
ಬಣ್ಣದ ಕುಂಚ ಹಿಡಿದು ಕ್ಯಾನ್ವಾಸ್‌ನಲ್ಲಿ ಕ್ಷಣದಲ್ಲಿ ಮೂಡಿಸುವ ಚಿತ್ರಗಳಿಗೆ ಯಾರೇ ಆದರೂ ಬೆರಗಾಗಲೇ ಬೇಕು. ಒಂದು ಕಡೆ ಇಂಪಾದ ಸಂಗೀತ ಇನ್ನೊಂದು ಕಡೆ ಕುತೂಹಲ ಕೆರಳಿಸುವ ಚಿತ್ರ. ಹಾಡು ಮುಗಿಸಿದಾಗ ಯಾವ ಚಿತ್ರ ಮೂಡಿಬರುವುದು ಎಂಬುದು ಪ್ರೇಕ್ಷಕರಿಗಿರುವ ಕುತೂಹಲ. ಇಂತಹ ಚಿತ್ರಕಲಾ ಕ್ಷೇತ್ರದಲ್ಲಿ ತನ್ನದೇ ವಿನೂತನ ಕೈಚಳಕ ತೋರಿಸಿ ಸಾಧನೆ ಮೆಟ್ಟಿಲೇರಿರುವ ಕರಾವಳಿ ಹುಡುಗಿ ಶಬರಿ ಗಾಣಿಗ.
ರಾಜ್ಯದಲ್ಲೇ ವೇಗದಲ್ಲಿ ಚಿತ್ರ ಬಿಡಿಸುವ ಮಹಿಳಾ ಚಿತ್ರಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಈಕೆ ಕ್ಯಾನ್ವಾಸ್ ಮುಂದೆ ಕೈಯಾಡಿಸಿದರೆ ಅಲ್ಲೊಂದು ಅದ್ಭುತ ಚಿತ್ರವೇ ಮೂಡುತ್ತದೆ. ಕೆಪಿಟಿ ವ್ಯಾಸನಗರ ನಿವಾಸಿ ಬಿ.ಯೋಗೀಶ್ ಕುಮಾರ್ ಗಾಣಿಗ, ಎಂ. ಶಶಿಕಲಾ ದಂಪತಿ ಪುತ್ರಿ ಶಬರಿ ಬಾಲ್ಯದಲ್ಲೇ ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡಾಕೆ. ಈಕೆ ಎಲ್’ಕೆಜಿಯಲ್ಲಿ ಬಿಡಿಸಿದ ರಾಷ್ಟ್ರ ಧ್ವಜ ಚಿತ್ರಕ್ಕೆ ಮೊದಲ ಬಹುಮಾನ ಪಡೆದಿದ್ದಳು. ತಂದೆ ತಾಯಿಗೂ ಚಿತ್ರಕಲಾ ಕ್ಷೇತ್ರದಲ್ಲಿ ಆಸಕ್ತಿ ಇದ್ದುದರಿಂದ ತಾಯಿಯೇ ಈಕೆಗೆ ಮೊದಲ ಗುರು. ತಾಯಿ ಚಿತ್ರ ಬಿಡುಸುವುದನ್ನು ನೋಡಿ ಕಲಿತ ಈಕೆ ಬಳಿಕ ವೀಣಾ ಭಂಡಾರಿ ಅವರಿಂದ ಹಾಗೂ 7ನೇ ತರಗತಿಯಲ್ಲಿ ಬಿಜಿಎಸ್ ಸ್ಕೂಲ್ ಆಫ್ ಆರ್ಟ್‌ಗೆ ಸೇರಿ ಶಮೀರ್ ಅಲಿ ಅವರಿಂದ ತರಬೇತಿ ಪಡೆದಿದ್ದಾರೆ.
ಮಂಗಳೂರು ಶ್ರೀದೇವಿ ಕಾಲೇಜಿನಲ್ಲಿ ಎಂಸಿಎ ಓದುತ್ತಿರುವ ಈಕೆ ಬಳಿಕ ಇಂಡಿಯಾ ಗಾಟ್ ಟ್ಯಾಂಲೆಂಟ್ಸ್ ರಿಯಾಲಿಟಿ ಶೋನಲ್ಲೂ ಭಾಗವಹಿಸುವ ಇಚ್ಛೆ ಹೊಂದಿದ್ದಾರೆ. ಮುಂದೆ ವರ್ಲ್ಡ್ ಆರ್ಟ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವುದು ಈಕೆ ಗುರಿ. ಓದಿನ ಜತೆಗೆ ಚಿತ್ರಕಲೆಯಲ್ಲಿ ಇನ್ನಷ್ಟು ಸಾಧನೆ ಮಾಡಬೇಕೆಂದು ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ.
