
ಬೆಂಗಳೂರು(ಮಾ.13): ಮತ್ತೊಂದು ಅವಧಿಗಾಗಿ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹಾಲಿ ರಾಜ್ಯಸಭಾ ಸದಸ್ಯ ಹಾಗೂ ಉದ್ಯಮಿ ರಾಜೀವ್ ಚಂದ್ರಶೇಖರ್ ಅವರ ಆಸ್ತಿಯ ಮೌಲ್ಯ 58.13 ಕೋಟಿ ರು. ಆಗಿದ್ದು, ಸೋಮವಾರ ಚುನಾವಣಾಧಿಕಾರಿಗೆ ಸಲ್ಲಿಕೆ ಮಾಡಿರುವ ಆಸ್ತಿ ಕುರಿತ ಪ್ರಮಾಣ ಪತ್ರದಲ್ಲಿ ಈ ಮಾಹಿತಿಯನ್ನು ಒದಗಿಸಲಾಗಿದೆ.
ಸಂಸದ ರಾಜೀವ್ ಚಂದ್ರಶೇಖರ್ ಅವರು 2,992 ರು. ನಗದು ಸೇರಿದಂತೆ 27.98 ಕೋಟಿ ರು. ಚರಾಸ್ತಿ ಹೊಂದಿದ್ದಾರೆ. ಪತ್ನಿ ಅಂಜು ಚಂದ್ರಶೇಖರ್ ಅವರ ಬಳಿ ಒಂದು ಲಕ್ಷ ರು. ನಗದು ಸೇರಿ 9.41 ಕೋಟಿ ರು. ಚರಾಸ್ತಿ ಇದೆ. ಅವಲಂಬಿತರಾದ ವೇದ್ ರಾಜೀವ್ ಚಂದ್ರಶೇಖರ್ ಅವರು 7.77 ಕೋಟಿ ರು. ಮತ್ತು ದೇವಿಕಾ ಚಂದ್ರಶೇಖರ್ 6.46 ಕೋಟಿ ರು. ಚರಾಸ್ತಿ ಹೊಂದಿದ್ದಾರೆ. ರಾಜೀವ್ ಚಂದ್ರಶೇಖರ್ ಅವರ ವಾರ್ಷಿಕ ಆದಾಯವು 28 ಕೋಟಿ ರು. ಮತ್ತು ಪತ್ನಿ ಅಂಜು ಚಂದ್ರಶೇಖರ್ 21.44 ಲಕ್ಷ ರು. ವಾರ್ಷಿಕ ಆದಾಯ ಹೊಂದಿದ್ದಾರೆ ಎಂದು ಆಸ್ತಿ ವಿವರದಲ್ಲಿ ಉಲ್ಲೇಖ ಮಾಡಲಾಗಿದೆ.
12.96 ಕೋಟಿ ರು. ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿರುವ ರಾಜೀವ್ ಚಂದ್ರಶೇಖರ್ ಅವರು ಕೋರಮಂಗಲದಲ್ಲಿ ನಿವಾಸವನ್ನು ಹೊಂದಿದ್ದಾರೆ. 5.26 ಕೋಟಿ ರು.ಗೆ ಆಸ್ತಿಯನ್ನು ಖರೀದಿಸಿದ್ದು, ಇದರ ಮೌಲ್ಯ ಪ್ರಸ್ತುತ ಮಾರುಕಟ್ಟೆದರ 12.96 ರು. ಆಗಿದೆ. ಪತ್ನಿಯ ಹೆಸರಲ್ಲಿ ವಿವಿಧ ಬ್ಯಾಂಕ್, ಹಣಕಾಸು ಸಂಸ್ಥೆಗಳಿಂದ 1.22 ಕೋಟಿ ರು. ಸಾಲ ಮಾಡಲಾಗಿದೆ. ವಿವಿಧ ಬ್ಯಾಂಕ್'ಗಳಲ್ಲಿ ರಾಜೀವ್ ಚಂದ್ರಶೇಖರ್ ಹೆಸರಲ್ಲಿ 4.84 ಕೋಟಿ ರು., ಪತ್ನಿ ಹೆಸರಲ್ಲಿ 24.85 ಲಕ್ಷ ರು., ವೇದ್ ರಾಜೀವ್ ಚಂದ್ರಶೇಖರ್ ಹೆಸರಲ್ಲಿ 7.75 ಕೋಟಿ ರು., ದೇವಿಕಾ ಚಂದ್ರಶೇಖರ್ 6.64 ಕೋಟಿ ರು. ಠೇವಣಿ ಇಟ್ಟಿರುವ ಬಗ್ಗೆ ನಮೂದಿಸಲಾಗಿದೆ. ಷೇರು, ಬಾಂಡ್ ಸೇರಿದಂತೆ ವಿವಿಧ ಕಡೆ ರಾಜೀವ್ ಚಂದ್ರಶೇಖರ್ ಅವರು 15.45 ಕೋಟಿ ರು. ಹೂಡಿಕೆ ಮಾಡಿದ್ದು, ಪತ್ನಿ 4.16 ಕೋಟಿ ರು. ಹೂಡಿಕೆ ಮಾಡಿದ್ದಾರೆ ಎಂದು ತಿಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.