ಸಾಹಿತಿ ಪ್ರೊ.ಎಚ್.ಎಲ್. ಕೇಶವವಮೂರ್ತಿ ನಿಧನ

Published : Mar 30, 2017, 04:55 PM ISTUpdated : Apr 11, 2018, 01:06 PM IST
ಸಾಹಿತಿ ಪ್ರೊ.ಎಚ್.ಎಲ್. ಕೇಶವವಮೂರ್ತಿ ನಿಧನ

ಸಾರಾಂಶ

ವೈಚಾರಿಕ ರಾಜಕೀಯ ವಿಡಂಬಣೆಗಳಿಗೆ ಪ್ರಸಿದ್ಧರಾಗಿದ್ದ ಸಾಹಿತಿ ಪ್ರೊ.ಎಚ್.ಎಲ್. ಕೇಶವವಮೂರ್ತಿ (೭೮) ಗುರುವಾರ ರಾತ್ರಿ ಮಂಡ್ಯದಲ್ಲಿ ನಿಧನರಾದರು.

ಮಂಡ್ಯ (ಮಾ.30): ವೈಚಾರಿಕ ರಾಜಕೀಯ ವಿಡಂಬಣೆಗಳಿಗೆ ಪ್ರಸಿದ್ಧರಾಗಿದ್ದ ಸಾಹಿತಿ ಪ್ರೊ.ಎಚ್.ಎಲ್. ಕೇಶವವಮೂರ್ತಿ (೭೮) ಗುರುವಾರ ರಾತ್ರಿ ಮಂಡ್ಯದಲ್ಲಿ ನಿಧನರಾದರು.

ಇವರು ಪತ್ನಿ ಜಯವಾಣಿ, ಭಾವ ಮಾಜಿ ಶಾಸಕ ಜಿ.ಬಿ. ಶಿವಕುಮಾರ್ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ಪುತ್ರ ಪ್ರವೀಣ್ ಕಳೆದ 15 ವರ್ಷಗಳ ಹಿಂದೆ ಅನಾರೋಗ್ಯದಿಂದ ನಿಧನರಾಗಿದ್ದರು. ಪತ್ರಕರ್ತ ಪಿ. ಲಂಕೇಶ್ ಗರಡಿಯಲ್ಲಿ ಪಳಗಿದ ಎಚ್‌ಎಲ್‌ಕೆ ಎಂದೇ ಪ್ರಸಿದ್ಧರಾಗಿದ್ದ ಕೇಶವಮೂರ್ತಿ ಕಳೆದ ಹಲವು ತಿಂಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಮಿಮ್ಸ್ ನ ತುರ್ತುನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು.

ಜಿಲ್ಲೆಯ ನಾಗಮಂಗಲ ತಾಲೂಕಿನ ಹೆರಗನಹಳ್ಳಿಯಲ್ಲಿ 1939, ಡಿ.28 ರಂದು ಎಚ್ .ಎಂ. ಲಿಂಗೇಗೌಡ, ತಾಯಿ ಚೆನ್ನಮ್ಮ ಪುತ್ರರಾಗಿ ಜನಿಸಿದ್ದರು. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಬೆಳ್ಳೂರು, ನಾಗಮಂಗಲ ಹಾಗೂ ಮೇಲುಕೋಟೆಯಲ್ಲಿ ಪೂರೈಸಿದ್ದರು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ, ಹಾಸನದ ಮಲ್ನಾಡ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಪದವಿ, ತಿರುಪತಿ ವೆಂಕಟೇಶ್ವರ ವಿದ್ಯಾಲಯದಲ್ಲಿ ಎಂ.ಇ ಪದವಿ ಮುಗಿಸಿ ನಂತರ ಮಂಡ್ಯ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

ವ್ಯಂಗ್ಯ, ಬರವಣಿಗೆಗಳು ಬಲು ಇಷ್ಟ.

ವೃತ್ತಿಯಲ್ಲಿ ಎಂಜಿನಿಯರ್ ಆದರೂ ಬರವಣಿಗೆ ಅವರ ಹವ್ಯಾಸವಾಗಿತ್ತು. ವಿಡಂಬಣೆ, ಹಾಸ್ಯ, ವ್ಯಂಗ್ಯ ಬರವಣಿಗೆಗಳು ಎಂದರೆ ಅವರಿಗೆ ಬಲು ಇಷ್ಟ. ಎಚ್.ಎಲ್.ಕೆ ಅವರು ಬಹಳ ಮೌನಿಯಾಗಿದ್ದರು. ಆದರೆ, ಹಾಸ್ಯವನ್ನು ತುಂಬ ಪ್ರೀತಿಸುತ್ತಿದ್ದರು. ಮೊನಚಾದ ಮಾತುಗಳಿಂದ ವಿರೋಧಿಗಳಿಗೆ ತಿರುಗೇಟು ನೀಡುತ್ತಿದ್ದರು.

