ದೆಹಲಿ ಮಹಾನಗರ ಪಾಲಿಕೆ ಚುನಾವಣೆ: ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯವೇನು?

By Suvarna Web DeskFirst Published Apr 25, 2017, 3:26 PM IST
Highlights

ಇಂದು ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದೆ. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ದಿಗ್ವಿಜಯ ಸಾಧಿಸಿದ್ದ ಆಮ್ ಆದ್ಮಿ, ಈ ಚುನಾವಣೆಯಲ್ಲಿ ಹೀನಾಯ ಸೋಲು ಕಾಣಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.  ಚುನಾವಣೋತ್ತರ ಸಮೀಕ್ಷೆಯೇ ನಿಜವಾದರೆ, ತಾವು ಮತ್ತೆ ಚಳವಳಿ ಕೂರುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಎಚ್ಚರಿಕೆ ನೀಡಿದ್ದಾರೆ.

ನವದೆಹಲಿ(ಎ.26): ಇಂದು ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದೆ. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಐತಿಹಾಸಿಕ ದಿಗ್ವಿಜಯ ಸಾಧಿಸಿದ್ದ ಆಮ್ ಆದ್ಮಿ, ಈ ಚುನಾವಣೆಯಲ್ಲಿ ಹೀನಾಯ ಸೋಲು ಕಾಣಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.  ಚುನಾವಣೋತ್ತರ ಸಮೀಕ್ಷೆಯೇ ನಿಜವಾದರೆ, ತಾವು ಮತ್ತೆ ಚಳವಳಿ ಕೂರುವುದಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಎಚ್ಚರಿಕೆ ನೀಡಿದ್ದಾರೆ.

70 ಕ್ಷೇತ್ರಗಳಲ್ಲಿ 67 ಸ್ಥಾನಗಳಲ್ಲಿ ಗೆಲುವು. ಇದು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಪಡೆದಿದ್ದ ಫಲಿತಾಂಶ. ಲೋಕಸಭೆಯಲ್ಲಿ ಭರ್ಜರಿ ಜಯ ಸಾಧಿಸಿದ್ದ ಬಿಜೆಪಿ ಆಮ್ ಆದ್ಮಿ ಅಲೆಯೆದುರು ಸೋತು ಸುಣ್ಣವಾಗಿತ್ತು.
ಈಗ ಮತ್ತೊಮ್ಮೆ ದೆಹಲಿ ಚುನಾವಣೆ ಎದುರಿಸಿದೆ. ಈ ಬಾರಿ ಚುನಾವಣೆ ಎದುರಿಸಿರುವು ವಿಧಾನಸಭೆಗಲ್ಲ. ದೆಹಲಿ ಮಹಾನಗರ ಪಾಲಿಕೆಗೆ. ಒಟ್ಟು 272 ಸದಸ್ಯ ಬಲದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಸೋಲಲಿದ್ದು, ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ದೆಹಲಿ ಪಾಲಿಕೆ ಚುನಾವಣೋತ್ತರ ಸಮೀಕ್ಷೆ (272 ಸ್ಥಾನ)

ಇಂಡಿಯಾ ಟುಡೇ/ಆಕ್ಸಿಸ್ ಸಂಸ್ಥೆಯ ಸಮೀಕ್ಷೆ ಪ್ರಕಾರ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಗೆಲ್ಲುವುದು 23ರಿಂದ 35 ಸ್ಥಾನಗಳನ್ನು ಮಾತ್ರ. ಬಿಜೆಪಿ 202ರಿಂದ 220 ಕ್ಷೇತ್ರ ಗೆಲ್ಲಲಿದೆ. ಕಾಂಗ್ರೆಸ್ 19ರಿಂದ 31 ಸ್ಥಾನ ಗೆಲ್ಲಲಿದೆ.

