Golden Book of World Record: ಕೈಗೆ ಕೋಳ, ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ 65 ವರ್ಷದ ಗಂಗಾಧರ್

By Kannadaprabha News  |  First Published Jan 25, 2022, 10:27 AM IST

* ಕೈಗೆ ಕೋಳ, ಕಾಲಿಗೆ ಸರಪಳಿ ಬಿಗಿದು ಸಮುದ್ರದಲ್ಲಿ ಸತತ 5.30 ಗಂಟೆ 3,550 ಮೀಟರ್‌ ದೂರ ಈಜಿದ ಗಂಗಾಧರ್

* ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ನಲ್ಲಿ ತನ್ನ ಹೆಸರು ದಾಖಲಿಸಿದ 65ರ ಹರೆಯದ ಗಂಗಾಧರ್‌

* ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂದು ಸಾಬೀತು ಮಾಡಿದ ಉಡುಪಿ ಮೂಲದ ಈಜುಪಟು


ಮಲ್ಪೆ(ಜ.25): ಇಲ್ಲಿನ ಕಡೆಕಾರು ಗ್ರಾಮದ 65ರ ಹರೆಯದ ಗಂಗಾಧರ್‌, ಸೋಮವಾರ ಕೈಗೆ ಕೋಳ, ಕಾಲಿಗೆ ಸರಪಳಿ ಬಿಗಿದು ಸಮುದ್ರದಲ್ಲಿ ಸತತ 5.30 ಗಂಟೆ 3,550 ಮೀಟರ್‌ ದೂರ ಈಜುವ (Swimming) ಮೂಲಕ ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ನಲ್ಲಿ (Golden Book of World Record) ತನ್ನ ಹೆಸರನ್ನು ದಾಖಲಿಸಿದ್ದಾರೆ. ಈ ಮೂಲಕ ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂದು ಸಾಬೀತು ಮಾಡಿದ್ದಾರೆ.

ಅವರು ಬೆಳಗ್ಗೆ 7.30ಕ್ಕೆ ಗೋಲ್ಡನ್‌ ಬುಕ್‌ ಆಫ್‌ ರೆಕಾರ್ಡ್‌ನ ವೀಕ್ಷಕರು ಮತ್ತು ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರ ಸಮ್ಮುಖದಲ್ಲಿ ಕೈಗೆ ಕೋಳ, ಕಾಲಿಗೆ ಸರಪಳಿ ಬಿಗಿದು ಸಮುದ್ರಕ್ಕೆ ಧುಮುಕಿದರು. ಭಾನುವಾರ ಶಾಂತವಾಗಿದ್ದ ಕಡಲು ಸೋಮವಾರ ಹೆಚ್ಚು ಬಿರುಸಾಗಿತ್ತು. ಆದರೂ ಅಬ್ಬರದ ಅಲೆಗಳಿಗೆ ಎದೆಯೊಡ್ಡಿ ಈಜಿದ ಗಂಗಾಧರ್‌, 1,775 ಮೀಟರ್‌ ದೂರ ಹೋಗಿ ಅದೇ ರೀತಿ ಹಿಂದಕ್ಕೆ, ಮಧ್ಯಾಹ್ನ ಸುಡುಬಿಸಿಲಿನ 1.20ಕ್ಕೆ ದಡ ಸೇರಿದರು.

Tap to resize

Latest Videos

ಸೇರಿದ್ದ ನೂರಾರು ಮಂದಿ ಅವರನ್ನು ಹರ್ಷೋದ್ಘಾರಗಳೊಂದಿಗೆ ಸ್ವಾಗತಿಸಿದರು. ಇದು ನೂತನ ದಾಖಲೆ ಎಂದು ಗೋಲ್ಡನ್‌ ಬುಕ್‌ ಆಫ್‌ ರೆಕಾರ್ಡ್‌ನ ವೀಕ್ಷಕ ಮನೀಶ್‌ ಬಿಷ್ಣೋಯ್‌ ಘೋಷಿಸಿ, ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.

