
ನವದೆಹಲಿ(ಜು.26): ಬಿಜೆಪಿ ಸಂಸದೆ ರಮಾದೇವಿ ಕುರಿತ ಎಸ್‌ಪಿ ಸಂಸದ ಆಜಂ ಖಾನ್ ಆಕ್ಷೇಪಾರ್ಹ ಹೇಳಿಕೆಯನ್ನು, ಮಹಿಳ ಸಂಸದರು ಲೋಕಸಭೆಯಲ್ಲಿ ಒಕ್ಕೊರಲಿನಿಂದ ಖಂಡಿಸಿದರು.
ರಮಾದೇವಿ ಕುರಿತ ಆಜಂ ಖಾನ್ ಹೇಳಿಕೆ ದೇಶದ ಮಹಿಳೆಯರಿಗೆ ಮಾಡಿದ ಅವಮಾನವಾಗಿದ್ದು, ಈ ಕೂಡಲೇ ಆಜಂ ಖಾನ್ ರಮಾದೇವಿ ಕ್ಷಮೆಯಚಿಸಬೇಕು ಎಂದು ಮಹಿಳಾ ಸಂಸದರು ಆಗ್ರಹಿಸಿದರು.
ಈ ಕುರಿತು ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಲೋಕಸಭೆಯಲ್ಲೇ ಮಹಿಳಾ ಸಂಸದೆಗೆ ಅವಮಾನಿಸಿದ ಆಜಂ ಖಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಪೀಕರ್ ಅವರನ್ನು ಆಗ್ರಹಿಸಿದರು.
ಇನ್ನು ಆಜಂ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಆಜಂ ಖಾನ್ ನಡೆಯನ್ನು ಇಡೀ ದೇಶ ಗಮನಿಸಿದ್ದು, ರಮಾದೇವಿ ಕ್ಷಮೆ ಕೇಳದಿದ್ದರೆ ಅವರನ್ನು ಸದನದಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಪುರುಷ ಸಂಸದರು ಮಹಿಳಾ ಸಂಸದರ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಲೋಕಸಭೆ ಇಲ್ಲ ಎಂದು ಸ್ಮೃತಿ ಇರಾನಿ ಆಜಂ ಖಾನ್ ವಿರುದ್ಧ ಹರಿಹಾಯ್ದರು.
ನಿನ್ನೆ ತ್ರಿವಳಿ ತಲಾಖ್ ಕುರಿತು ಲೋಕಸಭೆಯಲ್ಲಿ ಗಂಭೀರ ಚರ್ಚೆ ನಡೆಯುತ್ತಿರುವ ವೇಳೆ, ಇತರ ಸದಸ್ಯರ ಗದ್ದಲಕ್ಕೆ ಗಮನಕೊಡದೇ ತಮ್ಮನ್ನು ಉದ್ದೇಶಿಸಿ ಮಾತನಾಡುವಂತೆ ಸ್ಪೀಕರ್ ಅನುಪಸ್ಥಿತಿಯಲ್ಲಿ ಕಲಾಪ ನಡೆಸುತ್ತಿದ್ದ ಬಿಜೆಪಿ ಸಂಸದೆ ರಮಾದೇವಿ ಆಜಂ ಖಾನ್ ಅವರಿಗೆ ಸೂಚನೆ ನೀಡಿದ್ದರು.
ಇದಕ್ಕೆ ಪ್ರತಿಕ್ರಯಿಸಿದ್ದ ಆಜಂ ಖಾನ್, ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು ಎನಿಸುತ್ತಿದೆ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು. ಅಲ್ಲದೇ ರಮಾದೇವಿ ವಿರೋಧದ ಬಳಿಕ ನೀವು ನನ್ನ ಸಹೋದರಿ ಇದ್ದಂತೆ ಎಂದು ಸ್ಪಷ್ಟೀಕರಣ ನೀಡಿದ್ದರು.
ಇನ್ನು ತಮ್ಮ ವಿರುದ್ಧದ ಆಜಂ ಖಾನ್ ಹೇಳಿಕೆಗೆ ನೊಂದು ನುಡಿದಿರುವ ಸಂಸದೆ ರಮಾದೇವಿ, ಆಜಂ ಖಾನ್ ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ. ಸದ್ಯ ಎಲ್ಲಾ ರಾಜಕೀಯ ಪಕ್ಷಗಳ ಅಭಿಪ್ರಾಯ ಪಡೆದು ಆಜಂ ಖಾನ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸ್ಪೀಕರ್ ಓಂ ಬಿರ್ಲಾ ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.