
ಬೆಂಗಳೂರು(ಫೆ.11): ಭಾರತದ ತಾರಾ ಟೆನಿಸಿಗರಾದ ಸಾಕೇತ್ ಮೈನೇನಿ ಹಾಗೂ ಶಶಿಕುಮಾರ್ ಮುಕುಂದ್, ಎಟಿಪಿ ಚಾಲೆಂಜರ್ ಟೂರ್ ಬೆಂಗಳೂರು ಓಪನ್ 3ನೇ ಆವೃತ್ತಿಯ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಕೋರ್ಟ್‌ನಲ್ಲಿ ಸೋಮವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಸಾಕೇತ್ 6-3, 6-3 ನೇರ ಸೆಟ್‌ಗಳಿಂದ 257ನೇ ರ‍್ಯಾಂಕಿಂಗ್ ರಷ್ಯಾದ ಅಸ್ಲಾನ್ ಕರಾಟ್ಸೆವ್ ವಿರುದ್ಧ ಸುಲಭ ಜಯ ಸಾಧಿಸಿದರು. 1 ಗಂಟೆ 3 ನಿಮಿಷಗಳ ಹೋರಾಟದಲ್ಲಿ ಸಾಕೇತ್ ಅದ್ಭುತ ಆಟದ ಮೂಲಕ ಗಮನಸೆಳೆದರು. ಆರಂಭದಲ್ಲೇ ಆಕ್ರಮಣಾಕಾರಿ ಆಟಕ್ಕೆ ಮುಂದಾಗಿದ್ದ 32 ವರ್ಷದ ಹಿರಿಯ ಆಟಗಾರ ಸಾಕೇತ್, ಮೊದಲ ಸೆಟ್‌ನ 6ನೇ ಗೇಮ್‌ನಲ್ಲಿ ಸರ್ವ್ ಬ್ರೇಕ್ ಮಾಡುವ ಮೂಲಕ 5-2ರಲ್ಲಿ ಮುನ್ನಡೆ ಪಡೆದರು. ನಂತರ ಎದುರಾಳಿ ಆಟಗಾರನಿಂದ 3-5ರಿಂದ ಪ್ರತಿರೋಧ ಎದಾರಾಯಿತು. ಆದರೂ ಬಿಗಿಹಿಡಿತ ಸಾಧಿಸಿದ ಸಾಕೇತ್ ಕೇವಲ 32 ನಿಮಿಷಗಳ ಆಟದಲ್ಲಿ ಮೊದಲ ಸೆಟ್ ಗೆದ್ದರು.
2ನೇ ಸೆಟ್‌ನಲ್ಲಿ ರಷ್ಯಾ ಆಟಗಾರನಿಂದ ಪ್ರಬಲ ಪೈಪೋಟಿ ಎದುರಾಯಿತು. ಒಂದು ಹಂತದಲ್ಲಿ ಉಭಯ ಆಟಗಾರರು 3-3ರಲ್ಲಿ ಸಮಬಲದ ಹೋರಾಟ ತೋರಿದರು. ಭಾರತೀಯ ಆಟಗಾರನ ಆಕರ್ಷಕ ಸರ್ವ್‌ಗಳಿಗೆ ಬೆಚ್ಚಿದ ರಷ್ಯಾ ಆಟಗಾರ ಹಿನ್ನಡೆ ಅನುಭವಿಸಿದರು. ಸಾಕೇತ್ ಗಂಟೆಗೆ 211ಕಿ.ಮೀ. ವೇಗದಲ್ಲಿ ಸರ್ವ್ ಮಾಡುವ ಮೂಲಕ ಗಮನಸೆಳೆದರು. 7 ಮತ್ತು 9ನೇ ಗೇಮ್‌ನಲ್ಲಿ ರಷ್ಯಾ ಆಟಗಾರನ ಸವ್‌ರ್ ಬ್ರೇಕ್ ಮಾಡುವುದರೊಂದಿಗೆ 6-3ರಲ್ಲಿ ಸೆಟ್ ಜಯಿಸಿದರು. ವಿಶ್ವದ 427ನೇ ರ‍್ಯಾಂಕಿಂಗ್‌ನ ಸಾಕೇತ್, 2ನೇ ಸುತ್ತಿನಲ್ಲಿ ಮಂಗಳವಾರ ಟೂರ್ನಿಯ 6ನೇ ಶ್ರೇಯಾಂಕಿತ ರಷ್ಯಾದ ಎವ್ಗೆನಿ ಡಾನ್ಸ್ಕಾಯ್ ಎದುರು ಸೆಣಸಲಿದ್ದಾರೆ.
ವಿಶ್ವದ 298ನೇ ರ‍್ಯಾಂಕಿಂಗ್ ಹೊಂದಿರುವ ಭಾರತದ ಶಶಿಕುಮಾರ್, ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ರಷ್ಯಾದ ಬ್ಲೇಜ್ ಕಾವ್ಚಿಕ್ ವಿರುದ್ಧ ಪ್ರಯಾಸದ ಗೆಲುವು ಪಡೆದರು. 1 ಗಂಟೆ 56 ನಿಮಿಷ, 53 ಸೆಕೆಂಡ್ ನಡೆದ ಈ ಪಂದ್ಯದಲ್ಲಿ ಚೆನ್ನೈನ ಮುಕುಂದ್ 2-6, 6-3, 6-4 ಸೆಟ್‌ಗಳಿಂದ ರಷ್ಯಾ ಆಟಗಾರನಿಗೆ ಆಘಾತ ನೀಡಿದರು.
ರಾಜ್ಯದ ಸೂರಜ್‌ಗೆ ಸೋಲು:
ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಕರ್ನಾಟಕದ ಸೂರಜ್ ಪ್ರಬೋಧ್ ಸೋಲು ಕಂಡಿದ್ದಾರೆ. ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದ ಸೂರಜ್ ಮೊದಲ ಸುತ್ತಲ್ಲಿ ಉಕ್ರೇನ್‌ನ ವ್ಲಾಡಿಸ್ಲೋವ್ ಒರ್ಲೋವ್ ವಿರುದ್ಧ 2-6, 2-6 ಸೆಟ್‌ಗಳಲ್ಲಿ ಪರಾಭವ ಹೊಂದಿದರು. ಭಾರತದ ಎಸ್.ಡಿ. ಪ್ರಜ್ವಲ್ ದೇವ್, ಉಜ್ಬೇಕಿಸ್ತಾನದ ಸುಲ್ತಾನೊವ್ ವಿರುದ್ಧ 2-6, 1-6 ಸೆಟ್‌ಗಳಿಂದ, ಅರ್ಜುನ್ ಖಾಡೆ, ಟ್ಯುನಿಶಿಯಾದ ಜಝಿರಿ ವಿರುದ್ಧ 2-6, 6(5)-7 ಸೆಟ್‌ಗಳಿಂದ ಸೋಲುಂಡು ನಿರಾಸೆ ಅನುಭವಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.