ಉತ್ತರಪ್ರದೇಶದಲ್ಲಿ ಯಾದವೀ ಕಲಹಕ್ಕೆ ಹೆಂಗಸರು ಕಾರಣರಾದರಾ?

By Suvarna Web DeskFirst Published Jan 2, 2017, 3:12 PM IST
Highlights

ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಸಮಾಜವಾದಿ ಪಕ್ಷದೊಳಗಿನ ಯಾದವೀ ಕಲಹ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇವತ್ತು ಅಪ್ಪ-ಮಗ ಸೈಕಲ್​ ಪಡೆಯಲು ದೆಹಲಿಯ ಚುನಾವಣೆ ಆಯೋಗದ ಮೊರೆ ಹೋಗಿದ್ದಾರೆ. ಆದ್ರೆ ಚುನಾವಣೆ ಆಯೋಗ ಮಾತ್ರ ಕ್ಯಾರೆ ಅಂತಿಲ್ಲ.

ಬೆಂಗಳೂರು(ಜ. 02): ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಸಮಾಜವಾದಿ ಪಕ್ಷದೊಳಗಿನ ಯಾದವೀ ಕಲಹದ ಹೈಡ್ರಾಮಾ ಈಗ ಮತ್ತಷ್ಟು ತಿರುವು ಪಡೆದುಕೊಂಡಿದೆ. ಪಕ್ಷದ ಹಿರಿಯ ಮುಖಂಡ ಮುಲಾಯಂಸಿಂಗ್ ಯಾದವ್ ಹಾಗೂ ಅಖಿಲೇಶ್ ಯಾದವ್ ಬಣಗಳ ಅಂತಃಕಲಹ ಈಗ ತಾರಕಕ್ಕೇರಿದೆ. ಸಮಾಜವಾದಿ ಪಕ್ಷದಲ್ಲಿ ನಡೆಯುತ್ತಿರುವ ಕಿತ್ತಾಟಕ್ಕೆ ಯಾದವ್ ಪರಿವಾರದ ಅತ್ತೆ-ಸೊಸೆ ನಡುವೆ ಆರಂಭವಾದ ಜಗಳವೇ ಕಾರಣ ಎಂಬ ಮಾತುಗಳು ಜೋರಾಗಿ ಕೇಳಿಬರುತ್ತಿವೆ. ಕೆಲವು ದಿನಗಳಿಂದ ಮುಲಾಯಂ ಪತ್ನಿ ಸಾಧನ ಮತ್ತು ಅಖಿಲೇಶ್ ಮಡದಿ ಡಿಂಪಲ್ ಸಿಂಗಲ್ ನಡುವಿನ ಕೌಟುಂಬಿಕ ಭಿನ್ನಾಭಿಪ್ರಾಯ ಈಗ ಪಕ್ಷದ ಮೇಲೆ ಗಾಢ ಪರಿಣಾಮ ಮೀರಿದೆ.

ಮತ್ತೊಂದು ಕಡೆ, ಜ. 5ರಂದು ನಡೆಸಲು ಉದ್ದೇಶಿಸಲಾಗಿದ್ದ ರಾಷ್ಟ್ರೀಯ ಸಮಾವೇಶವನ್ನು ಮುಲಾಯಂಸಿಂಗ್ ಯಾದವ್ ದಿಢೀರ್ ಮಾಡಿದ್ದು ಸಮಾಜವಾದಿ ಪಕ್ಷದೊಳಗೆ ದೊಡ್ಡ ಬಿರುಕಿಗೆ ಕಾರಣ ಎನ್ನಲಾಗುತ್ತಿದೆ.

ಸದ್ಯ ಸಮಾಜವಾದಿ ಪಕ್ಷ ಎರಡು ಬಣಗಳಾಗಿ ವಿಭಜಿತವಾಗಿದೆ. ಎರಡು ಬಣಗಳು ಸೈಕಲ್​ ಲಾಂಛನವನ್ನು ತಮ್ಮದಾಗಿಸಿಕೊಳ್ಳಲು ಚುನಾವಣಾ ಆಯೋಗದ ಮೆಟ್ಟಿಲೇರಿದ್ದಾರೆ. ಉತ್ತರ ಪ್ರದೇಶದ ಸಿಎಂ ಅಖಿಲೇಶ್ ಅವರ ಬಣವು ಸೈಕಲ್ ಚಿಹ್ನೆ ಕೋರಿ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದರೆ, ಇನ್ನೊಂದೆಡೆ ಮುಲಾಯಂಸಿಂಗ್​ ಸಹೋದರ ಶಿವಪಾಲ್ ಯಾದವ ದೆಹಲಿ ಚುನಾವಣೆ ಆಯೋಗದ ಮೊರೆ ಹೋಗಿದ್ದಾರೆ. ಇಷ್ಟು ದಿನ ಉತ್ತರ ಪ್ರದೇಶದಲ್ಲಿ ನಡೆಯುತ್ತಿದ್ದ ಅಪ್ಪ-ಮಗ ಕಿತ್ತಾಟ ಈಗ ದೆಹಲಿಯ ಚುನಾವಣೆ ಆಯೋಗಕ್ಕೆ ತಲುಪಿದೆ. ಮುಲಾಯಂ ಸಿಂಗ್ ಯಾದವ್ ಕೂಡ ದೆಹಲಿಗೆ ಪ್ರಯಾಣ ಮಾಡುವ ಮುನ್ನ ಮಾಧ್ಯಮಗಳಿಗೆ ಹೀಗೆ ಪ್ರತಿಕ್ರಿಯೆ ನೀಡಿದ್ರು.

