ಸೊಂಟ ಮುಟ್ಟಿ ಪರಾರಿಯಾಗುತ್ತಿದ್ದವನ ಬೆನ್ನಟ್ಟಿ ಹಿಡಿದಳು - ಭೇಷ್ ನಾರಿ

Published : Nov 20, 2017, 05:17 PM ISTUpdated : Apr 11, 2018, 12:37 PM IST
ಸೊಂಟ ಮುಟ್ಟಿ ಪರಾರಿಯಾಗುತ್ತಿದ್ದವನ ಬೆನ್ನಟ್ಟಿ ಹಿಡಿದಳು - ಭೇಷ್ ನಾರಿ

ಸಾರಾಂಶ

ರಸ್ತೆ ಬದಿ ನಿಂತಿದ್ದ  ವೇಳೆ ಸೊಂಟ ಮುಟ್ಟಿ ಬೈಕ್‌'ನಲ್ಲಿ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಯುವತಿಯೇ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಬೆಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರು(ನ.20): ರಸ್ತೆ ಬದಿ ನಿಂತಿದ್ದ ಯುವತಿಯ ಸೊಂಟ ಮುಟ್ಟಿ ಬೈಕ್‌'ನಲ್ಲಿ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಯುವತಿಯೇ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ನ. 17 ರಂದು ರಾತ್ರಿ ಎಚ್‌'ಎಸ್‌'ಆರ್ ಲೇಔಟ್‌'ನ 6ನೇ ಸೆಕ್ಟರ್‌'ನಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಸಂತ್ರಸ್ತೆ ಎಚ್‌'ಎಸ್‌'ಆರ್ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಯುವತಿ ನೀಡಿದ ದೂರಿನ ಮೇರೆಗೆ ಬೇಗೂರು ನಿವಾಸಿ ನಾರಾಯಣ ಸ್ವಾಮಿ (55) ಎಂಬಾತನನ್ನು ಐಪಿಸಿ ಸೆಕ್ಷನ್ (354ಎ) ಲೈಂಗಿಕ ಕಿರುಕುಳ ಪ್ರಕರಣದಡಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಏನಿದು ಘಟನೆ?: 27 ವರ್ಷದ ಸಂತ್ರಸ್ತೆ ಮೂಲತಃ ಕಲ್ಬುರ್ಗಿ ಜಿಲ್ಲೆಯವರಾಗಿದ್ದು, ನಗರದ ಖಾಸಗಿ ಕಂಪನಿಯಲ್ಲಿ ಟೀಂ ಲೀಡರ್ ಆಗಿ ಕೆಲಸಕ್ಕಿದ್ದಾರೆ. ಯುವತಿ ಎಚ್‌'ಎಸ್‌'ಆರ್ ಲೇಔಟ್‌'ನಲ್ಲಿ ವಾಸವಿದ್ದಾರೆ. ನ.17ರಂದು ಕೆಲಸ ಮುಗಿಸಿಕೊಂಡು ಎಚ್‌'ಎಸ್‌'ಆರ್ ಲೇಔಟ್‌'ನಲ್ಲಿರುವ ಜಿಮ್‌'ಗೆ ತೆರಳಿದ್ದರು.

ಜಿಮ್‌'ನಲ್ಲಿ ವ್ಯಾಯಾಮ ಮುಗಿಸಿ ರಾತ್ರಿ 8ರ ಸುಮಾರಿಗೆ ಮನೆಗೆ ತೆರಳಲು ಹೊರಗೆ ಬಂದಿದ್ದರು. ಈಕೆಯ ಸ್ನೇಹಿತ ಜಿಮ್ ಸಮೀಪ ನಿಲುಗಡೆ ಮಾಡಿದ್ದ ಬೈಕ್ ತೆಗೆಯುತ್ತಿದ್ದಾಗ ಇಬ್ಬರು ಬೈಕ್‌'ನಲ್ಲಿ ಸ್ಥಳಕ್ಕೆ ಬಂದಿದ್ದರು. ಈ ವೇಳೆ ಹಿಂಬದಿ ಕುಳಿತಿದ್ದ ಸವಾರ ಯುವತಿಯ ಹಿಂಬದಿಯಿಂದ ಆಕೆಯ ಸೊಂಟ ಮುಟ್ಟಿ ಅಸಭ್ಯವಾಗಿ ವರ್ತಿಸಿ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ.

