ಡ್ಯೂಟಿ ವೇಳೆ ಠಾಣೆಯಲ್ಲಿ ಟಿಕ್‌ಟಾಕ್ ಡ್ಯಾನ್ಸ್: ಮಹಿಳಾ ಕಾಪ್ ಅಮಾನತು!

By Web DeskFirst Published Jul 25, 2019, 3:31 PM IST
Highlights

ಮಾನವ ನಾಗರಿಕತೆಯ ಅಧಃಪತನಕ್ಕೆ ಕಾರಣವಾಗುತ್ತಿರುವ ತಂತ್ರಜ್ಞಾನ| ಯುವ ಪೀಳಿಗೆಯ ಪರಿಜ್ಞಾನವನ್ನೇ ಕಸಿದುಕೊಂಡಿರುವ ಸಾಮಾಜಿಕ ಜಾಲತಾಣ| ಕರ್ತವ್ಯದ ವೇಳೆ ಪೊಲೀಸ್ ಠಾಣೆಯಲ್ಲೇ ನೃತ್ಯ ಮಾಡಿದ ಮಹಿಳಾಧಿಕಾರಿ| ನೃತ್ಯದ ವಿಡಿಯೋ ಟಿಕ್’ಟಾಕ್’ನಲ್ಲಿ ಶೇರ್ ಮಾಡಿದ ಅರ್ಪಿತಾ ಚೌಧರಿ| ಕರ್ತವ್ಯ ನಿರ್ಲ್ಯಕ್ಷದ ಆರೋಪದ ಮೇಲೆ ಅರ್ಪಿತಾ ಚೌಧರಿ ಅಮಾನತು|

ಮೆಹ್ಸನಾ(ಜು.25): ಮಾನವ ನಾಗರಿಕತೆಯ ಏಳಿಗೆಗೆ ಕಾರಣವಾಗಬೇಕಿದ್ದ ತಂತ್ರಜ್ಞಾನ, ಅದರ ಅಧಃಪತನಕ್ಕೆ ಕಾರಣವಾಗುತ್ತಿರುವುದು ನಿಜಕ್ಕೂ ಖೇದಕರ. ಅದರಲ್ಲೂ ಸಾಮಾಜಿಕ ಜಾಲತಾಣಗಳು ಯುವ ಪೀಳಿಗೆಯ ಪರಿಜ್ಞಾನವನ್ನೇ ಕಸಿದುಕೊಂಡಿರುವುದು ದುರಂತ.

ಟಿಕ್’ಟಾಕ್’ನಂತಹ ಮನರಂಜಾನಾ ಆ್ಯಪ್’ಗಳು ಕೇವಲ ಮನರಂಜನೆಗಷ್ಟೇ ಸೀಮಿತವಾಗಿದ್ದರೆ ಚೆನ್ನ. ಆದರೆ ಅದನ್ನು ನಮ್ಮ ವೃತ್ತಿಯೊಂದಿಗೆ ಬೆರೆಸಿದರೆ ಕೆಲಸವಷ್ಟೇ ಅಲ್ಲ, ಮಾನವೂ ಹೋಗುವುದು ಶತಸಿದ್ಧ.

ಅದರಂತೆ ಕರ್ತವ್ಯದ ವೇಳೆ ಪೊಲೀಸ್ ಠಾಣೆಯಲ್ಲೇ ನೃತ್ಯ ಮಾಡಿ ಅದನ್ನು ಟಿಕ್’ಟಾಕ್’ನಲ್ಲಿ ಅಪ್ಲೋಡ್ ಮಾಡಿದ್ದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಕೆಲಸ ಕಳೆದುಕೊಂಡ ಘಟನೆ ಗುಜರಾತ್’ನಲ್ಲಿ ನಡೆದಿದೆ.

ಇಲ್ಲಿನ ಮೆಹ್ಸಾನ್ ಜಿಲ್ಲೆಯ ಲಾಂಗ್ನಜ್ ಪೊಲೀಸ್ ಠಾಣೆಯ ಅರ್ಪಿತಾ ಚೌಧರಿ ಎಂಬ ಮಹಿಳಾ ಅಧಿಕಾರಿ ಠಾಣೆಯಲ್ಲೇ ಬಾಲಿವುಡ್ ಗೀತೆಯೊಂದಕ್ಕೆ ನೃತ್ಯ ಮಾಡಿದ್ದಾರೆ. ಅಲ್ಲದೇ ಅದನ್ನು ಟಿಕ್’ಟಾಕ್’ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಅರ್ಪಿತಾ ಚೌಧರಿ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ, ಆಕೆಯನ್ನು ವಜಾಗೊಳಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಡಿವೈಎಸ್’ಪಿ ಮಂಜಿತಾ ವಂಜಾರಾ, ಕರ್ತವ್ಯ ನಿರ್ಲ್ಯಕ್ಷ ಆರೋಪದ ಮೇಲೆ ಅರ್ಪಿತಾ ಅವರನ್ನು ವಜಾಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

click me!