ಇನ್ನು ಎಬಿಪಿ ನ್ಯೂಸ್ ಸಮೀಕ್ಷೆಯಲ್ಲೂ ಬಿಜೆಪಿಗೇ ಬಹುಮತ ಸಿಕ್ಕಿದೆ. ಎಎಪಿ 24 ಸ್ಥಾನಗಳಲ್ಲಿ ಗೆದ್ದರೆ, ಬಿಜೆಪಿ 218 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ 22 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ದೆಹಲಿ ಯುನಿವರ್ಸಿಟಿಯ ಡೆವಲಪಿಂಗ್ ಕಂಟ್ರಿಸ್ ರಿಸರ್ಚ್ ಸೆಂಟರ್ ಕೂಡಾ ಎಎಪಿ ಸೋಲಿನ ಸುಳಿವು ನೀಡಿದೆ. ದೆಹಲಿ ವಿವಿ ಸಮೀಕ್ಷೆ ಪ್ರಕಾರ ಎಎಪಿ 29, ಬಿಜೆಪಿ 214 ಹಾಗೂ ಕಾಂಗ್ರೆಸ್ 24 ಕ್ಷೇತ್ರಗಳಲ್ಲಿ ಗೆಲ್ಲಲಿವೆ.

ಆದರೆ, ಇದನ್ನು ಒಪ್ಪಲು ಆಮ್ ಆದ್ಮಿ ನಾಯಕ ಕೇಜ್ರಿವಾಲ್ ಸಿದ್ಧವಿಲ್ಲ. ಚುನಾವಣೆ ಆರಂಭವಾದಾಗಿನಿಂದ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಮೇಲೆ ಅಕ್ರಮದ ಆರೋಪ ಮಾಡುತ್ತಿರುವ ಕೇಜ್ರಿವಾಲ್, ಫಲಿತಾಂಶ ಸಮೀಕ್ಷೆಯ ಪ್ರಕಾರವೇ ಬಂದಿದ್ದಾದರೆ, ನಾನು ಮತ್ತೆ ಚಳವಳಿ ಮಾಡುತ್ತೇನೆ ಎಂದು ಘೋಷಿಸಿದ್ದಾರೆ. ಆಮ್ ಆದ್ಮಿ ಪ್ರಕಾರ, ಅವರ ಪಕ್ಷ 218 ಕ್ಷೇತ್ರಗಳಲ್ಲಿ ಗೆಲ್ಲಬೇಕು. ಇನ್ನು ಕಾಂಗ್ರೆಸ್, ಸಮೀಕ್ಷೆಗಳನ್ನು ಒಪ್ಪುವ ಅಥವಾ ನಿರಾಕರಿಸುವ ಗೋಜಿಗೇ ಹೋಗಿಲ್ಲ. ಫಲಿತಾಂಶವೇ ಬರಲಿದೆ. ಕಾದು ನೋಡುತ್ತೇವೆ ಎಂದಿದೆ. ಇನ್ನು ಬಿಜೆಪಿಗೆ ಸಂಭ್ರಮ ತರುವ ವಿಷಯವೇ ಸಮೀಕ್ಷೆಯಲ್ಲಿರುವುದರಿಂದ, ಇದು ಜನಾಭಿಮತ ಎಂದು ಬಣ್ಣಿಸಿದೆ.

ಒಟ್ಟಿನಲ್ಲಿ, ದೆಹಲಿ ಪಾಲಿಕೆಯ ಫಲಿತಾಂಶ ಇಂದು ಏನೇ ಬರಲಿ, ಅದು ವಿವಾದವಾಗುವುದಂತೂ ಖಂಡಿತಾ. ಬಿಜೆಪಿ ಗೆದ್ದರೆ, ಅದು ಇವಿಎಂಗಳನ್ನು ತಿರುಚಲಾಗಿದೆ ಎಂಬ ಆರೋಪವನ್ನು ದೊಡ್ಡ ಮಟ್ಟದಲ್ಲಿ ಕೂಗಲಿದೆ. ಅಕಸ್ಮಾತ್ ಬಿಜೆಪಿ ಸೋತು ಎಎಪಿ ಗೆದ್ದರೆ, ಪ್ರತಿಭಟನೆಗೆ ಹೆದರಿ ಬಿಜೆಪಿ ಇವಿಎಂಗಳನ್ನು ತಿರುಚುವ ಕೆಲಸಕ್ಕೆ ಕೈ ಹಾಕಲಿಲ್ಲ. ಹಾಗಾಗಿ ಗೆದ್ದೆವು ಎಂದು ಬೀಗಲಿದೆ. ಈ ಎಲ್ಲ ಸಂಶಯಗಳಿಗೆ ಇಂದು ಉತ್ತರ ಸಿಗಲಿದೆ.

click me!