"ನಾನು ಯಾರಿಗೂ ಬೆನ್ನಿಗೆ ಚೂರಿ ಹಾಕಿಲ್ಲ ಅಥವಾ ಭ್ರಷ್ಟಾಚಾರ ಅವ್ಯವಹಾರದಲ್ಲಿ ಶಾಮೀಲಾಗಿಲ್ಲ, ನನ್ನ ಪ್ರಾಮಾಣಿಕತೆ ಬಗ್ಗೆ ಸುಪ್ರೀಂ ಕೋರ್ಟ್'​ಗೂ ಗೊತ್ತು ಎಂದು ಮುಲಾಯಂ ಹೇಳಿದ್ದಾರೆ.

ತಲೆಕೆಡಿಸಿಕೊಳ್ಳದ ಚುನಾವಣೆ ಆಯೋಗ:
ಐದು ರಾಜ್ಯಗಳ ಚುನಾವಣೆಗಳನ್ನು ಆಯೋಜಿಸುವ ತರಾತುರಿಯಲ್ಲಿರುವ ಚುನಾವಣಾ ಆಯೋಗ. ಸಮಾಜವಾದಿ ಪಕ್ಷದ ಸೈಕಲ್ ಚಿಹ್ನೆ ವಿವಾದದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಗಲಾಟೆ ಹೀಗೆ ಮುಂದುವರಿದರೆ ಸೈಕಲ್​ ಚಿಹ್ನೆಯನ್ನೇ ಮುಟ್ಟುಗೋಲು ಹಾಕಿಕೊಂಡು ಉಭಯ ಬಣಗಳಿಗೆ ಪ್ರತ್ಯೇಕ ಚಿಹ್ನೆ ನೀಡಬಹುದು ಎಂದು ಚುನಾವಣಾ ಆಯೋಗದ ಮಾಜಿ ಆಯುಕ್ತ ಎಸ್. ವೈ. ಖುರೇಷಿ ತಿಳಿಸಿದ್ದಾರೆ.

"ಸೈಕಲ್ ಪಕ್ಷದ ಚಿಹ್ನೆ ಪಡೆಯಲು ಎರಡೂ ಬಣಗಳು ದಾಖಲೆಗಳನ್ನು ಒದಗಿಸುತ್ತವೆ. ದಾಖಲೆಗಳ ಪರಿಶೀಲನೆಗೆ 4-5 ತಿಂಗಳು ಕಾಲಾವಕಾಶ ಬೇಕಿದ್ದು, ಚುನಾವಣೆಗೂ ಮುನ್ನ ಇತ್ಯರ್ಥವಾಗುದು ಕಷ್ಟ ಸಾಧ್ಯ" ಎಂದು ಮಾಜಿ ಚುನಾವಣಾ ಆಯುಕ್ತ ಎಸ್.ವೈ.ಖುರೇಷಿ ಹೇಳುತ್ತಾರೆ. ಇಬ್ಬರ ನಡುವಿನ ಕಚ್ಚಾಟದಲ್ಲಿ ಸೈಕಲ್ ಗುರುತು ಇತಿಹಾಸ ಪುಟ ಸೇರಿಕೊಂಡರೆ ಅಚ್ಚರಿ ಇಲ್ಲ.

ಒಟ್ಟಿನಲ್ಲಿ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ವೇಳೆಯಲ್ಲಿ ಆಡಳಿತಾರೂಢ ಸಮಾಜವಾದಿಯಲ್ಲಿ ಕಲಹ ಶುರುವಾಗಿದೆ.  ಈ ಕಲಹದ ಲಾಭ ಇತರೆ ಪಕ್ಷಗಳು ಹೇಗೆ ಉಪಯೋಗಿಸಿಕೊಳ್ಳುತ್ತವೆ ಎಂಬುದು ಕಾದುನೋಡಬೇಕು.

- ಜೆ. ಎಸ್​. ಪೂಜಾರ್​, ನ್ಯೂಸ್​ ಡೆಸ್ಕ್​, ಸುವರ್ಣನ್ಯೂಸ್​

click me!