealth Games: ಕಂಚಿನ ಪದಕಕ್ಕೆ ಮುತ್ತಿಕ್ಕಿದ ಭಾರತ ಮಹಿಳಾ ಹಾಕಿ ತಂಡ

200 ಮೀ. ಓಟ: ಫೈನಲ್‌ ಪ್ರವೇಶಿಸಲು ಹಿಮಾ ವಿಫಲ
ಭಾರತದ ತಾರಾ ಓಟಗಾರ್ತಿ ಹಿಮಾ ದಾಸ್‌ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಮಹಿಳೆಯರ 200 ಮೀ. ಸ್ಪರ್ಧೆಯಲ್ಲಿ ಫೈನಲ್‌ ತಲುಪಲು ವಿಫಲರಾಗಿದ್ದಾರೆ. ಅಸ್ಸಾಂನ 22 ವರ್ಷದ ಹಿಮಾ 2ನೇ ಸೆಮಿಫೈನಲ್‌ನಲ್ಲಿ 23.42 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಅವರು ಕೇವಲ 0.01 ಸೆಕೆಂಡ್‌ಗಳ ಅಂತರದಲ್ಲಿ ಪದಕ ಸುತ್ತು ಪ್ರವೇಶಿಸುವ ಅವಕಾಶ ಕಳೆದುಕೊಂಡರು. ಸೆಮೀಸ್‌ನಲ್ಲಿ ಮೂರು ಹೀಟ್ಸ್‌ನಲ್ಲಿ ಸ್ಪರ್ಧೆ ನಡೆದಿದ್ದು, ಪ್ರತೀ ಹೀಟ್ಸ್‌ನಿಂದ ಅಗ್ರ ಇಬ್ಬರು ಫೈನಲ್‌ಗೆ ಅರ್ಹತೆ ಪಡೆಯಲಿದ್ದಾರೆ.

ಲಾನ್‌ಬೌಲ್ಸ್‌ ಬೆಳ್ಳಿ ಗೆದ್ದ ಭಾರತ ಪುರುಷರ ತಂಡ
ಕಾಮನ್‌ವೆಲ್ತ್‌ ಲಾನ್‌ ಬೌಲ್ಸ್‌ನಲ್ಲಿ ಮಹಿಳೆಯರ ಚಿನ್ನದ ಸಾಧನೆ ಬಳಿಕ ಭಾರತೀಯ ಪುರುಷರ ತಂಡ ಐತಿಹಾಸಿಕ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದೆ. ಶನಿವಾರ ನಡೆದ ಪುರುಷರ ನಾಲ್ವರ ತಂಡ ವಿಭಾಗದ ಫೈನಲ್‌ನಲ್ಲಿ ಸುನಿಲ್‌ ಬಹದೂರ್‌, ನವನೀತ್‌ ಸಿಂಗ್‌, ಚಂದನ್‌ ಕುಮಾರ್‌ ಹಾಗೂ ದಿನೇಶ್‌ ಕುಮಾರ್‌ ಅವರನ್ನೊಳಗೊಂಡ ತಂಡ ನಾರ್ಥೆರ್ನ್‌ ಐರ್ಲೆಂಡ್‌ ವಿರುದ್ಧ 5-18ರಿಂದ ಸೋತು ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತು. ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಲಾನ್‌ ಬೌಲ್ಸ್‌ ಕ್ರೀಡೆಯಲ್ಲಿ ದೊರೆತ 2ನೇ ಪದಕವಿದು ಎನ್ನುವುದು ಬಹಳ ವಿಶೇಷ. ಇತ್ತೀಚೆಗಷ್ಟೇ ಭಾರತ ಮಹಿಳಾ ತಂಡ ಲಾನ್‌ಬೌನ್ಸ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿತ್ತು.

click me!