ಮಣಿಪಾಲದ ವಿದ್ಯಾರ್ಥಿನಿಗೆ ಕೊನೆಗೂ ಸಿಕ್ತು ‘ಕೈ’: ವಿಶ್ವದ ಮೊದಲ ಆಪರೇಷನ್ ಕೊಚ್ಚಿಯಲ್ಲಿ ಯಶಸ್ವಿ

Published : Sep 29, 2017, 03:52 PM ISTUpdated : Apr 11, 2018, 12:40 PM IST
ಮಣಿಪಾಲದ ವಿದ್ಯಾರ್ಥಿನಿಗೆ ಕೊನೆಗೂ ಸಿಕ್ತು ‘ಕೈ’: ವಿಶ್ವದ ಮೊದಲ ಆಪರೇಷನ್ ಕೊಚ್ಚಿಯಲ್ಲಿ ಯಶಸ್ವಿ

ಸಾರಾಂಶ

ಅಪಘಾತದಲ್ಲಿ ಎರಡೂ ತೋಳುಗಳನ್ನು ಕಳೆದುಕೊಂಡಿದ್ದ ಮಣಿಪಾಲದ 19 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳಿಗೆ ಯುವಕನೊಬ್ಬನ ಎರಡು ತೋಳುಗಳನ್ನು ಕಸಿ ಮಾಡಿರುವ ಅಪರೂಪದ ಘಟನೆ ನಡೆದಿದೆ. ಎರಡೂ ತೋಳುಗಳ ಕಸಿ ಏಷ್ಯಾದಲ್ಲಿ ನಡೆದಿರುವುದು ಇದೇ ಮೊದಲು.

ಕೊಚ್ಚಿ(ಸೆ.29): ಅಪಘಾತದಲ್ಲಿ ಎರಡೂ ತೋಳುಗಳನ್ನು ಕಳೆದುಕೊಂಡಿದ್ದ ಮಣಿಪಾಲದ 19 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳಿಗೆ ಯುವಕನೊಬ್ಬನ ಎರಡು ತೋಳುಗಳನ್ನು ಕಸಿ ಮಾಡಿರುವ ಅಪರೂಪದ ಘಟನೆ ನಡೆದಿದೆ. ಎರಡೂ ತೋಳುಗಳ ಕಸಿ ಏಷ್ಯಾದಲ್ಲಿ ನಡೆದಿರುವುದು ಇದೇ ಮೊದಲು.

ಅದಕ್ಕಿಂತ ಮುಖ್ಯವಾಗಿ ಯುವಕನೊಬ್ಬನ ತೋಳುಗಳನ್ನು ಯುವತಿಗೆ ಅಳವಡಿಸಿರುವುದು ವಿಶ್ವದಲ್ಲೇ ಪ್ರಥಮ ಬಾರಿ! ಈ ಮಹಾನ್ ಸಾಧನೆ ಮೆರೆದಿರುವವರು ಕೊಚ್ಚಿಯ ಅಮೃತಾ ವೈದ್ಯ ವಿಜ್ಞಾನ ಸಂಸ್ಥೆ (ಏಮ್ಸ್) ವೈದ್ಯರು. 20 ಸರ್ಜನ್‌ಗಳು, 16 ಅರಿವಳಿಕೆ ತಜ್ಞರು 13 ತಾಸುಗಳ ಕಾಲ ಈ ಕಸಿ ನಡೆಸಿದ್ದಾರೆ.

ಆಗಿದ್ದೇನು?:

ಪುಣೆಯ ಟಾಟಾ ಮೋಟರ್ಸ್‌ ಕಂಪನಿಯಲ್ಲಿ ಹಿರಿಯ ವ್ಯವಸ್ಥಾಪಕರಾಗಿರುವ ಕೀರಗೌಡ ಸಿದ್ದನಗೌಡರ್ ಹಾಗೂ ಸುಮಾ ನುಗ್ಗಿಹಳ್ಳಿ ದಂಪತಿಗೆ ಶ್ರೇಯಾ ಸಿದ್ದನಗೌಡರ್ ಎಂಬ 19 ವರ್ಷದ ಪುತ್ರಿ ಇದ್ದಾಳೆ. ಆಕೆ ಮಣಿಪಾಲದಲ್ಲಿನ ಮಣಿಪಾಲ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಪುಣೆಯಿಂದ ಒಮ್ಮೆ ಮಣಿಪಾಲಕ್ಕೆ ಬಸ್‌'ನಲ್ಲಿ ಬರುತ್ತಿದ್ದಾಗ ಬಸ್ ಅಪಘಾತಕ್ಕೆ ಒಳಗಾಗಿತ್ತು. ಅದರಡಿ ಸಿಲುಕಿದ್ದ ಶ್ರೇಯಾ, ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದಳು. ಈ ನಡುವೆ, ಎರ್ನಾಕುಲಂನ ರಾಜಗಿರಿ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿ, 20 ವರ್ಷದ ಸಚಿನ್ ಎಂಬಾತ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ. ಆತನ ಮೆದುಳು ನಿಷ್ಕ್ರಿಯವಾಗಿತ್ತು. ಸಚಿನ್‌'ನ ತೋಳುಗಳನ್ನು ದಾನ ಮಾಡಲು ಪೋಷಕರು ಒಪ್ಪಿದರು. ಆತನ ತೋಳುಗಳನ್ನು ಶ್ರೇಯಾಗೆ ಅಳವಡಿಸಲಾಗಿದೆ.

ವಿಶ್ವದಲ್ಲಿ ಇಂತಹ 9 ಕಸಿಗಳು ಆಗಿವೆ. ಆದರೆ ಏಷ್ಯಾದಲ್ಲಿ ಇದೇ ಮೊದಲು. ಅದೂ ಯುವಕನ ತೋಳನ್ನು ಯುವತಿಗೆ ಅಳವಡಿಸಿದ್ದು ವಿಶ್ವದಲ್ಲೇ ಮೊದಲು ಎಂದು ವೈದ್ಯರು ತಿಳಿಸಿದ್ದಾರೆ. ಕಸಿ ಮಾಡಿಸಿಕೊಂಡಿರುವ ಶ್ರೇಯಾ ಈಗ ಬೆರಳುಗಳು, ಮುಂಗೈ, ಭುಜ ಅಲುಗಾಡಿಸುತ್ತಿದ್ದಾಳೆ. ಕೆಲ ವಾರಗಳ ಬಳಿಕ ಮೊಣಕೈ ಚಲನೆ ಶುರುವಾಗಲಿದೆ. ಒಂದೂವರೆ ವರ್ಷದಲ್ಲಿ ಶೇ.85ರಷ್ಟು ಚಲನೆಯನ್ನು ಗಳಿಸಿ ಕೊಳ್ಳಲಿದ್ದಾಳೆ ಎಂದು ವೈದ್ಯರು ವಿವರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!