
ಹೊಸದಿಲ್ಲಿ(ನ.20): ಚುನಾವಣೆ ಸಂದರ್ಭದಲ್ಲಿ ಒಂದು ಪಕ್ಷ ಮತ್ತೊಂದು ಪಕ್ಷದ ಬಗ್ಗೆ ಆಪಾದಿಸುವುದು, ಗೇಲಿ ಮಾಡುವುದು ಸಾಮಾನ್ಯ. ಈ ಪ್ರವೃತ್ತಿ ಎಂದಿಗೂ ಬದಲಾದ ಉದಾಹರಣೆಯೇ ಇಲ್ಲ, ಬದಲಾಗುವುದೂ ಇಲ್ಲ. ಇದೀಗ ರಾಜಕೀಯ ಅಂಗಳದಲ್ಲಿ ಗುಜರಾತ್ ಚುನಾವಣೆಯದ್ದೇ ಮಾತು, ಆರೋಪ ಪ್ರತ್ಯಾರೋಪ.
ಗುಜರಾತ್ ಚುನಾವಣಾ ರ್ಯಾಲಿ ಸಂದರ್ಭದಲ್ಲಿ ರಾಹುಲ್ ಗಾಂಧಿ ಮಾತನಾಡಿದ್ದ ವಿಡಿಯೋವೊಂದು ಬಹುದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆ ವಿಡಿಯೋದಲ್ಲಿ ರಾಹುಲ್ ಗಾಂಧಿ ‘ ಆಲೂವನ್ನು ಚಿನ್ನವಾಗಿ ಪರಿವರ್ತಿಸಬಹುದು’ ಎಂದಿರುವ ತುಣುಕಿದ್ದು ಸಾಮಾಜಿಕ ಮಾಧ್ಯಮದಲ್ಲಿ ಇದು ನಗೆಪಾಟಲಾಗಿ ಹರಿದಾಡುತ್ತಿದೆ. ಆ ವಿಡಿಯೋವನ್ನು ಹಲವರು ಶೇರ್ ಕೂಡಾ ಮಾಡಿದ್ದಾರೆ.
ಹಾಗಾದರೆ ನಿಜವಾಗಿಯೂ ರಾಹುಲ್ ಗಾಂಧಿ ಹೀಗೆ ಹೇಳಿದ್ದರೇ ಎಂದು ಇದರ ಸತ್ಯಾಸತ್ಯತೆಯನ್ನು ತಿಳಿಯಲು ಹೊರಟಾಗ ಬಯಲಾದ ಸತ್ಯವೇ ಬೇರೆಯದಾಗಿತ್ತು.
ರಾಹುಲ್ ಗಾಂಧಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡುವ ವೇಳೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೇವಲ ಭರವಸೆ ನೀಡುತ್ತಿದೆ. ಆಲೂವನ್ನು ಬಂಗಾರ ಮಾಡುತ್ತೇವೆಂದು ಜನರಿಗೆ ಮಂಕುಬೂದಿ ಎರಚುವ ಕೆಲಸ ಮಾಡುತ್ತಿದೆ ಎಂದು ಆಪಾದಿಸಿದ್ದರು. ಆದರೆ ಈ ವಿಡಿಯೋದಲ್ಲಿ ಮೋದಿ ಅವರ ಹೆಸರಿರುವ ತುಣುಕನ್ನು ಕತ್ತರಿಸಿ ಆಲೂ ಮತ್ತು ಬಂಗಾರದ ತುಣುಕನ್ನು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.
ನರೇಂದ್ರ ಮೋದಿ ಸರ್ಕಾರದ ಆಶ್ವಾಸನೆಯನ್ನು ಟೀಕಿಸುವಾಗ ರಾಹುಲ್‌ಗಾಂಧಿ ಈ ಆಲೂ ಮತ್ತು ಬಂಗಾರವನ್ನು ರೂಪಕವಾಗಿ ಬಳಸಿದ್ದಾರೆ. ಹಾಗಾಗಿ ಈ ವೈರಲ್ ಆದ ವಿಡಿಯೋ ಸುಳ್ಳು ಎಂಬಂತಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.