BWF Badminton World Tour Finals: ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಪಿ.ವಿ.ಸಿಂಧು, ಲಕ್ಷ್ಯ ಸೆನ್‌

By Suvarna News  |  First Published Dec 3, 2021, 12:50 PM IST

* BWF Badminton World Tour Finals ಟೂರ್ನಿಯಲ್ಲಿ ಭಾರತೀಯರ ಶುಭಾರಂಭ

* ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಪಿ ವಿ ಸಿಂಧು, ಲಕ್ಷ್ಯ ಸೆನ್

* ಕಿದಂಬಿ ಶ್ರೀಕಾಂತ್ ಸೆಮೀಸ್ ಹಾದಿ ಮತ್ತಷ್ಟು ದುರ್ಗಮ


ಬಾಲಿ(ಡಿ.03): ಹಾಲಿ ವಿಶ್ವ ಚಾಂಪಿಯನ್‌, ಭಾರತದ ಪಿ.ವಿ.ಸಿಂಧು (PV Sindhu) ಹಾಗೂ 20 ವರ್ಷದ ಲಕ್ಷ್ಯ ಸೆನ್‌ (Lakshya Sen) ಬ್ಯಾಡ್ಮಿಂಟನ್‌ ವಿಶ್ವ ಟೂರ್‌ ಫೈನಲ್ಸ್‌ ಟೂರ್ನಿಯಲ್ಲಿ (BWF Badminton World Tour Finals) ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಆದರೆ ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್‌ (Kidambi Srikanth) ಸೆಮಿಫೈನಲ್‌ ಹಾದಿ ಕಠಿಣಗೊಂಡಿದೆ. ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ನ 2ನೇ ಪಂದ್ಯದಲ್ಲಿ ಸಿಂಧು, ಜರ್ಮನಿಯ ವೊನ್ನೆ ವಿರುದ್ಧ ಗೆದ್ದು ‘ಎ’ ಗುಂಪಿನಲ್ಲಿ ಅಗ್ರ 2ರಲ್ಲಿ ಸ್ಥಾನ ಖಚಿತಪಡಿಸಿಕೊಂಡರು. ಕೊನೆಯ ಪಂದ್ಯದಲ್ಲಿ ಅವರು ಥಾಯ್ಲೆಂಡ್‌ನ ಚೊಚುವಾಂಗ್‌ ವಿರುದ್ಧ ಸ್ಪರ್ಧಿಸಲಿದ್ದಾರೆ.

ಇನ್ನು ಪುರುಷರ ಸಿಂಗಲ್ಸ್‌ನ ‘ಎ’ ಗುಂಪಿನಲ್ಲಿ ಕೆಂಟೊ ಮೊಮಟಾ, ರಾಸ್ಮಸ್‌ ಗೆಮ್ಕೆ ಗಾಯದ ಕಾರಣದಿಂದ ಟೂರ್ನಿಯಿಂದ ಹೊರಬಿದ್ದಿದ್ದರಿಂದ ಅಗ್ರ 2ರಲ್ಲಿ ಸ್ಥಾನ ಭದ್ರಪಡಿಸಿಕೊಂಡಿರುವ ಲಕ್ಷ್ಯ, ಸೆಮೀಸ್‌ಗೂ ಮುನ್ನ ಹಾಲಿ ಒಲಿಂಪಿಕ್‌ ಚಾಂಪಿಯನ್‌ ಡೆನ್ಮಾರ್ಕ್ನ ವಿಕ್ಟರ್‌ ಅಕ್ಸೆಲ್ಸನ್‌ ವಿರುದ್ಧ 15-21, 14-21 ಗೇಮ್‌ಗಳಲ್ಲಿ ಸೋಲನುಭವಿಸಿದರು.

