
ಬಾಲಿ(ಡಿ.06): ಹಾಲಿ ವಿಶ್ವ ಚಾಂಪಿಯನ್, ಭಾರತದ ಪಿ.ವಿ.ಸಿಂಧು (PV Sindhu) ಬ್ಯಾಡ್ಮಿಂಟನ್ ವಿಶ್ವ ಟೂರ್ ಫೈನಲ್ಸ್ (BWF World Tour Finals) ಟೂರ್ನಿಯಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ 2 ಬಾರಿ ಒಲಿಂಪಿಕ್ ಪದಕ ವಿಜೇತೆ ಸಿಂಧು, ದಕ್ಷಿಣ ಕೊರಿಯಾದ 19 ವರ್ಷದ ಆ್ಯನ್ ಸೆ ಯಂಗ್ (An Seyoung) ವಿರುದ್ಧ 16-21, 12-21 ನೇರ ಗೇಮ್‌ಗಳಲ್ಲಿ ಸೋಲು ಅನುಭವಿಸಿದರು. ಈ ಗೆಲುವಿನೊಂದಿಗೆ ಆ್ಯನ್ ಸೆ ಯಂಗ್, ಋುತು ಅಂತ್ಯದ ಟೂರ್ನಿ ಗೆದ್ದ ದಕ್ಷಿಣ ಕೊರಿಯಾದ ಮೊದಲ ಮಹಿಳಾ ಆಟಗಾರ್ತಿ ಎನ್ನುವ ಹಿರಿಮೆಗೆ ಪಾತ್ರರಾದರು.
40 ನಿಮಿಷಗಳ ಕಾಲ ನಡೆದ ಏಕಪಕ್ಷೀಯ ಪಂದ್ಯದಲ್ಲಿ ವಿಶ್ವ ನಂ.6 ಆ್ಯನ್ ಸೆ ಯಂಗ್‌ರ ವೇಗಕ್ಕೆ ಸರಿಹೊಂದುವ ಆಟವನ್ನು ಆಡುವಲ್ಲಿ ಸಿಂಧು ವಿಫಲರಾದರು. ದಕ್ಷಿಣ ಕೊರಿಯಾ ಆಟಗಾರ್ತಿ ವಿರುದ್ಧ 3ನೇ ಬಾರಿಗೆ ಆಡಿದ ಸಿಂಧು, ಎಲ್ಲಾ ಮೂರೂ ಪಂದ್ಯಗಳಲ್ಲಿ ನೇರ ಗೇಮ್‌ಗಳಲ್ಲಿ ಸೋಲುಂಡಿದ್ದಾರೆ.
ಪಂದ್ಯದ ಎರಡೂ ಗೇಮ್‌ಗಳಲ್ಲಿ ದಕ್ಷಿಣ ಕೊರಿಯಾದ ಸೆ ಯಂಗ್ ಆರಂಭಿಕ ಮುನ್ನಡೆ ಸಾಧಿಸಿದರು. ದೊಡ್ಡ ಅಂತರ ಕಾಯ್ದುಕೊಳ್ಳುವ ಮೂಲಕ ಸಿಂಧುಗೆ ಪುಟಿದೇಳಲು ಅವಕಾಶ ನೀಡಲಿಲ್ಲ. ಮೊದಲ ಗೇಮ್‌ನಲ್ಲಿ ಆರಂಭದಲ್ಲೇ 0-4ರಲ್ಲಿ ಮುನ್ನಡೆ ಸಾಧಿಸಿದ ಕೊರಿಯಾ ಆಟಗಾರ್ತಿ, ಬಿಡುವಿನ ಬಳಿಕ ತಮ್ಮ ಮುನ್ನಡೆಯನ್ನು 16-8ಕ್ಕೆ ಹೆಚ್ಚಿಸಿಕೊಂಡರು. ಸಿಂಧು ಕೆಲ ಅಂಕಗಳನ್ನು ಗಳಿಸಿ ಸಮಬಲ ಸಾಧಿಸಲು ಯತ್ನಿಸಿದರಾದರೂ ಆ್ಯನ್ ಸೆ ಯಂಗ್ 8 ಗೇಮ್ ಅಂಕಗಳನ್ನು ಕಲೆಹಾಕಿದರು. 4 ಗೇಮ್ ಪಾಯಿಂಟ್‌ಗಳನ್ನು ರಕ್ಷಿಸಿಕೊಂಡ ಸಿಂಧು, 5 ಅಂಕಗಳಲ್ಲಿ ಗೇಮ್ ಬಿಟ್ಟುಕೊಟ್ಟರು. 