ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ದಿನಕಳೆದಂತೆ ಅಚ್ಚರಿಯ ಫಲಿತಾಂಶ ಹೊರಬೀಳುತ್ತಲೇ ಇವೆ. ಹೀಗಿರುವಾಗಲೇ ಸ್ವಿಸ್ ಟೆನಿಸ್ ದಿಗ್ಗಜ ರೋಜರ್ ಫೆಡರರ್ ದಾಖಲೆಯ 15ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..
ಮೆಲ್ಬರ್ನ್(ಜ.27): 2020ರ ಮೊದಲ ಗ್ರ್ಯಾಂಡ್‌ಸ್ಲಾಂ ಆಸ್ಪ್ರೇಲಿಯನ್ ಓಪನ್ ದಿನ ಕಳೆದಂತೆ ರೋಚಕತೆ ಹೆಚ್ಚಾಗುತ್ತಿದೆ. ಟ್ರೋಫಿ ಗೆಲ್ಲುವ ನಿರೀಕ್ಷೆ ಮೂಡಿಸಿದ್ದ ತಾರಾ ಮಹಿಳಾ ಟೆನಿಸಿಗರು ಒಬ್ಬರ ಹಿಂದೆ ಒಬ್ಬರು ಸೋತು ಹೊರಬೀಳುತ್ತಿದ್ದಾರೆ.
15ನೇ ಬಾರಿ ಕ್ವಾರ್ಟರ್‌ಗೆ ಫೆಡರರ್: ದಾಖಲೆಯ 20 ಗ್ರ್ಯಾಂಡ್‌ಸ್ಲಾಂ ಒಡೆಯ ಸ್ವಿಜರ್‌ಲೆಂಡ್‌ನ ರೋಜರ್ ಫೆಡರರ್, ಆಸ್ಪ್ರೇಲಿಯನ್ ಓಪನ್ ಗ್ರ್ಯಾಂಡ್‌ಸ್ಲಾಂನಲ್ಲಿ 15ನೇ ಬಾರಿ ಕ್ವಾರ್ಟರ್‌ಫೈನಲ್ ಹಂತ ಪ್ರವೇಶಿಸಿದರು. ಫೆಡರರ್, ಹಂಗೇರಿಯಾದ ಮಾರ್ಟನ್ ಫುಕ್ಸೊವಿಕ್ಸ್ ಎದುರು 4-6, 6-1, 6-2, 6-2 ಸೆಟ್‌ಗಳಲ್ಲಿ ಗೆಲುವು ಪಡೆದರು. ಈ ಜಯದೊಂದಿಗೆ ಆಸ್ಪ್ರೇಲಿಯನ್ ಓಪನ್‌ನಲ್ಲಿ ಫೆಡರರ್ 101ನೇ ಜಯ ದಾಖಲಿಸಿದರು.
ಆಸ್ಪ್ರೇಲಿಯನ್ ಓಪನ್: ಪ್ರಿ ಕ್ವಾರ್ಟರ್‌ಗೆ ನಡಾಲ್, ಹಾಲೆಪ್
ಹಾಲಿ ಚಾಂಪಿಯನ್ ಸರ್ಬಿಯಾದ ನೋವಾಕ್ ಜೋಕೋವಿಚ್, ಅರ್ಜೆಂಟೀನಾದ ಡಿಗೊ ಸ್ಟುವರ್ಟ್ ಜಮನ್ ವಿರುದ್ಧ 6-3, 6-4, 6-4 ಸೆಟ್‌ಗಳಲ್ಲಿ ಸುಲಭ ಗೆಲುವು ಪಡೆದರು. ಇದರೊಂದಿಗೆ ಜೋಕೋ ಆಸ್ಪ್ರೇಲಿಯನ್ ಓಪನ್‌ನಲ್ಲಿ 11ನೇ ಬಾರಿ ಕ್ವಾರ್ಟರ್ ಫೈನಲ್‌ಗೇರಿದ್ದಾರೆ. ಉಳಿದಂತೆ ಮಿಲೋಸ್ ರೋನಿಕ್, ಟೆನ್ನಿ ಸಂಡ್‌ಗ್ರೆನ್ ಎಂಟರಘಟ್ಟಕ್ಕೇರಿದರು.
ಇನ್ನು ಭವಿಷ್ಯದ ಸೆರೆನಾ ವಿಲಿಯಮ್ಸ್ ಎಂದೇ ಬಿಂಬಿತವಾಗಿದ್ದ ಅಮೆರಿಕದ 15 ವರ್ಷದ ಕೊಕೊ ಗಾಫ್, 4ನೇ ಸುತ್ತಲ್ಲೇ ತಮ್ಮ ಅಭಿಯಾನ ಕೊನೆಗೊಳಿಸಿದ್ದಾರೆ.
