All England Badminton ಹಾಲಿ ಚಾಂಪಿಯನ್ ಆಟಗಾರನನ್ನು ಸೋಲಿಸಿ ಫೈನಲ್ ಗೆ ಲಗ್ಗೆ ಇಟ್ಟ ಲಕ್ಷ್ಯ ಸೆನ್!

By Suvarna News  |  First Published Mar 19, 2022, 9:38 PM IST

ಭಾರತದ ಯುವ ಷಟ್ಲರ್ ಲಕ್ಷ್ಯ ಸೆನ್

ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನಲ್ಲಿ ಫೈನಲ್ ಗೆ ಲಗ್ಗೆ

ಸೆಮಿಫೈನಲ್ ನಲ್ಲಿ ಹಾಲಿ ಚಾಂಪಿಯನ್ ಲೀ ಝಿ ಜಿಯಾ ವಿರುದ್ಧ ಗೆಲುವು


ಬರ್ಮಿಂಗ್ ಹ್ಯಾಂ (ಮಾ.19): ಭಾರತದ ಯುವ ಷಟ್ಲರ್ ಲಕ್ಷ್ಯ ಸೆನ್ (Lakshya Sen) ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನಲ್ಲಿ (All England Badminton Championship,) ಫೈನಲ್‌ಗೇರುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಸೆಮಿಫೈನಲ್  ಪಂದ್ಯದಲ್ಲಿ ಮಲೇಷ್ಯಾದ (Malaysia) ಅಗ್ರ ಆಟಗಾರ, ಹಾಲಿ ಚಾಂಪಿಯನ್ ಲೀ ಝೀ ಜಿಯಾ (Lee Zii Jia ) ಅವರನ್ನು ಸೋಲಿಸುವ ಮೂಲಕ ಫೈನಲ್ ಪ್ರವೇಶಿಸಿದರು. ಆ ಮೂಲಕ ಕಳೆದ 21 ವರ್ಷಗಳಲ್ಲಿ ಆಲ್ ಇಂಗ್ಲೆಂಡ್ ನಲ್ಲಿ ಫೈನಲ್ ಸಾಧನೆ ಮಾಡಿದ ಭಾರತದ ಮೊದಲ ಪುರುಷ ಷಟ್ಲರ್ ಎನಿಸಿಕೊಂಡಿದ್ದಾರೆ.

ಲಕ್ಷ್ಯ ಸೆನ್, ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನಲ್ಲಿ ಫೈನಲ್ ಗೇರಿದ ಭಾರತದ 5ನೇ ಷಟ್ಲರ್ ಎನಿಸಿದ್ದಾರೆ. ಇದಕ್ಕೂ ಮುನ್ನ ಪ್ರಕಾಶ್ ನಾಥ್ (1947), ಪ್ರಕಾಶ್ ಪಡುಕೋಣೆ (1980, 1981), ಪುಲ್ಲೇಲ ಗೋಪಿಚಂದ್ (2001) ಹಾಗೂ ಸೈನಾ ನೆಹ್ವಾಲ್ (2015) ಈ ಸಾಧನೆ ಮಾಡಿದ್ದರು. ಇದರಲ್ಲಿ ಪ್ರಕಾಶ್ ಪಡುಕೋಣೆ (Prakash Padukone) (1980) ಹಾಗೂ ಪುಲ್ಲೇಲ ಗೋಪಿಚಂದ್ (Pullela Gopichand) ಮಾತ್ರವೇ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದ್ದರೆ, ಉಳಿದವರು ಫೈನಲ್ ನಲ್ಲಿ ಸೋಲು ಕಂಡಿದ್ದರು.

ದೈತ್ಯ ಸಂಹಾರಿಯಾಗಿ ಸೆಮಿಫೈನಲ್ ಗೇರಿದ್ದ ಲಕ್ಷ್ಯ ಸೆನ್ 21-13, 12-21, 21-19 ರಿಂದ ವಿಶ್ವ ಶ್ರೇಯಾಂಕದಲ್ಲಿ 7ನೇ ಸ್ಥಾನದಲ್ಲಿರುವ ಜಿಯಾ ಅವರನ್ನು ಸೋಲಿಸಿದರು. ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಕಂಚಿನ ಪದಕ ವಿಜೇತರಾಗಿರುವ ಲಕ್ಷ್ಯ ಸೆನ್, ಇಡೀ ಟೂರ್ನಿಯಲ್ಲಿ ಅದ್ಭುತ ಎನಿಸುವಂಥ ನಿರ್ವಹಣೆ ತೋರುವ ಮೂಲಕ ಇದೇ ಮೊದಲ ಬಾರಿಗೆ ಆಲ್ ಇಂಗ್ಲೆಂಡ್ ಟೂರ್ನಿಯಲ್ಲಿ ಫೈನಲ್ ಸಾಧನೆ ಮಾಡುವಲ್ಲಿ ಯಶಸ್ವಿಯಾದರು.