ಕಳೆದ 2016 ರ ನವೆಂಬರ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಕೂಡ ಲಭಿಸಿದೆ. ಮಂಡ್ಯ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿಯೂ ಸಮ್ಮೇಳವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು. 

ಎಚ್‌ಎಲ್‌ಕೆ ಅವರಿಗೆ 1972 ಹಾಗೂ 2007 ರಲ್ಲಿ ಎರಡು ಬಾರಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಬಂದಿದೆ. ಕರ್ನಾಟಕ ಅಕಾಡೆಮಿ ಪ್ರಶಸ್ತಿಯೂ ಲಭಿಸಿತ್ತು. ಅದಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ರಾಜ್ಯ ಸಂಪನ್ಮೂಲ ಸಲಹಾ ಮಂಡಳಿ, ಮೈಸೂರು ವಿವಿ ಸೆನೆಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ರಾಜ್ಯ ವಯಸ್ಕರ ಶಿಕ್ಷಣ ಸಮಿತಿ ನೌಕರರ ಸಂಘ, ನಾಗಮಂಗಲ ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನ. ಕೋಮು ಸೌಹಾರ್ದ ವೇದಿಕೆ ಹಾಗೂ ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಇವರ ಹಲವು ಪುಸ್ತಕಗಳಿಗೆ ಪ್ರಶಸ್ತಿಗಳು ಸಂದಿವೆ.

ಅಪಾರ ಶೋಕ: 

ಎಚ್‌ಎಲ್‌ಕೆ ನಿಧನಕ್ಕೆ ಮಾಜಿ ಸಂಸದ ಜಿ. ಮಾದೇಗೌಡ, ಮಾಜಿ ಸಚಿವ ಆತ್ಮಾನಂದ, ಮಾಜಿ ಶಾಸಕರಾದ ಎಚ್.ಡಿ. ಚೌಡಯ್ಯ, ಜಿ.ಬಿ. ಶಿವಕುಮಾರ್, ಎಂ. ಶ್ರೀನಿವಾಸ್, ಜನಶಕ್ತಿ ವೇದಿಕೆಯ ಡಾ. ವಾಸು, ಬೋರಯ್ಯ, ಸುನಂದಾ ಜಯರಾಂ ಸೇರಿದಂತೆ ಅಪಾರ ಅಭಿಮಾನಿಗಳು ಶೋಕ ವ್ಯಕ್ತಪಡಿಸಿದ್ದಾರೆ.

ಇಂದು ಅಂತ್ಯಕ್ರಿಯೆ: ಗುರುವಾರ ರಾತ್ರಿ ನಿಧನರಾದ ಎಚ್.ಎಲ್. ಕೇಶವಮೂರ್ತಿ ಅಂತ್ಯಕ್ರಿಯೆಯನ್ನು ಶುಕ್ರವಾರ ಮಧ್ಯಾಹ್ನ ೧ಗಂಟೆಗೆ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿರುವ ಗೃಹ ಮಂಡಳಿಯ ಅಪಾರ್ಟ್‌ಮೆಂಟ್‌ನಲ್ಲಿರುವ ಅವರ ನಿವಾಸದ ಬಳಿಯ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟಂಬದ ಮೂಲಗಳು ಹೇಳಿವೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿವಾದಿತ Bengaluru Tunnel Road ಟೆಂಡರ್ ಅದಾನಿ ಗ್ರೂಪ್ ಪಾಲು? ಕಾಂಗ್ರೆಸ್ ಸರ್ಕಾರಕ್ಕೆ ಧರ್ಮಸಂಕಟ!
ಕರ್ನಾಟಕದ ನೆಲದಲ್ಲಿ ಕೋಟಿ ಕೋಟಿ ಸಂಪತ್ತು? ಯಾವ ಜಿಲ್ಲೆಗಳಲ್ಲಿದೆ ಚಿನ್ನ, ವಜ್ರದ ನಿಕ್ಷೇಪ?