ಕೂಡಲೇ ಯುವತಿ ಜೋರಾಗಿ ಕೂಗಿಕೊಂಡಿದ್ದು, ಸ್ನೇಹಿತನ ಜತೆ ಬೈಕ್‌'ನಲ್ಲಿ ಆರೋಪಿಗಳ ಬೈಕ್‌'ನ್ನು ಸುಮಾರು ಅರ್ಧ ಕಿ.ಮೀ ಬೆನ್ನಟ್ಟಿದ್ದರು. ಮಾರ್ಗ ಮಧ್ಯೆ ಆರೋಪಿಗಳ ಬೈಕ್ ಅಡ್ಡಗಟ್ಟಿ ಯುವತಿ ಆರೋಪಿಯನ್ನು ಹಿಡಿದಿದ್ದಾರೆ. ಆರೋಪಿಯನ್ನು ಹಿಡಿದು ಯುವತಿ ಕೂಡಲೇ ‘ನಮ್ಮ-100’ಕ್ಕೆ (ಪೊಲೀಸ್ ನಿಯಂತ್ರಣ ಕೊಠಡಿ) ಕರೆ ಮಾಡಿ ವಿಷಯ ಮುಟ್ಟಿಸಿದರು.

ಮತ್ತೆ ಪರಾರಿಯಾಗಲು ಯತ್ನ: ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಆರೋಪಿ ಮತ್ತೆ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಸ್ಥಳದಲ್ಲಿ ಜಮಾಯಿಸಿದ್ದ ಸಾರ್ವಜನಿಕರು ಗೂಸಾ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋದರು ಎಂದು ಸಂತ್ರಸ್ತ ಯುವತಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಘಟನೆ ನಡೆದ ವೇಳೆ ಆರೋಪಿ ಕಂಠಪೂರ್ತಿ ಕುಡಿದಿದ್ದ. ಉದ್ದೇಶ ಪೂರ್ವಕವಾಗಿ ಅಸಭ್ಯವಾಗಿ ಮುಟ್ಟಿದ್ದಾನೆಯೇ ಇಲ್ಲವೇ, ಕುಡಿತ ಮತ್ತಿನಲ್ಲಿ ಕೃತ್ಯ ಎಸಗಿದ್ದಾನೆಯೇ ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಕೃತ್ಯ ನಡೆದ ವೇಳೆ ಆರೋಪಿ ಜತೆಗಿದ್ದ ಆತನ ಸ್ನೇಹಿತನದ್ದು ಯಾವುದೇ ಪಾತ್ರ ಇಲ್ಲ. ಹೀಗಾಗಿ ಆತನ ವಿರುದ್ಧ ದೂರು ದಾಖಲಾಗಿಲ್ಲ ಎಂದು ಎಚ್‌ಎಸ್‌ಆರ್ ಲೇಔಟ್ ಪೊಲೀಸರು ತಿಳಿಸಿದರು. ಘಟನೆ ನಡೆದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜಕೀಯ ತೀಟೆಗೆ ಆರೋಪ, ಯಾವುದೇ ತನಿಖೆಗೆ ಸಿದ್ಧ: ಸಚಿವ ಕೃಷ್ಣ ಬೈರೇಗೌಡ
ಮುಂದಿನ 72 ಗಂಟೆಯಲ್ಲಿ ಭೂಮಿಯತ್ತ 10 ಕ್ಷುದ್ರ ಗ್ರಹ, ಡೇಂಜರ್ ಝೋನ್‌ನಲ್ಲಿದೆಯಾ ಜಗತ್ತು?