LAKSHYA ENTERS FINAL 🥳🥳

After an amazing encounter between defending Champion 🇲🇾's Lee Zii Jia & 🇮🇳's , guess who made it to the FINALS 😎

He becomes the 1st Indian male finalist of the prestigious in 21 years

Superb Effort 🙌🤟 pic.twitter.com/Iiceu1YpfP

— SAI Media (@Media_SAI)


20 ವರ್ಷದ ಲಕ್ಷ್ ಸೆನ್, ಆಲ್ ಇಂಗ್ಲೆಂಡ್ ಟೂರ್ನಿಯಲ್ಲಿ ಫೈನಲ್ ಗೇರಿದ ಕೇವಲ ಮೂರನೇ ಭಾರತೀಯ ಪುರುಷ ಷಟ್ಲರ್ ಎನಿಸಿದ್ದಾರೆ. ಕಳೆದ ಆರು ತಿಂಗಳಿನಿಂದ ವಿಶ್ವದಲ್ಲಿ ಆಡಿದ ಬಹುತೇಕ ಟೂರ್ನಿಗಳಲ್ಲಿ ಲಕ್ಷ್ಯ ಸೆನ್ ಗಮನಸೆಳೆದಿದ್ದಾರೆ. ಜನವರಿಯಲ್ಲಿ ನಡೆದ ಇಂಡಿಯಾ ಓಪನ್ ಟೂರ್ನಿಯಲ್ಲಿ ತಮ್ಮ ಚೊಚ್ಚಲ 500 ಸಿರೀಸ್ ಪ್ರಶಸ್ತಿ ಗೆದ್ದಿದ್ದ ಲಕ್ಷ್ಯ ಸೆನ್, ಕಳೆದ ವರ್ಷ ನಡೆದ ಜರ್ಮನ್ ಓಪನ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದರು.

All England Badminton ವಿಶ್ವ ನಂ.3 ಆಟಗಾರನಿಗೆ ಅಘಾತ ನೀಡಿದ ಲಕ್ಷ್ಯ ಸೆನ್, ಸೈನಾ, ಸಿಂಧು ಔಟ್!
ಪಂದ್ಯದಲ್ಲಿ ಭರ್ಜರಿ ಆರಂಭ ಪಡೆದುಕೊಂಡ ಲಕ್ಷ್ಯ ಸೆನ್, ಮೊದಲ ಗೇಮ್ ಅನ್ನು 21-13ರಿಂದ ಹೆಚ್ಚಿನ ಆಯಾಸವಿಲ್ಲದೆ ಗೆದ್ದುಕೊಂಡಿದ್ದರು. ಆದರೆ, ಮಲೇಷ್ಯಾದ ಆಟಗಾರ 2ನೇ ಗೇಮ್ ನಲ್ಲಿ ಮಲೇಷ್ಯಾದ ಆಟಗಾರ ಸತತವಾಗಿ ಬಾರಿಸಿದ ವಿನ್ನರ್ಸ್ ಗಳಿಂದ ಹಿನ್ನಡೆ ಕಂಡ ಲಕ್ಷ್ಯ ಸೆನ್ ಸೋಲು ಕಂಡಿದ್ದರು. ಬಳಿಕ ನಡೆದ ನಿರ್ಣಾಯ ಗೇಮ್ ನ ಅಂತಿಮ ಹಂತದಲ್ಲಿ ರಕ್ಷಣಾ ವಿಭಾಗದಲ್ಲಿ ಭರ್ಜರಿಯಾಗಿ ನಿರ್ವಹಣೆ ತೋರಿದ ಲಕ್ಷ್ಯ ಸೆನ್, ಸತತ ಅಂಕಗಳನ್ನು ಕಲೆಹಾಕುವ ಮೂಲಕ ಗೆಲುವು ಕಂಡರು.

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌: ಭಾರತದ ಮೂವರು ಶಟ್ಲರ್‌ಗಳಿಗೆ ಕೊರೋನಾ ಪಾಸಿಟಿವ್‌..!
2021ರ ವರ್ಷದ ಅಂತ್ಯಕ್ಕೆ ಮಾತನಾಡಿದ್ದ ಲಕ್ಷ್ಯ ಸೆನ್, ಮುಂದಿನ ದಿನಗಳಲ್ಲಿ ದೊಡ್ಡ ಟೂರ್ನಿಗಳನ್ನು ಗೆಲ್ಲಲು ಬಯಸುವುದಾಗಿ ಹೇಳಿದ್ದರು. ಅದಾಗಿ ಮೂರು ತಿಂಗಳ ಬಳಿಕ ಲಕ್ಷ್ಯ ಸೆನ್, ಬ್ಯಾಡ್ಮಿಂಟನ್ ಜಗತ್ತಿನ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಗೆಲ್ಲುವ ಹಾದಿಯಿಂದ ಕೇವಲ ಒಂದು ಹೆಜ್ಜಯ ದೂರದಲ್ಲಿದ್ದಾರೆ. ಲಕ್ಷ್ಯ ಸೇನ್ ಇದಕ್ಕೂ ಮೊದಲು ವಿಶ್ವದ ನಂ. 3 ಡೆನ್ಮಾರ್ಕ್‌ನ ಆಂಡರ್ಸ್ ಆಂಟನ್ಸನ್ ಅವರನ್ನು ನೇರ ಗೇಮ್‌ಗಳಲ್ಲಿ ಸೋಲಿಸುವ ಮೂಲಕ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟಿದ್ದರು. ಆದರೆ ಗುರುವಾರ ನಡೆದ ಪಂದ್ಯದಲ್ಲಿ ಒಲಿಂಪಿಕ್ ಪದಕ ವಿಜೇತರಾದ ಪಿವಿ ಸಿಂಧು ಮತ್ತು ಸೈನಾ ನೆಹ್ವಾಲ್‌ ಸೋಲು ಕಂಡಿದ್ದರು. ತಮ್ಮ ಎದುರಾಳಿ ಚೀನಾದ ಲು ಗುವಾಂಗ್ ಜು ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದ ಕಾರಣ ವಾಕ್ ಓವರ್ ನೀಡಿದ್ದರಿಂದ ಸೆನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್‌ಗೆ ಮುನ್ನಡೆದಿದ್ದರು.

Tap to resize

Latest Videos

click me!