ಮಹಾರಾಷ್ಟ್ರ ಮೂಲದ ಯುವ ಶೂಟರ್ ಸ್ವಪ್ನಿಲ್ ಕುಶಾಲೆ ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ 50 ಮೀ. ರೈಫಲ್ 3 ಪೊಸಿಷನ್ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸುತ್ತಿದ್ದಂತೆಯೇ ಮಾಜಿ ಒಲಿಂಪಿಯನ್ ಗಗನ್ ನಾರಂಗ್ ಆನಂದ ಭಾಷ್ಪ ಸುರಿಸಿದ್ದಾರೆ.
ಪ್ಯಾರಿಸ್: ಪುರುಷರ 50 ಮೀ. ರೈಫಲ್ 3 ಪೊಸಿಷನ್ ಶೂಟಿಂಗ್ ಸ್ಪರ್ಧೆಯಲ್ಲಿ ಸ್ವಪ್ನಿಲ್ ಕುಶಾಲೆ ಐತಿಹಾಸಿಕ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೂರನೇ ಕಂಚಿನ ಪದಕ ಜಯಿಸಿದೆ. ಶೂಟಿಂಗ್‌ನಲ್ಲೇ ಭಾರತ ಮೂರನೇ ಕಂಚಿನ ಪದಕ ಜಯಿಸುತ್ತಿದ್ದಂತೆಯೇ ಮಾಜಿ ಒಲಿಂಪಿಕ್ ಪದಕ ವಿಜೇತ ಶೂಟರ್ ಗಗನ್ ನಾರಂಗ ಲೈವ್‌ನಲ್ಲಿ ಮಾತನಾಡುತ್ತಿರುವಾಗಲೇ ಆನಂದ ಭಾಷ್ಪ ಸುರಿಸಿದ್ದಾರೆ.
ಹೌದು, ಮಹಾರಾಷ್ಟ್ರ ಮೂಲದ ಯುವ ಶೂಟರ್ ಸ್ವಪ್ನಿಲ್ ಕುಶಾಲೆ, ಮಂಡಿಯೂರಿ ಶೂಟ್ ಮಾಡುವ ವಿಭಾಗದಲ್ಲಿ 153.03 (50.8, 50.9, 51.6) ಆರನೇ ಸ್ಥಾನದಲ್ಲಿದ್ದರು. ಇದಾದ ಬಳಿಕ ಪ್ರೋನ್ ಅಂದರೆ ನೆಲದ ಮೇಲೆ ಮಲಗಿ ಶೂಟ್ ಮಾಡುವ ವಿಭಾಗದಲ್ಲಿ 310.1 ಅಂಕಗಳೊಂದಿಗೆ 5ನೇ ಸ್ಥಾನಕ್ಕೆ ಜಿಗಿದರು. ಇದಾದ ಬಳಿಕ ನಿಂತುಕೊಂಡು ಶೂಟ್ ಮಾಡುವ ವಿಭಾಗದಲ್ಲಿ ಅದ್ಭುತ ಪ್ರದರ್ಶನ ತೋರಿದ ಸ್ವಪ್ನಿಲ್ ಕುಶಾಲೆ 451.4 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ಕೊರಳೊಡ್ಡುವಲ್ಲಿ ಯಶಸ್ವಿಯಾದರು.
ಕಂಚಿನ ಪದಕ ಬೇಟೆಯಾಡಿದ ಸ್ವಪ್ನಿಲ್ ಕುಶಾಲೆ; ಭಾರತಕ್ಕೆ ಒಲಿದ ಮೂರನೇ ಒಲಿಂಪಿಕ್ ಪದಕ
ಇನ್ನು ಸ್ವಪ್ನಿಲ್ ಕುಶಾಲೆ ಒಲಿಂಪಿಕ್ಸ್ ಪದಕಕ್ಕೆ ಮುತ್ತಿಕ್ಕುತ್ತಿದ್ದಂತೆಯೇ ಟಿವಿ ಶೋದಲ್ಲಿ ಲೈವ್‌ನಲ್ಲಿ ಮಾತನಾಡುತ್ತಿರುವಾಗಲೇ ಮಾಜಿ ಒಲಿಂಪಿಕ್ ಪದಕ ವಿಜೇತ ಗಗನ್ ನಾರಂಗ್ ಕಣ್ಣೀರು ಸುರಿಸಿದ್ದಾರೆ.
ಹೀಗಿತ್ತು ನೋಡಿ ಆ ಕ್ಷಣ:
50 ಮೀ. ರೈಫಲ್ 3 ಪೊಸಿಷನ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಪದಕ: ಸ್ವಪ್ನಿಲ್ ಕುಶಾಲೆ ಇದೀಗ ಪುರುಷರ 50 ಮೀ. ರೈಫಲ್ 3 ಪೊಸಿಷನ್ ಶೂಟಿಂಗ್ ಸ್ಪರ್ಧೆಯಲ್ಲಿ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಮೊದಲ ಶೂಟರ್ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.
ಭಾರತಕ್ಕೆ ಪ್ಯಾರಿಸ್‌ನಲ್ಲಿ ಒಲಿದ ಮೂರನೇ ಪದಕ: ಸ್ವಪ್ನಿಲ್ ಕುಶಾಲೆ ಪದಕ ಗೆಲ್ಲುವುದರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಮೂರನೇ ಪದಕ ಜಯಿಸುವಲ್ಲಿ ಯಶಸ್ವಿಯಾಗಿದೆ. ಈ ಮೊದಲು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಮನು ಭಾಕರ್ ಕಂಚಿನ ಪದಕ ಜಯಿಸಿದ್ದರು. ಇದಾದ ಬಳಿಕ ಮನು ಭಾಕರ್ ಹಾಗೂ ಸರಬ್ಜೋತ್ ಸಿಂಗ್ ಜೋಡಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು.