Latest Videos

undefined

ಇದಕ್ಕೂ ಮೊದಲು ಶ್ರೀಕಾಂತ್‌ ‘ಬಿ’ ಗುಂಪಿನ 2ನೇ ಪಂದ್ಯದಲ್ಲಿ 3 ಬಾರಿ ವಿಶ್ವ ಕಿರಿಯರ ಚಾಂಪಿಯನ್‌, ಥಾಯ್ಲೆಂಡ್‌ನ ಕುನ್ಲವುಟ್‌ ವಿರುದ್ಧ 18-21, 7-21ರಲ್ಲಿ ಸೋತರು. ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ಜೋಡಿ 2ನೇ ಪಂದ್ಯದಲ್ಲಿ ಬಲ್ಗೇರಿಯಾ ಜೋಡಿಗೆ ಶರಣಾದರೆ, ಸಾತ್ವಿಕ್‌ ಸಾಯಿರಾಜ್‌ ಮಂಡಿ ನೋವಿನಿಂದ ಬಳಲುತ್ತಿರುವ ಕಾರಣ ಪುರುಷರ ಡಬಲ್ಸ್‌ನಿಂದ ತಮ್ಮ ಜೊತೆಗಾರ ಚಿರಾಗ್‌ ಶೆಟ್ಟಿಯೊಂದಿಗೆ ಟೂರ್ನಿಯಿಂದ ಹೊರಬಿದ್ದರು.

ಟೆನಿಸ್‌: ವೈದೇಹಿ, ಸೌಜನ್ಯ ಕ್ವಾರ್ಟರ್‌ಫೈನಲ್‌ ಪ್ರವೇಶ

ಬೆಂಗಳೂರು: ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆ(ಕೆಎಸ್‌ಎಲ್‌ಟಿಎ) ಆಶ್ರಯದಲ್ಲಿ ನಡೆಯುತ್ತಿರುವ ಐಟಿಎಫ್‌ ಮಹಿಳಾ ವಿಶ್ವ ಟೂರ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ವೈದೇಹಿ ಚೌಧರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಅವರ ಜೊತೆಗೆ ಸೌಜನ್ಯ, ರುತುಜಾ ಬೋಸಲೆ, ಶ್ರೀವಳ್ಳಿ ರಶ್ಮಿಕಾ, ಆಕಾಂಕ್ಷಾ ದಿಲೀಪ್‌, ಪ್ರತ್ಯೂಷಾ, ಪ್ರಾಂಜಲ ಯಡಪಲ್ಲಿ ಕೂಡಾ ಅಂತಿಮ 8ರ ಘಟ್ಟಪ್ರವೇಶಿಸಿದರು. ಇನ್ನು, ಡಬಲ್ಸ್‌ನಲ್ಲಿ ಶರ್ಮದಾ ಬಾಲು-ಶ್ರವ್ಯಾ ಶಿವಾನಿ, ವೈದೇಹಿ-ಮನಿಕಾ, ಸುಮ್ಹಿತಾ-ಸಾದಿಕ್‌ ಸೋಹ ಜೋಡಿಗಳು ಸೆಮಿಫೈನಲ್‌ ಪ್ರವೇಶಿಸಿವೆ.

ಏಷ್ಯನ್‌ ಸ್ಕ್ವಾಶ್‌‌: ಭಾರತ ತಂಡಗಳು ಸೆಮೀಸ್‌ಗೆ

ಕೌಲಾಲಂಪುರ: 20ನೇ ಆವೃತ್ತಿಯ ಏಷ್ಯನ್‌ ಸ್ಕ್ವಾಶ್‌ ಟೀಂ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪುರುಷ ಹಾಗೂ ಮಹಿಳಾ ತಂಡಗಳು ಸೆಮಿಫೈನಲ್‌ ಪ್ರವೇಶಿಸಿವೆ. ಗುರುವಾರ ನಡೆದ ಪುರುಷರ ವಿಭಾಗದ ಪಂದ್ಯದಲ್ಲಿ ಭಾರತ, ಇಂಡೋನೇಷ್ಯಾ ವಿರುದ್ಧ 3-0 ಅಂತರದಲ್ಲಿ ಗೆಲುವು ಸಾಧಿಸಿತು.

