
ಬೆಂಗಳೂರು (ಜ.04): ಗರ್ಭಪಾತಕ್ಕೆ ಒಳಗಾಗಿರುವ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ಪುತ್ರಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ ತಿಳಿಸಿದರು.
ಬುಧವಾರ ವಿಕ್ರಮ್ ಆಸ್ಪತ್ರೆಗೆ ಭೇಟಿ ನೀಡಿ ಇಫಾ ಅವರ ಆರೋಗ್ಯ ವಿಚಾರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಫಾ ಅವರ ಆರೋಗ್ಯದ ಸ್ಥಿತಿ ತೀರಾ ಗಂಭೀರವಾಗಿದೆ. ಒತ್ತಾಯಪೂರ್ವಕವಾಗಿ ಗರ್ಭಪಾತ ಮಾಡಿಸಿದ ಬಗ್ಗೆ ಮಾಹಿತಿ ದೊರೆತಿಲ್ಲ. ಆಕೆ ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ನಿರಂತರವಾಗಿ ನಿಗಾ ವಹಿಸುವಂತೆ ವೈದ್ಯರಿಗೆ ಸೂಚಿಸಲಾಗಿದೆ. ಘಟನೆಯಿಂದ ಆಕೆ ಆಘಾತಕ್ಕೆ ಒಳಗಾಗಿದ್ದಾರೆ. ಚೇತರಿಸಿಕೊಂಡ ಬಳಿಕ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ವೈದ್ಯರು ನೀಡಿದ ಮಾಹಿತಿ ಪ್ರಕಾರ ಆಕೆ ಆಸ್ಪತ್ರೆಗೆ ಬರುವ ಮುನ್ನವೇ ಗರ್ಭಪಾತವಾಗಿತ್ತು. ಮಹಿಳೆ ಯಾರು ಏನು ಎಂದು ಆ ಸಂದರ್ಭದಲ್ಲಿ ನೋಡಲಿಲ್ಲ. ಆಸ್ಪತ್ರೆಗೆ ಸೇರಿಸಿಕೊಂಡು ಚಿಕಿತ್ಸೆ ನೀಡಿದ್ದೇವೆ ಎಂದು ವೈದ್ಯರು ಹೇಳಿರುವುದಾಗಿ ಮಾಹಿತಿ ನೀಡಿದರು.
ಈಗಾಗಲೇ ಹಲಸೂರು ಗೇಟ್ ಮಹಿಳಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅಂಜುಮಾಲ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆ ವೇಳೆ ಇಫಾ ಅವರು ಸ್ವಲ್ಪ ಚೇತರಿಕೆ ಬಳಿಕ ಲಿಖಿತವಾಗಿ ಉತ್ತರ ನೀಡುತ್ತೇನೆ ಎಂದು ಹೇಳಿದ್ದಾರೆ.
ಆಸ್ಪತ್ರೆಯಿಂದ ಪೊಲೀಸ್ ಠಾಣೆಗೆ ಮಾಹಿತಿ ಕಳುಹಿಸಿದ್ದಾರೆ. ಈಗಾಗಲೇ ಇಫಾ ಪತಿ ನೀಡಿರುವ ದೂರು ಪ್ರತಿಯನ್ನು ಕಳುಹಿಸುವಂತೆ ಡಿಸಿಪಿಯವರಿಗೆ ಪತ್ರ ಬರೆದಿದ್ದೇನೆ. ದೂರು ಪ್ರತಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದರು.
ಕಮ್ಮನಹಳ್ಳಿ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಕುರಿತು ಹೇಳಿಕೆ ನೀಡಿದ ಅವರು, ಮಾಧ್ಯಮದಲ್ಲಿ ಸುದ್ದಿ ನೋಡಿದ ಮೇಲೆ ವಿಚಾರ ತಿಳಿಯಿತು. ಯುವತಿ ಅಥವಾ ಸಂಬಂಧಿಕರು ಇದುವರೆಗೂ ದೂರು ದಾಖಲಿಸಿಲ್ಲ. ಹಾಗಾಗಿ ವಿಡಿಯೋ ನೋಡಿದ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿದ್ದೇವೆ. ಈ ಕುರಿತಾಗಿ ಪೊಲೀಸರಿಂದ ವಿವರಣೆ ಪಡೆದಿದ್ದೇವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.