ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಹಿಳಾ ತಾರಾ ಕುಸ್ತಿ ಪಟುಗಳಾದ ವಿನೇಶ್ ಪೋಗಾಟ್ ಸೇರಿ ಮೂವರು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಅಲ್ಮಾಟಿ(ಏ.17): ಇಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪ್ರಾಬಲ್ಯ ಮುಂದುವರೆದಿದ್ದು, ಮುಂಬರುವ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿರುವ ವಿನೇಶ್ ಪೋಗಾಟ್(53ಕೆ.ಜಿ) ಸೇರಿದಂತೆ ಭಾರತದ ಕುಸ್ತಿಪಟುಗಳು ಮೂರು ಚಿನ್ನದ ಪದಕಗಳಿಗೆ ಕೊರಳೊಡ್ಡಿದರು.
ಶುಕ್ರವಾರ ನಡೆದ ಫೈನಲ್‌ನಲ್ಲಿ ತೈಪೇಯ ಮೆಂಗ್ ಸೂನ್ ಶೇಹ್ ವಿರುದ್ಧ ಗೆಲುವು ಸಾಧಿಸಿದ ವಿನೇಶ್ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚೊಚ್ಚಲ ಚಿನ್ನದ ಪದಕ ಗೆದ್ದರು. ಕೆಲ ದಿನಗಳ ಹಿಂದೆಯಷ್ಟೇ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದ 19 ವರ್ಷದ ಅನ್ಶು ಮಲಿಕ್ 57 ಕೆ.ಜಿ. ವಿಭಾಗದಲ್ಲಿ ಮಂಗೋಲಿಯಾದ ಅಲ್ಟಾಂಟ್ಸೆಗ್ ವಿರುದ್ಧ 3-0 ಅಂತರದಲ್ಲಿ ಗೆಲುವಿನ ನಗೆ ಬೀರಿ, ಏಷ್ಯನ್ ಚಾಂಪಿಯನ್‌ಶಿಪ್‌ನ ಪ್ರಥಮ ಸ್ವರ್ಣದ ಪದಕ ತಮ್ಮದಾಗಿಸಿಕೊಂಡರು. 72 ಕೆ.ಜಿ. ವಿಭಾಗದಲ್ಲಿ ದಿವ್ಯಾ ಕಾಕ್ರನ್ ಚಿನ್ನ ಗೆದ್ದರೆ, 65 ಕೆ.ಜಿ. ವಿಭಾಗದಲ್ಲಿ ಸಾಕ್ಷಿ ಮಲಿಕ್ ಫೈನಲ್ ಸುತ್ತಿಗೇರಿದರು.
ಮೇರಿ ಕೋಮ್ ಬಾಕ್ಸಿಂಗ್ ಫೌಂಡೇಶನ್‌ಗೆ ಡ್ರೀಮ್ ಸ್ಪೋರ್ಟ್ಸ್ ಸಾಥ್
ಏಷ್ಯನ್ ಕುಸ್ತಿ: ಚಿನ್ನ ಗೆದ್ದ ಸರಿತಾ ಮೊರ್
ಕಳೆದೆರಡು ದಿನಗಳ ಹಿಂದಷ್ಟೇ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ ಮಹಿಳೆಯರ 59 ಕೆ.ಜಿ ವಿಭಾಗದಲ್ಲಿ ಭಾರತದ ಸರಿತಾ ಮೊರ್ ಚಿನ್ನದ ಪದಕ ಉಳಿಸಿಕೊಂಡಿದ್ದರು. 2020ರಲ್ಲಿ ಚಿನ್ನ ಜಯಿಸಿದ್ದ ಸರಿತಾ, ಫೈನಲ್‌ನಲ್ಲಿ ಮಂಗೋಲಿಯಾದ ಶೂವ್ಡೊರ್ ವಿರುದ್ಧ 1-7ರಿಂದ ಹಿಂದಿದ್ದರು. ಆದರೆ ಕೆಲವೇ ಸೆಕೆಂಡ್‌ಗಳಲ್ಲಿ 7-7ರಲ್ಲಿ ಸಮಬಲ ಸಾಧಿಸಿದ ಸರಿತಾ, ಅಂತಿಮವಾಗಿ 10-7ರಲ್ಲಿ ಜಯಿಸಿದರು.