ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುತ್ತಿದ್ದಂತೆಯೇ ಭಾರತೀಯ ರೈಲ್ವೇಯಿಂದ ಡಬಲ್ ಪ್ರಮೋಷನ್..!

By Naveen Kodase  |  First Published Aug 2, 2024, 3:04 PM IST

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಬೇಟೆಯಾಡಿದ ಸ್ವಪ್ನಿಲ್‌ ಕುಸಾಲೆಗೆ ಭಾರತೀಯ ರೈಲ್ವೆ ಇಲಾಖೆ ಗುಡ್ ನ್ಯೂಸ್ ಕೊಟ್ಟಿದ್ದು, ಡಬಲ್ ಪ್ರಮೋಷನ್ ನೀಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಪ್ಯಾರಿಸ್: ಭಾರತೀಯ ರೈಲ್ವೇ ಉದ್ಯೋಗಿಯಾಗಿರುವ ಸ್ವಪ್ನಿಲ್ ಕುಸಾಲೆ, ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪುರುಷರ 50 ಮೀ. ರೈಫಲ್‌ 3 ಪೊಸಿಷನ್‌ ಶೂಟಿಂಗ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಇಡೀ ದೇಶವೇ ಹೆಮ್ಮೆಪಡುವಂತಹ ಸಾಧನೆ ಮಾಡಿದ್ದರು. ಇದರ ಬೆನ್ನಲ್ಲೇ ಸ್ವಪ್ನಿಲ್‌ಗೆ ಅದೃಷ್ಟ ಖುಲಾಯಿಸಿದ್ದು, ಭಾರತೀಯ ರೈಲ್ವೆ ಮಹಾರಾಷ್ಟ್ರ ಮೂಲದ ಶೂಟರ್‌ಗೆ ಡಬಲ್ ಪ್ರಮೋಷನ್ ನೀಡಿರುವುದಾಗಿ ಖಚಿತಪಡಿಸಿದೆ.

ಇದುವರೆಗೂ ಭಾರತೀಯ ರೈಲ್ವೇ ಇಲಾಖೆಯಲ್ಲಿ ಪ್ರಯಾಣಿಕರ ಟಿಕೆಟ್ ಪರಿವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದ ಸ್ವಪ್ನಿಲ್ ಕುಸಾಲೆ, ಇದೀಗ ಎರಡು ಹಂತದ ಬಡ್ತಿ ಪಡೆದು, ಭಾರತೀಯ ರೈಲ್ವೇ ಇಲಾಖೆಯ ವಿಶೇಷ ಕರ್ತವ್ಯದ ಅಧಿಕಾರಿಯಾಗಿ ಮುಂಬಡ್ತಿ ಪಡೆದುಕೊಂಡಿದ್ದಾರೆ. ಈ ವಿಚಾರವನ್ನು ಮುಂಬೈ ರೈಲ್ವೇಯ ಕ್ರೀಡಾ ವಿಭಾಗ ಖಚಿತಪಡಿಸಿದೆ. 

Latest Videos

undefined

ಆಗಸ್ಟ್ 01ರಂದು ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ 50 ಮೀ. ರೈಫಲ್‌ 3 ಪೊಸಿಷನ್‌ ಶೂಟಿಂಗ್‌ ಸ್ಪರ್ಧೆಯ ಫೈನಲ್‌ನಲ್ಲಿ ಘಟಾನುಘಟಿ ಶೂಟರ್‌ಗಳನ್ನು ಹಿಂದಿಕ್ಕಿ ಸ್ವಪ್ನಿಲ್ ಕುಸಾಲೆ ಅವರು ಮೂರನೇ ಸ್ಥಾನ ಪಡೆದು ಕಂಚಿನ ಪದಕ ಜಯಿಸಿದ್ದರು. ಅಂದಹಾಗೆ ಇದು ಭಾರತ ಪರ ಈ ಬಾರಿಯ ಒಲಿಂಪಿಕ್ಸ್‌ ದಾಖಲಾದ ಮೂರನೇ ಕಂಚಿನ ಪದಕ ಎನಿಸಿಕೊಂಡಿದೆ.

ಪ್ಯಾರಿಸ್ ಒಲಿಂಪಿಕ್ ಪದಕ ಗೆದ್ದ ಸ್ವಪ್ನಿಲ್ ತಂದೆ-ಅಣ್ಣ ಟೀಚರ್; ಅಮ್ಮ ಗ್ರಾಮ ಪಂಚಾಯತ್ ಮೆಂಬರ್..!

