Novak Djokovic: ಜೋಕೋ ವೀಸಾ ರದ್ದು ಮಾಡಿದ ಆಸ್ಟ್ರೇಲಿಯಾ

Suvarna News   | Asianet News
Published : Jan 07, 2022, 09:11 AM ISTUpdated : Jan 07, 2022, 10:44 AM IST
Novak Djokovic: ಜೋಕೋ ವೀಸಾ ರದ್ದು ಮಾಡಿದ ಆಸ್ಟ್ರೇಲಿಯಾ

ಸಾರಾಂಶ

* ಆಸ್ಟ್ರೇಲಿಯನ್ ಓಪನ್‌ಗೆ ಪಾಲ್ಗೊಳ್ಳುವ ನಿರೀಕ್ಷೆಯಲ್ಲಿದ್ದ ನೊವಾಕ್ ಜೋಕೋವಿಚ್‌ಗೆ ನಿರಾಸೆ * ಮೆಲ್ಬೊರ್ನ್‌ ವಿಮಾನ ನಿಲ್ದಾಣದಲ್ಲೇ ಜೋಕೋಗೆ ಅಡ್ಡಗಾಲು * ಜನವರಿ 13ರಿಂದ ಆರಂಭವಾಗಲಿದೆ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ

ಮೆಲ್ಬರ್ನ್(ಜ.07)‌: ವೀಸಾ ರದ್ದುಗೊಳಿಸಿ ತಮ್ಮನ್ನು ಮೆಲ್ಬರ್ನ್‌ ವಿಮಾನ ನಿಲ್ದಾಣದಲ್ಲಿ ತಡೆದಿದ್ದಕ್ಕೆ 20 ಗ್ರ್ಯಾನ್‌ ಸ್ಲಾಂ ವಿಜೇತ, ವಿಶ್ವ ನಂ.1 ಟೆನಿಸಿಗ ನೋವಾಕ್‌ ಜೋಕೋವಿಚ್‌ (Novak Djokovic) ಆಸ್ಪ್ರೇಲಿಯಾ ಸರ್ಕಾರದ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಆಸ್ಪ್ರೇಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ (Australian Open Tennis Tournament) ಪಾಲ್ಗೊಳ್ಳಲು ಜೋಕೋವಿಚ್‌ ವೈದ್ಯಕೀಯ ಅನುಮತಿ ಪಡೆದು ಮೆಲ್ಬರ್ನ್‌ಗೆ ಆಗಮಿಸಿದ್ದರೂ, ವೀಸಾ ಸಮಸ್ಯೆಯಿಂದಾಗಿ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲೇ ತಡೆದಿದ್ದರು.

ಇದರ ವಿರುದ್ಧ ಜೋಕೋವಿಚ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಲಾಗಿದೆ. ಅಲ್ಲಿಯವರೆಗೂ ಜೋಕೋವಿಚ್‌ ಮೆಲ್ಬರ್ನ್‌ನ ಹೋಟೆಲ್‌ನಲ್ಲೇ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೂ ಮೊದಲು ವೀಸಾ ಸಮಸ್ಯೆಯ ಬಗ್ಗೆ ಜೋಕೋವಿಚ್‌, ಸರ್ಬಿಯಾ ಅಧ್ಯಕ್ಷ ಅಲೆಕ್ಸಾಂಡರ್‌ ವುಸಿಕ್‌ಗೆ ಕರೆ ಮಾಡಿ ದೂರು ನೀಡಿದ್ದರು. ‘ಜೋಕೋವಿಚ್‌ ಮೇಲಿನ ಕಿರುಕುಳ ತಡೆಯಲು ಸರ್ಕಾರ ಎಲ್ಲಾ ಕ್ರಮ ಕೈಗೊಳ್ಳಲಿದೆ. ಸರ್ಬಿಯಾ ಜೋಕೋವಿಚ್‌ ಪರ ನಿಲ್ಲಲಿದೆ ಮತ್ತು ಅವರಿಗಾಗಿ ಹೋರಾಡಲಿದೆ’ ಎಂದು ವುಸಿಕ್‌ ಹೇಳಿದ್ದಾರೆ.