300ಕ್ಕೂ ಅಧಿಕ ಬಹುಮಾನ:
ಆಯಿಲ್ ಕಲರ್, ವಾಟರ್ ಕಲರ್, ಆಯಿಲ್ ಪೈಂಟಿಂಗ್, ಸೆರೆಮಿಕ್ ಪೈಂಟಿಂಗ್, ಗ್ಲೋ ಆರ್ಟ್, ಗ್ಲಾಸ್ ಪೈಂಟಿಂಗ್ ಹೀಗೆ ವಿಭಿನ್ನ ಮಾದರಿಯ ಚಿತ್ರಕಲೆ ಈಕೆಗೆ ಕರಗತ. ಅಬ್ದುಲ್ ಕಲಾಂ, ಡಾ.ರಾಜ್‌ಕುಮಾರ್, ಡಾ.ಡಿ.ವೀರೇಂದ್ರ ಹೆಗ್ಗಡೆ, ಚಿತ್ರನಟಿ ಕಲ್ಪನಾ, ಮದರ್ ತೆರೆಸಾ, ವಿರಾಟ್ ಕೊಹ್ಲಿ ಇನ್ನೂ ಹಲವು ಗಣ್ಯರ ಚಿತ್ರ ಬಿಡಿಸಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದ್ದಾರೆ.
ಚಿತ್ರಕಲೆಯಲ್ಲಿ ಈವರೆಗೆ 300ಕ್ಕೂ ಅಧಿಕ ಬಹುಮಾನ ಪಡೆದಿದ್ದಾರೆ. ರಾಜ್ಯದೆಲ್ಲೆಡೆ, ಮುಂಬೈ, ಕೇರಳ ಸೇರಿದಂತೆ ದೇಶದ ಹಲವೆಡೆ ಶ್ರೇಷ್ಠ ವೇದಿಕೆಗಳಲ್ಲಿ ಶೋ ನೀಡಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಎಸ್’ಡಿಎಂ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಚಿತ್ರ ಬಿಡಿಸುತ್ತಿದ್ದಾಗ ಸ್ವತಃ ವೀರೇಂದ್ರ ಹೆಗ್ಗಡೆ ಅವರು ತಮ್ಮ ಕ್ಯಾಮರಾದಲ್ಲಿ ಫೋಟೋ ಕ್ಲಿಕ್ಕಿಸಿದ್ದು, ಈಕೆ ಜೀವನದಲ್ಲಿ ಮರೆಯಲಾರದ ಕ್ಷಣಗಳಲ್ಲೊಂದು.
ಸಂಗೀತ ಮೋಡಿ:
ಈಕೆ ಚಿತ್ರಕಲಾವಿದೆಯಷ್ಟೇ ಅಲ್ಲ ಸುಮಧುರ ಕಂಠದ ಹಾಡುಗಾರ್ತಿಯೂ ಹೌದು. ಕನ್ನಡದ ಹಲವು ಆಲ್ಬಂಗಳಿಗೆ ಧ್ವನಿ ನೀಡಿದ್ದಾರೆ. ತುಳು ಚಿತ್ರ ಸೂಂಬೆ, ಕುಡ್ಲ ಕೆಫೆ ಚಿತ್ರಗಳಿಗೆ ಡಬ್ಬಿಂಗ್ ಆರ್ಟಿಸ್ಟ್ ಆಗಿ ಹಾಗೂ ದೊಂಬರಾಟ ಚಿತ್ರದಲ್ಲಿ ಹಿನ್ನೆಲೆಗಾಯಕಿಯಾಗಿ ಕೋಸ್ಟಲ್’’ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಕೋಟಿ ಚೆನ್ನಯ ಧಾರಾವಾಹಿ ಹಾಡಿಗೆ ಈಕೆ ಧ್ವನಿ ನೀಡಿದ್ದಾರೆ. ಉಮಿಲ್ ಚಿತ್ರದಲ್ಲೂ ಈಕೆ ಹಿನ್ನೆಲೆ ಗಾಯನವಿರಲಿದೆ. ಕರ್ನಾಟಕ ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ ರ್ಯಾಂಕ್, ಸೀನಿಯರ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿ ಸದ್ಯ ವಿದ್ವತ್ ಅಭ್ಯಾಸಿಸುತ್ತಿದ್ದಾರೆ.
ಪ್ರಶಸ್ತಿ:
ಈವರೆಗೆ 2000ಕ್ಕೂ ಹೆಚ್ಚು ಶೋಗಳನ್ನು ನೀಡಿ ಪ್ರಶಂಸೆಗೆ ಪಾತ್ರವಾಗಿರುವ ಈಕೆ 500 ಏಕವ್ಯಕ್ತಿ ಪ್ರದರ್ಶನ ನೀಡಿದ್ದಾರೆ. ಚಿತ್ರಕಲೆ, ಸಂಗೀತ, ಕ್ರಾಫ್ಟ್, ಡ್ಯಾನ್ಸ್, ಶಿಕ್ಷಣ ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು 1500ಕ್ಕೂ ಹೆಚ್ಚು ಬಹುಮಾನ ಪಡೆದಿರುವ ಉದಯೋನ್ಮುಖ ಪ್ರತಿಭೆ ಶಬರಿ. ಕತಕ್ ಮತ್ತು ಭರತನಾಟ್ಯ ಕಲಿತಿದ್ದು, ಗಿಟಾರ್, ಕೀ ಬೋರ್ಡ್ ಕೂಡ ನುಡಿಸುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.