28 ವರ್ಷದ ಸ್ವಪ್ನಿಲ್ ಕುಸಾಲೆ 2015ರಿಂದಲೂ ಕೇಂದ್ರಿಯ ರೈಲ್ವೇ ಉದ್ಯೋಗಿಯಾಗಿ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಂಬಳವಾಡಿ ಎನ್ನುವ ಸಣ್ಣ ಹಳ್ಳಿಯಿಂದ ಬಂದ ಸ್ವಪ್ನಿಲ್ ಕುಸಾಲೆ ಇದೀಗ, ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಮೂಲಕ ದೇಶದ ಮನೆಮಾತಾಗಿದ್ದಾರೆ. 2012ರಿಂದಲೇ ಅಂತಾರಾಷ್ಟ್ರೀಯ ಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದರೂ, ಒಲಿಂಪಿಕ್ಸ್‌ಗೆ ಪಾದಾರ್ಪಣೆ ಮಾಡಲು ಸ್ವಪ್ನಿಲ್‌ಗೆ 12 ವರ್ಷಗಳ ಕಾಲ ಬೇಕಾಯಿತು. 

ಸ್ವಪ್ನಿಲ್ ಕುಸಾಲೆ ವಿಶೇಷ ದಾಖಲೆ!

ಭಾರತದ ಶೂಟರ್ ಒಬ್ಬ ಒಲಿಂಪಿಕ್ಸ್‌ನ 50 ಮೀ. ರೈಫಲ್ 3 ಪೊಸಿಷನ್‌ನಲ್ಲಿ ಪದಕ ಗೆದ್ದಿದ್ದು ಇದೇ ಮೊದಲು. 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಜೊಯ್‌ದೀಪ್ ಕರ್ಮಕಾರ್ 50 ಮೀ. ರೈಫಲ್ ಪ್ರೋನ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದರು. ಆದರೆ 4ನೇ ಸ್ಥಾನ ಪಡೆದು ಪದಕದಿಂದ ವಂಚಿತರಾಗಿದ್ದರು. ಆದರೆ ಸ್ವಪ್ನಿಲ್ ಈ ವಿಭಾಗದಲ್ಲಿ ಪದಕದ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ವಪ್ನಿಲ್‌ ಒಲಿಂಪಿಕ್ ಪದಕ ಗೆದ್ದ ಬೆನ್ನಲ್ಲಿಯೇ, ಲೈವ್‌ನಲ್ಲಿ ಕಣ್ಣೀರಿಟ್ಟ ಮಾಜಿ ಶೂಟರ್‌ ಗಗನ್‌ ನಾರಂಗ್‌!

ಸ್ವಪ್ನಿಗೆ ಧೋನಿಯೇ ಸ್ಪೂರ್ತಿ:

ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಬಳಿಕ ಮಾತನಾಡಿದ ಸ್ವಪ್ನಿಲ್ ಕುಸಾಲೆ, ತಾವು ಈ ಸಾಧನೆ ಮಾಡಲು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಯೇ ಸ್ಪೂರ್ತಿ ಎಂದು ಹೇಳಿದ್ದಾರೆ. ಯಾಕೆಂದರೆ ಸ್ವಪ್ನಿಲ್ ಅವರಂತೆಯೇ ಧೋನಿ ಕೂಡಾ ಭಾರತೀಯ ರೈಲ್ವೇಯಲ್ಲಿ ಉದ್ಯೋಗಿಯಾಗಿದ್ದರು.

"ಶೂಟಿಂಗ್ ಕ್ಷೇತ್ರದಲ್ಲಿ ನಾನು ನಿರ್ದಿಷ್ಟವಾಗಿ ಯಾರೊಬ್ಬರನ್ನು ಫಾಲೋ ಮಾಡಿಲ್ಲ. ಈ ಕ್ಷೇತ್ರದ ಹೊರತಾಗಿ ನಾನು ಮಹೇಂದ್ರ ಸಿಂಗ್ ಧೋನಿಯನ್ನು ಇಷ್ಟಪಡುತ್ತೇನೆ. ನನ್ನ ಸ್ಪರ್ಧೆಯಲ್ಲಿ ಧೋನಿ ಅವರಿರುವಂತೆ ತಾಳ್ಮೆಯಿಂದ ಹಾಗೂ ಶಾಂತಚಿತ್ತವಾಗಿರುವುದು ತುಂಬಾ ಅಗತ್ಯವಿರುತ್ತದೆ. ಇದರ ಜತೆ ನಾನು ಕೂಡಾ ಧೋನಿ ಅವರಂತೆ ಟಿಕೆಟ್‌ ಕಲೆಕ್ಟರ್ ಆಗಿದ್ದೆ" ಎಂದು ಹೇಳಿದ್ದರು.
 

click me!