ಲಸಿಕೆ ಪಡೆಯಲು ಜೋಕೋಗೆ ರಾಫೆಲ್‌ ನಡಾಲ್‌ ಸಲಹೆ

ಮೆಲ್ಬರ್ನ್‌: ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾನ್‌ ಸ್ಲಾಂನಲ್ಲಿ ಪಾಲ್ಗೊಳ್ಳಲು ಸಮಸ್ಯೆ ಎದುರಿಸುತ್ತಿರುವ ನೋವಾಕ್‌ ಜೋಕೋವಿಚ್‌ಗೆ ಸ್ಪೇನ್‌ನ ದಿಗ್ಗಜ ಟೆನಿಸಿಗ ರಾಫೆಲ್‌ ನಡಾಲ್‌ (Rafael Nadal) ಕೋವಿಡ್‌ ಲಸಿಕೆ (coronavirus vaccine) ಪಡೆಯುವಂತೆ ಸಲಹೆ ನೀಡಿದ್ದಾರೆ. ‘ಔಷಧದ ಬಗ್ಗೆ ಗೊತ್ತಿರುವವರನ್ನು ನಂಬಬೇಕು. ಲಸಿಕೆ ಹಾಕಿಸಿಕೊಳ್ಳಿ ಎಂದು ವೈದ್ಯರು ಹೇಳಿದರೆ ಹಾಕಿಸಿಕೊಳ್ಳಬೇಕು. ನಾನೂ ಕೋವಿಡ್‌ಗೆ ತುತ್ತಾಗಿದ್ದೆ. ಎರಡು ಡೋಸ್‌ ಲಸಿಕೆ ಹಾಕಿಸಿಕೊಂಡಿದ್ದೇನೆ. ಲಸಿಕೆ ಪಡೆದರೆ ಟೂರ್ನಿಗಳಲ್ಲಿ ಆಡಲು ಯಾವುದೇ ಸಮಸ್ಯೆ ಇರುವುದಿಲ್ಲ’ ಎಂದು ನಡಾಲ್‌ ಹೇಳಿದ್ದಾರೆ.

Novak Djokovic: ಆಸ್ಟ್ರೇಲಿಯಾ ಪ್ರವೇಶಿಸಲು ಟೆನಿಸ್ ದಿಗ್ಗಜ ಜೋಕೋವಿಚ್‌ಗಿಲ್ಲ ಅನುಮತಿ..!

ನನ್ನ ಮಗನನ್ನು ಕೈದಿಯಂತೆ ಇಟ್ಟಿದ್ದಾರೆ: ಜೋಕೋ ತಾಯಿ

ಬೆಲ್ಗ್ರೇಡ್‌: ನೋವಾಕ್‌ ಜೋಕೋವಿಚ್‌ರನ್ನು ಮೆಲ್ಬರ್ನ್‌ ವಿಮಾನ ನಿಲ್ದಾಣದಲ್ಲಿ ತಡೆದಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಜೋಕೋವಿಚ್‌ ಪೋಷಕರು, ತಮ್ಮ ಮಗನನ್ನು ಕೈದಿಯಂತೆ ಇರಿಸಿದ್ದಾರೆ ಎಂದಿದ್ದಾರೆ.  ‘ಅಧಿಕಾರಿಗಳು ಜೋಕೋವಿಚ್‌ನನ್ನು ಕೆಟ್ಟಹೋಟೆಲ್‌ನಲ್ಲಿ ಕೈದಿಯಂತೆ ಬಂಧಿಸಿಟ್ಟಿದ್ದಾರೆ. ಅವರನ್ನು ಅಲ್ಲಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ನಮ್ಮ ಜೊತೆ ಸಂಪರ್ಕಕ್ಕೂ ಅವಕಾಶ ನೀಡುತ್ತಿಲ್ಲ’ ಎಂದು ಅವರ ತಾಯಿ ಡಿಜಾನ ಕಿಡಿಕಾರಿದ್ದು, ‘ಜೋಕೋವಿಚ್‌ ಶ್ರೇಷ್ಠ ಕ್ರೀಡಾಪಟು. ಆದರೆ ರಾಜಕೀಯ ಅಜೆಂಡಾಕ್ಕೆ ಗುರಿಯಾಗಿದ್ದಾರೆ’ ಎಂದು ಅವರ ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Australian Open 2022: ನೊವಾಕ್ ಜೋಕೋವಿಚ್ ಸ್ಪರ್ಧೆ ಖಚಿತ..!

