
ಬೆಂಗಳೂರು (ಫೆ. 25): ಮೈಸೂರು ಸಂಸ್ಥಾನದ ಉತ್ತರಾಧಿಕಾರಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಯುವರಾಣಿ ತ್ರಿಷಿಕಾಕುಮಾರಿ ದಂಪತಿಯ ಪುತ್ರನ ನಾಮಕರಣ ಕಾರ್ಯ ಇಂದು ಅರಮನೆ ಮೈದಾನದಲ್ಲಿ ನೆರವೇರುತ್ತಿದ್ದು, ಮೈಸೂರ ಸಂಸ್ಥಾನದ ಕುಡಿಗೆ ಆದ್ಯ ವೀರ್ ನರಸಿಂಹರಾಜ ಒಡೆಯರ್ ಎಂದು ನಾಮಕರಣ ಮಾಡಲಾಗಿದೆ.
ಈ ನಾಮಕರಣ ಕಾರ್ಯಕ್ಕೆ ಎರಡೂ ಕುಟುಂಬಗಳ ಸೀಮಿತ ವ್ಯಕ್ತಿಗಳನ್ನು ಮಾತ್ರ ಆಹ್ವಾನಿಸಿದ್ದು, ರಾಜಮಾತೆ ಪ್ರಮೋದಾದೇವಿ ಒಡೆಯರ್ ಸಮ್ಮುಖದಲ್ಲೇ ಈ ಶುಭ ಕಾರ್ಯ ನೆರವೇರುತ್ತಿರುವುದು ವಿಶೇಷ. ಯಾಕೆಂದರೆ ಮಗನೊಂದಿಗೆ ಮುನಿಸಿಕೊಂಡಿದ್ದ ರಾಜಮಾತೆ ನಾಮಕರಣದಿಂದ ದೂರವಿರುತ್ತಾರೆಂಬ ವದಂತಿ ಹಬ್ಬಿತ್ತು. ಆ ವದಂತಿಗೆ ರಾಜಮಾತೆ ತೆರೆ ಎಳೆಯಲಿದ್ದಾರೆ.
ಸಾಮಾನ್ಯವಾಗಿ ಮೈಸೂರಿನ ರಾಜ ವಂಶಸ್ಥರಿಗೆ ಸಂಬಂಧಿಸಿದ ಎಲ್ಲಾ ಶುಭ ಕಾರ್ಯವೂ ವಿಶ್ವವಿಖ್ಯಾತ ಮೈಸೂರಿನ ಅರಮನೆಯ ಒಳ ಪ್ರಾಂಗಣದಲ್ಲಿರುವ ಕಲ್ಯಾಣ ಮಂಟಪದಲ್ಲಿಯೇ ನೆರವೇರುತ್ತಿತ್ತು. ಆದರೆ ತಾಯಿ-ಮಗನ ಮುನಿಸಿನಿಂದಾಗಿ ಈ ಬಾರಿ ಸ್ಥಳ ಬದಲಾವಣೆಯಾಗಿದೆ. ಶಾಸ್ತ್ರ ಸಂಪ್ರದಾಯ ಆಚರಣೆಯಲ್ಲಿ ರಾಜಮಾತೆ ಎಷ್ಟು ಕಠೋರವಾಗಿದ್ದಾರೆಂದರೆ, ಸೊಸೆ ತ್ರಿಷಿಕಾಕುಮಾರಿಯ ಸೀಮಂತ ಕಾರ್ಯವನ್ನೂ ಕಲ್ಯಾಣ ಮಂಟಪದಲ್ಲೇ ನೆರವೇರಿಸಿದ್ದರು. ಆದರೆ ಈಗ ಒಲ್ಲದ ಮನಸ್ಸಿನಿಂದ ಬೆಂಗಳೂರು ಅರಮನೆಯಲ್ಲಿ ನೆರವೇರಿಸಲು ಮುಂದಾಗಿದ್ದಾರೆಂಬುದು ನಂಬಲರ್ಹ ಮೂಲಗಳು ತಿಳಿಸಿವೆ.
ಫೆಬ್ರವರಿ 19ರಂದೇ ಮಗುವಿನ ನಾಮಕರಣಕ್ಕೆ ಮುಹೂರ್ತ ನಿಗದಿಯಾಗಿತ್ತು. ಆದರೆ ಕುಟುಂಬದೊಳಗೆ ಉಂಟಾದ ವಿರಸದಿಂದಾಗಿ ಅದನ್ನು ಮುಂದೂಡಲಾಗಿತ್ತು. ಆದರೆ ಅದೇ ದಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪ್ರತಿಷ್ಠಾನಕ್ಕೆ ಬೆಂಗಳೂರ ಅರಮನೆಯಲ್ಲಿ ರಾಜಮಾತೆ ಚಾಲನೆ ನೀಡಿದ್ದರು. ಈ ಕಾರ್ಯಕ್ರಮದಲ್ಲಿ ಯದುವೀರ್ ದಂಪತಿಗೆ ಸಾಂಕೇತಿಕವಾಗಿ ಭಾಗಿಯಾಗಿದ್ದರೆ ಹೊರತು ವೇದಿಕೆ ಏರಿರಲಿಲ್ಲ. ಇದು ತಾಯಿ-ಮಗನ ಮಧ್ಯೆ ಮುನಿಸು ಏರ್ಪಟ್ಟಿದೆ ಎಂಬುದು ಬಹಿರಂಗಗೊಳ್ಳಲು ಕಾರಣವಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.