ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ, ನಟ ವಿಷ್ಣು ವಿಶಾಲ್ ಜತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಹೈದರಾಬಾದ್(ಏ.22): ನಟ ವಿಷ್ಣು ವಿಶಾಲ್ ತಮ್ಮ ಬಹುಕಾಲದ ಗೆಳತಿ, ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಜತೆ ಗುರುವಾರ(ಏ.22) ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ತೀರ ಖಾಸಗಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಹಾಗೂ ಆಪ್ತಸ್ನೇಹಿತರು ಪಾಲ್ಗೊಂಡಿದ್ದರು.
ಮಾಜಿ ಆಟಗಾರ್ತಿ ಜ್ವಾಲಾ ತಿಳಿನೀಲಿ ಕೆಂಪು ಮಿಶ್ರಿತ ಸೀರೆಯನ್ನುಟ್ಟು ಕಂಗೊಳಿಸಿದರೆ, ನಟ ವಿಷ್ಣು ವಿಶಾಲ್ ಬಿಳಿ ಅಂಗಿ, ಪಂಚೆಯನ್ನುಟ್ಟುಕೊಂಡಿದ್ದರು. ದೇಶಾದ್ಯಂತ ಕೋವಿಡ್ 19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕುಟಂಬಸ್ಥರು ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಈ ತಾರಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಜ್ವಾಲಾ ಗುಟ್ಟಾ ಹಾಗೂ ವಿಷ್ಣು ವಿಶಾಲ್ ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳಾದ ಮೆಹಂದಿ ಶಾಸ್ತ್ರ ಏಪ್ರಿಲ್ 21ರಿಂದ ಆರಂಭವಾಗಿತ್ತು. ಮೆಹಂದಿ ಶಾಸ್ತ್ರ, ಅರಿಶಿಣ ಶಾಸ್ತ್ರಗಳು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಹಸೆಮಣೆಯೇರಲು ಜ್ವಾಲಾ ಗುಟ್ಟಾ-ವಿಷ್ಣು ವಿಶಾಲ್ ರೆಡಿ; ಮದುವೆ ಡೇಟ್ ಫಿಕ್ಸ್
ಕಳೆದ ವರ್ಷ ಸೆಪ್ಟೆಂಬರ್ 09ರಂದು ಜ್ವಾಲಾ ಗುಟ್ಟಾ ಹುಟ್ಟುಹಬ್ಬದ ದಿನದಂದೇ ವಿಷ್ಣು ವಿಶಾಲ್ ತಮ್ಮ ಪ್ರೇಮ ನಿವೇದನೆ ಮಾಡಿದ್ದರು. ಬಳಿಕ ಅಂದೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕೆಲ ದಿನಗಳ ಹಿಂದಷ್ಟೇ ಈ ತಾರಾ ದಂಪತಿ ತಮ್ಮ ವಿವಾಹದ ದಿನಾಂಕವನ್ನು ಖಚಿತಪಡಿಸಿದ್ದರು.