21ನೇ ಗ್ರ್ಯಾನ್‌ ಸ್ಲಾಂ ಮೇಲೆ ಕಣ್ಣಿಟ್ಟಿರುವ ಜೋಕೋ: ಕುತೂಹಲದ ಕೇಂದ್ರಬಿಂದುವಾಗಿರುವ ಆಸ್ಟ್ರೇಲಿಯನ್ ಓಪನ್‌ ಟೆನಿಸ್ ಟೂರ್ನಿಯು ಜನವರಿ 13ರಿಂದ ಮೆಲ್ಬೊರ್ನ್‌ನಲ್ಲಿ ಆರಂಭವಾಗಲಿದೆ. ಆಸ್ಟ್ರೇಲಿಯಾ ಓಪನ್ ಟೆನಿಸ್‌ ಗ್ರ್ಯಾನ್‌ ಸ್ಲಾಂ ಟೂರ್ನಿಯ ಹಾಲಿ ಚಾಂಪಿಯನ್‌ ನೊವಾಕ್ ಜೋಕೋವಿಚ್‌ ಒಟ್ಟು 20 ಟೆನಿಸ್ ಗ್ರ್ಯಾನ್‌ ಸ್ಲಾಂ ಗೆಲ್ಲುವ ಮೂಲಕ ಅತಿಹೆಚ್ಚು ಗ್ರ್ಯಾನ್‌ ಸ್ಲಾಂ ಜಯಿಸಿದ ಆಟಗಾರರ ಪಟ್ಟಿಯಲ್ಲಿ ದಿಗ್ಗಜ ಟೆನಿಸಿಗರಾದ ರೋಜರ್ ಫೆಡರರ್ ಹಾಗೂ ರಾಫೆಲ್‌ ನಡಾಲ್ ಜತೆ ಜಂಟಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಇದೇ ಟೂರ್ನಿಯಲ್ಲಿ ಬದ್ದ ಎದುರಾಳಿ ರಾಫೆಲ್‌ ನಡಾಲ್ ಕೂಡಾ ಪಾಲ್ಗೊಂಡಿರುವುದರಿಂದ ಇಬ್ಬರು ಬಲಿಷ್ಠ ಆಟಗಾರರ ನಡುವೆ 21ನೇ ಗ್ರ್ಯಾನ್‌ ಸ್ಲಾಂ ಗೆಲ್ಲಲು ಪೈಪೋಟಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದೀಗ ನೊವಾಕ್‌ ಜೋಕೋವಿಚ್‌ ಆಸ್ಟ್ರೇಲಿಯನ್‌ ಓಪನ್ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದೇ ಅನುಮಾನ ಎನ್ನುವಂತಾಗಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಸತತ ಎರಡನೇ ಬಾರಿಗೆ ಭಾರತ ಮಹಿಳೆಯರಿಗೆ ಒಲಿದ ಕಬಡ್ಡಿ ವಿಶ್ವಕಪ್ ಚಾಂಪಿಯನ್ ಪಟ್ಟ!