ಟೂರ್ನಿಯ ಮೊದಲ ಸುತ್ತಿನಿಂದಲೂ ತಾರಾ ಟೆನಿಸ್ ಆಟಗಾರ್ತಿಯರನ್ನು ಸೋಲಿಸಿ ಅಚ್ಚರಿಯ ಫಲಿತಾಂಶ ನೀಡುತ್ತಿದ್ದ ಗಾಫ್ ಪ್ರಿ ಕ್ವಾರ್ಟರ್‌ನಲ್ಲಿ ಹೊರಬಿದ್ದಿದ್ದಾರೆ. ಗಾಫ್, ಅಮೆರಿಕದವರೇ ಆದ ಸೋಫಿಯಾ ಕೆನಿನ್ ವಿರುದ್ಧ 7-6(7-5), 3-6, 0-6 ಸೆಟ್‌ಗಳಲ್ಲಿ ಸೋಲು ಕಂಡರು. ಗಾಫ್ ಮೊದಲ ಸುತ್ತಲ್ಲಿ ಮಾಜಿ ನಂ.1 ಆಟಗಾರ್ತಿ ವೀನಸ್ ವಿಲಿಯಮ್ಸ್ ವಿರುದ್ಧ, 2ನೇ ಸುತ್ತಲ್ಲಿ ರೋಮೇನಿಯಾದ ಸೊರೊನಾ ಕ್ರಿಸ್ಟಿಯಾ ಎದುರು ಹಾಗೂ 3ನೇ ಸುತ್ತಲ್ಲಿ ಹಾಲಿ ಚಾಂಪಿಯನ್ ಆಗಿದ್ದ ಜಪಾನ್‌ನ ನವೊಮಿ ಒಸಾಕ ವಿರುದ್ಧ ಜಯ ಸಾಧಿಸಿದ್ದರು. ಇನ್ನು ಗಾಫ್, ಕಳೆದ ವರ್ಷದಿಂದ ಗ್ರ್ಯಾಂಡ್‌ಸ್ಲಾಂ ಟೂರ್ನಿಗಳಲ್ಲಿ ಆಡುತ್ತಿದ್ದಾರೆ.
ವಿಶ್ವ ನಂ.1 ಆಸ್ಪ್ರೇಲಿಯಾದ ಆಶ್ಲೆ ಬಾರ್ಟಿ, ಅಮೆರಿಕದ ಅಲಿಸನ್ ರಿಸ್ಕೆ ವಿರುದ್ಧ 6-3, 1-6, 6-4 ಸೆಟ್‌ಗಳಲ್ಲಿ ಗೆಲುವು ಪಡೆದರು. ಕ್ವಾರ್ಟರ್‌ನಲ್ಲಿ ಬಾರ್ಟಿ, ಪೆಟ್ರಾ ಕ್ವಿಟೋವಾರನ್ನು ಎದುರಿಸಲಿದ್ದಾರೆ.
ಮೊದಲ ಬಾರಿ ಅರಬ್ ಆಟಗಾರ್ತಿ ಕ್ವಾರ್ಟರ್‌ಗೆ
ಟ್ಯುನೇಶಿಯಾ ಟೆನಿಸ್ ಆಟಗಾರ್ತಿ ಒನ್ಸ್ ಜಬೆಯುರ್ ಕ್ವಾರ್ಟರ್ ಹಂತಕ್ಕೇರಿದರು. ಈ ಸಾಧನೆ ಮಾಡಿದ ಮೊದಲ ಅರಬ್ ರಾಷ್ಟ್ರದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಜಬೆಯುರ್ ಪಾತ್ರರಾದರು. 4ನೇ ಸುತ್ತಿನ ಪಂದ್ಯದಲ್ಲಿ ಜಬೆಯುರ್, ಚೀನಾದ ವಾಂಗ್ ಕಿಯಾಂಗ್ ವಿರುದ್ಧ 7-6(7-4), 6-1 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಈ ಜಯದೊಂದಿಗೆ ಜಬೆಯುರ್, ಅಗ್ರ 50ರಲ್ಲಿ ಸ್ಥಾನ ಪಡೆಯಲಿದ್ದಾರೆ.
3ನೇ ಸುತ್ತಿಗೆ ಬೋಪಣ್ಣ ಜೋಡಿ
ಮಿಶ್ರ ಡಬಲ್ಸ್‌ನ 2ನೇ ಸುತ್ತಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಉಕ್ರೇನ್‌ನ ನಾಡಿಯಾ ಕಿಚೆನೊಕ್ ಜೋಡಿ ಗೆಲುವು ಸಾಧಿಸಿ 3ನೇ ಸುತ್ತಿಗೇರಿತು. ಮೊದಲ ಸುತ್ತಿನ ಪಂದ್ಯದಲ್ಲಿ ಲಿಯಾಂಡರ್ ಪೇಸ್ ಹಾಗೂ ಒಸ್ಟಪೆಂಕೊ ಜೋಡಿ ಗೆದ್ದು 2ನೇ ಸುತ್ತಿಗೆ ಪ್ರವೇಶಿಸಿತು.