Pro Kabaddi League:ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಪ್ರಕಟ, ಡಿ.22ರಿಂದ ಬೆಂಗಳೂರಿನಲ್ಲಿ ಟೂರ್ನಿ ಆರಂಭ!

ಇದರೊಂದಿಗೆ ಐದು ಗೆಲುವಿನೊಂದಿಗೆ ‘ಎ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಅಂತಿಮ 4ರ ಘಟ್ಟತಲುಪಿತು. ಭಾರತ ಮಹಿಳಾ ತಂಡ ಇರಾನ್‌ ವಿರುದ್ಧ 3-0 ಅಂತರದಲ್ಲಿ ಗೆದ್ದು, ‘ಬಿ’ ಗುಂಪಿಯನಲ್ಲಿ ದ್ವಿತೀಯ ಸ್ಥಾನಿಯಾಗಿ ಸೆಮೀಸ್‌ ಪ್ರವೇಶಿಸಿತು. ಪುರುಷ ಹಾಗೂ ಮಹಿಳಾ ತಂಡಗಳು ಸೆಮಿಫೈನಲ್‌ನಲ್ಲಿ ಶುಕ್ರವಾರ ಹಾಲಿ ಚಾಂಪಿಯನ್‌ ಹಾಂಕಾಂಗ್‌ ವಿರುದ್ಧ ಸ್ಪರ್ಧಿಸಲಿವೆ.

ಡೇವಿಸ್‌ ಕಪ್‌: ಸೆಮೀಸ್‌ ಪ್ರವೇಶಿಸಿದ ಸರ್ಬಿಯಾ

ಮ್ಯಾಡ್ರಿಡ್‌: ಮಾಜಿ ಚಾಂಪಿಯನ್‌ ಸರ್ಬಿಯಾ ಡೇವಿಸ್‌ ಕಪ್‌ ಟೆನಿಸ್‌ ಟೂರ್ನಿಯಲ್ಲಿ (Davis Cup Tennis Tournament) ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಬುಧವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಸರ್ಬಿಯಾ, ಕಜಕಸ್ತಾನ ವಿರುದ್ಧ 2-1 ಅಂತರದಲ್ಲಿ ಗೆಲುವು ಸಾಧಿಸಿತು. ಮೊದಲ ಸಿಂಗಲ್ಸ್‌ ಪಂದ್ಯದಲ್ಲಿ ಸೋತು ಹಿನ್ನಡೆ ಅನುಭವಿಸಿದ ಸರ್ಬಿಯಾಗೆ ವಿಶ್ವ ನಂ.1 ನೋವಾಕ್‌ ಜೋಕೋವಿಚ್‌ ಆಸರೆಯಾದರು.

2ನೇ ಸಿಂಗಲ್ಸ್‌ ಪಂದ್ಯದಲ್ಲಿ ಅಲೆಕ್ಸಾಂಡರ್‌ ಬುಬ್ಲಿಕ್‌ ವಿರುದ್ಧ ಗೆದ್ದ ಜೋಕೋ, ನಿಕೋಲ ಕಾಸಿಕ್‌ ಜೊತೆಗೂಡಿ ಕಜಕಸ್ತಾನದ ಆ್ಯಂಡ್ರೆ ಗೊಲುಬೇವ್‌-ಅಲೆಕ್ಸಾಂಡರ್‌ ಜೋಡಿಯನ್ನು ಡಬಲ್ಸ್‌ ಪಂದ್ಯದಲ್ಲಿ ಸೋಲಿಸಿದರು. ಸೆಮಿಫೈನಲ್‌ನಲ್ಲಿ ಸರ್ಬಿಯಾ, 2 ಬಾರಿಯ ಚಾಂಪಿಯನ್‌ ಕ್ರೊವೇಷಿಯಾ ವಿರುದ್ಧ ಶುಕ್ರವಾರ ಸೆಣಸಲಿದೆ.

 

click me!