2ನೇ ಗೇಮ್‌ನಲ್ಲಿ ಸಿಂಧು 5-4ರ ಮುನ್ನಡೆ ಸಾಧಿಸಲು ಸಫಲರಾದರೂ, ಆ್ಯನ್ ಸೆ ಯಂಗ್‌ಗೆ ಮುನ್ನಡೆ ಕಸಿದುಕೊಳ್ಳಲು ಹೆಚ್ಚು ಸಮಯ ಬೇಕಾಗಲಿಲ್ಲ. ಬಿಡುವಿನ ವೇಳೆಗೆ 11-8ರಿಂದ ಮುಂದಿದ್ದ ದಕ್ಷಿಣ ಕೊರಿಯಾ ಆಟಗಾರ್ತಿ ಆ್ಯನ್ ಸೆ ಯಂಗ್, ಆ ಮುನ್ನಡೆಯನ್ನು 15-8ಕ್ಕೆ ಹೆಚ್ಚಿಸಿಕೊಂಡರು. ಬಳಿಕ 10 ಮ್ಯಾಚ್ ಪಾಯಿಂಟ್‌ಗಳ ಮುನ್ನಡೆ ಪಡೆದು ಗೇಮ್ ಜಯಿಸಿ ಪಂದ್ಯ ತಮ್ಮದಾಗಿಸಿಕೊಂಡು ಗೆಲುವಿನ ನಗೆ ಬೀರಿದರು.
BWF World Tour Finals: ರೋಚಕವಾಗಿ ಫೈನಲ್‌ಗೆ ಲಗ್ಗೆಯಿಟ್ಟ ಪಿ ವಿ ಸಿಂಧು
2018ರಲ್ಲಿ ಚಾಂಪಿಯನ್ ಆಗಿದ್ದ ಸಿಂಧು, 3ನೇ ಬಾರಿಗೆ ವಿಶ್ವ ಟೂರ್ ಫೈನಲ್ಸ್‌ನ ಫೈನಲ್‌ನಲ್ಲಿ ಆಡಿದರು. ಡಿಸೆಂಬರ್ 12ರಿಂದ ಸ್ಪೇನ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ (Badminton World Championship) ಸಿಂಧು ಕಣಕ್ಕಿಳಿಯಲಿದ್ದು ತಮ್ಮ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಹೋರಾಟ ನಡೆಸಲಿದ್ದಾರೆ.
ಟೆನಿಸ್: ಪ್ರಾಂಜಲಾ ಸಿಂಗಲ್ಸ್ ಚಾಂಪಿಯನ್
ಬೆಂಗಳೂರು: ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಆಶ್ರಯದಲ್ಲಿ ನಡೆದ ಮಹಿಳಾ ಐಟಿಎಫ್ ವಿಶ್ವ ಟೂರ್ ಚಾಂಪಿಯನ್‌ಶಿಪ್‌ನ (ITF World Tour Championship) ಸಿಂಗಲ್ಸ್ ವಿಭಾಗದಲ್ಲಿ ಭಾರತದ ಪ್ರಾಂಜಲಾ ಯಡ್ಲಪಳ್ಳಿ ಪ್ರಶಸ್ತಿ ಜಯಿಸಿದ್ದಾರೆ.
shine on field: ಚಿನ್ನದ ಹುಡುಗನ ಮತ್ತೆ ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ
ಭಾನುವಾರ ನಡೆದ ಫೈನಲ್‌ನಲ್ಲಿ ಭಾರತದವರೇ ಆದ ಸೌಜನ್ಯ ಭವಿಸೆಟ್ಟಿವಿರುದ್ಧ 7-5, 6-2 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. 22 ವರ್ಷದ ಪ್ರಾಂಜಲಾಗೆ ಇದು ವೃತ್ತಿಬದುಕಿನ 4ನೇ ಐಟಿಎಫ್ ಪ್ರಶಸ್ತಿ. ಚಾಂಪಿಯನ್ ಪ್ರಾಂಜಲಾ 1.7 ಲಕ್ಷ ರು. ಬಹುಮಾನ ಮೊತ್ತ ಪಡೆದರು. ಜೊತೆಗೆ 10 ವಿಶ್ವ ರಾರಯಂಕಿಂಗ್ ಅಂಕಗಳನ್ನು ಸಂಪಾದಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.