* ಇದು 2ನೇ ದಾಖಲೆ

ಅವರು ಕಳೆದ ವರ್ಷ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು 1.40 ಕಿ.ಮಿ. ಬ್ರೆಸ್ವ್‌ ಸ್ಟ್ರೋಕ್‌ ಶೈಲಿಯಲ್ಲಿ ಸಮುದ್ರದಲ್ಲಿ ಈಜಿ ಇಂಡಿಯನ್‌ ಬುಕ್‌ ಆಫ್‌ ರೆಕಾಡ್ಸ್‌ನಲ್ಲಿ ತಮ್ಮ ಹೆಸರು ದಾಖಲಿಸಿದ್ದಾರೆ. ಸಾವಿರಕ್ಕೂ ಹೆಚ್ಚು ಜನರಿಗೆ ಸಮುದ್ರದಲ್ಲಿ ಈಜುವ ತರಬೇತಿ ನೀಡಿದ್ದಾರೆ.  ಕಳೆದ ವರ್ಷ ಗಂಗಾಧರ ಜಿ. ಕಡೆಕಾರು ಅವರು ಪದ್ಮಾಸನ ಶೈಲಿಯಲ್ಲಿ (ಪದ್ಮಾಸನ ಭಂಗಿಯಲ್ಲಿ ಕಾಲುಗಳನ್ನು ಮಡಚಿ, ಸರಪಳಿಯಿಂದ ಬಿಗಿದು, ಬ್ರೆಸ್ವ್‌ ಸ್ಟ್ರೋಕ್‌ ಶೈಲಿಯಲ್ಲಿ) ಇಂಡಿಯನ್‌ ಬುಕ್ ಆಫ್ ರೆಕಾರ್ಡ್ ಸೇರಲು ಆಯೋಜಕರು 800 ಮೀಟರ್ ಈಜುವ ಗುರಿ ನೀಡಿದ್ದರು. ಆದರೆ ಅನುಭವಿ ಈಜು ತರಬೇತುದಾರರಾದ ಗಂಗಾಧರ್ ಅವರು 1,400 ಮೀಟರ್(1.4 ಕಿಲೋ ಮೀಟರ್) ದೂರ ಈಜಿ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ನಿರ್ಮಿಸಿದ್ದರು. ಅವರು ಕೇವಲ  ಸಮಯ 1 ಗಂಟೆ 13 ನಿಮಿಷ 7 ಸೆಕುಂಡುಗಳಲ್ಲಿ ಈ ದಾಖಲೆ ನಿರ್ಮಿಸಿದ್ದರು.

ಸಮುದ್ರದಲ್ಲಿ 1 ಗಂಟೆ ಪದ್ಮಾಸನದಲ್ಲಿ ಈಜಿ ದಾಖಲೆ ಬರೆದ 65ರ ಗಂಗಾಧರ್‌!

ಅಲ್ಲದೇ ತನ್ನ 41 ಮಂದಿ ಶಿಷ್ಯರೊಂದಿಗೆ ಸೇಂಟ್‌ ಮೇರಿಸ್‌ ದ್ವೀಪದ ತನಕ 4 ಕಿ.ಮೀ. ಈಜಿದ್ದಾರೆ. ರಾಷ್ಟ್ರಮಟ್ಟದ ಹಿರಿಯರ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ 3 ಚಿನ್ನ, 1 ಬೆಳ್ಳಿ, 4 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ಬಹಳ ಖುಷಿಯಾಗುತ್ತಿದೆ. ನಾನು ಅಂದುಕೊಂಡಂತೆ ಸಮುದ್ರ ಇರಲಿಲ್ಲ. ಕಡಲಿನಲ್ಲಿ ಗಾಳಿಯ ಅಬ್ಬರ ಸಿಕ್ಕಾಪಟ್ಟೆ ಜಾಸ್ತಿ ಇತ್ತು. ಇದರಿಂದ ಸ್ವಲ್ಪ ಕಷ್ಟ ಆಯಿತು. ಆದರೆ ನಾನು ಗುರಿ ತಲುಪಲೇಬೇಕು ಎಂದು ಛಲ ಹೊಂದಿದ್ದೆ, ಆದ್ದರಿಂದ ದಾಖಲೆ ಸಾಧ್ಯವಾಯಿತು. - ಗಂಗಾಧರ ಕಡೆಕಾರ್‌, ವಿಶ್ವ ದಾಖಲೆಯ ಈಜುಗಾರ

ಪದ್ಮಾಸನ ಭಂಗಿಯಲ್ಲಿ1.4 ಕಿಮೀ ಈಜಿ ದಾಖಲೆ ಬರೆದ ಉಡುಪಿಯ ಸಾಹಸಿ ಈಜುಗಾರ.!

ಗಂಗಾಧರ ಅವರದ್ದು ನಿವೃತ್ತಿಯಾಗಿ ಮನೆಯಲ್ಲಿ ಕುಳಿತುಕೊಳ್ಳುವ ವಯಸ್ಸು. ಆದರೆ 65ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದಾರೆ ಎಂದರೆ ನಿಜಕ್ಕೂ ಗ್ರೇಟ್‌. ಅವರ ಛಲಕ್ಕೆ ಹ್ಯಾಟ್ಸಾಪ್‌, ಇದೊಂದು ಎಲ್ಲರಿಗೂ ಆದರ್ಶಪ್ರಾಯ ಮತ್ತು ಮೈಲಿಗಲ್ಲಿನ ಸಾಧನೆ. - ಮನೀಷ್‌ ಬಿಷ್ಣೋಯ್, ಗೋಲ್ಡನ್‌ ಬುಕ್‌ನ ವೀಕ್ಷಕ

click me!