ಪೊಲೀಸರಿಂದ ಸುಳ್ಳು ಕೇಸು: ಸಾರಿಕಾ ತಂದೆಯ ಆರೋಪ

Published : Jun 23, 2017, 11:04 AM ISTUpdated : Apr 11, 2018, 12:55 PM IST
ಪೊಲೀಸರಿಂದ ಸುಳ್ಳು ಕೇಸು: ಸಾರಿಕಾ ತಂದೆಯ ಆರೋಪ

ಸಾರಾಂಶ

ರಾಹುಲ್‌ ಭೇಟಿ ವೇಳೆ ನನ್ನ ಮಗಳು ಪೊಲೀಸರಿಗೆ ಬೈದು ಹಲ್ಲೆ ನಡೆಸಿಲ್ಲ ಠಾಣೆಯಲ್ಲಿ ಕ್ಷಮಾಪಣೆ ಪತ್ರ ಬರೆದುಕೊಟ್ಟನಂತರವೂ ಕೇಸು

ಬೆಂಗಳೂರು: ನನ್ನ ಮಗಳು ಯಾವುದೇ ತಪ್ಪು ಮಾಡದಿದ್ದರೂ ಠಾಣೆಯಲ್ಲಿ ಕ್ಷಮೆಯಾಚನೆ ನಂತರವೂ ಆಕೆ ಮೇಲೆ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಇತ್ತೀಚೆಗೆ ಕಾನ್‌ಸ್ಟೇಬಲ್‌ಗೆ ಕಪಾಳ ಮೋಕ್ಷ ಮಾಡಿದ ಆರೋಪಕ್ಕೆ ತುತ್ತಾದ ಸಾರಿಕಾ ಅವರ ತಂದೆ ಕೃಷ್ಣ ಆಪಾದಿಸಿದ್ದಾರೆ.

ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಮಗಳ ಮೇಲೆ ಕೇಳಿ ಬಂದಿರುವ ಕರ್ತವ್ಯನಿರತ ಕಾನ್‌ಸ್ಟೇಬಲ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಆರೋಪವು ಪೊಲೀಸರೇ ಹೆಣೆದ ಕಟ್ಟು ಕತೆಯಾಗಿದೆ ಎಂದರು.

ತಮ್ಮ ಮಗಳ ವಿರುದ್ಧ ದಾಖಲಾಗಿರುವ ಸುಳ್ಳು ಪ್ರಕರಣ ಕುರಿತು ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ ಅವರನ್ನು ಭೇಟಿಯಾಗಿ ನ್ಯಾಯ ಕೊಡಿಸುವಂತೆ ಮನವಿ ಮಾಡುತ್ತೇವೆ. ತಪ್ಪು ಮಾಡದಿದ್ದರೂ ಮಗಳು ಆರೋಪಿತಳಾಗಿದ್ದಾಳೆ. ಇದೂ ಘೋರ ಅನ್ಯಾಯವಾಗಿದ್ದು, ಈ ಬೆಳವಣಿಗೆಯಿಂದ ಮಗಳು ಅಘಾತಗೊಂಡಿದ್ದಾಳೆ ಎಂದು ಕೃಷ್ಣ ಅಲವತ್ತುಕೊಂಡರು.

ಹಲ್ಲೆ ನಡೆಸಿ ಮಗಳು ಓಡಿ ಹೋಗಿದ್ದಾಳೆ ಎಂಬ ಆರೋಪವು ಸತ್ಯವಲ್ಲ. ಅವತ್ತು ರಾತ್ರಿ 9.30ರ ವರೆಗೆ ಹೈಗ್ರೌಂಡ್ಸ್‌ ಠಾಣೆಯಲ್ಲೇ ಮಗಳು ಪೊಲೀಸರ ವಶದಲ್ಲಿದ್ದಳು. ನಾನು ಸಹ ಪುತ್ರಿ ಜತೆ ಠಾಣೆಯಲ್ಲೇ ಇದ್ದೆ. ಕೊನೆಗೆ ಪೊಲೀಸರಲ್ಲಿ ಕ್ಷಮೆ ಕೇಳಿ ಮರಳಿ ಬಂದಿದ್ದೆವು. ಆದರೆ, ಮರುದಿನ ಹಲ್ಲೆ ನಡೆಸಿದ ಆರೋಪದಡಿ ಕಾನ್‌ಸ್ಟೇಬಲ್‌ ದೂರು ದಾಖಲಿಸಿದ್ದಾರೆ ಎಂದು ದೂರಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ಜೂ.12ರಂದು ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಬಿಡುಗಡೆ ಸಮಾರಂಭಕ್ಕೆ ತೆರಳುತ್ತಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಬೆಂಗಾವಲು ವಾಹನವನ್ನು ಹಿಂಬಾಲಿಸಿದ್ದನ್ನು ಪ್ರಶ್ನಿಸಿದಕ್ಕೆ ಕೆ.ಜಿ.ಹಳ್ಳಿ ಸಂಚಾರ ಠಾಣೆಯ ಕಾನ್‌ಸ್ಟೇಬಲ್‌ ವೆಂಕಟೇಶ್‌ ಅವರ ಕಪಾಳಕ್ಕೆ ಚಪ್ಪಲಿಯಿಂದ ಹೊಡೆದು ಗೂಂಡಾಗಿರಿ ನಡೆಸಿದ ಆರೋಪ ಸಾರಿಕಾ ವಿರುದ್ಧ ಕೇಳಿ ಬಂದಿತ್ತು.

ತಂದೆಯ ಆರೋಪವೇನು?: ಕ್ವೀನ್ಸ್‌ ರಸ್ತೆ ಬಳಿ ಕಾಲೇಜು ತರಗತಿ ಮುಗಿಸಿಕೊಂಡು ಅಂದು ಮಧ್ಯಾಹ್ನ ಸಾರಿಕಾ ಮನೆಗೆ ಬೈಕ್‌ನಲ್ಲಿ ಹೊರಟ್ಟಿದ್ದಳು. ಆ ವೇಳೆ ಕ್ವೀನ್ಸ್‌ ಜಂಕ್ಷನ್‌ನಲ್ಲಿ ವಾಹನಗಳು ವಿರಳವಾಗಿದ್ದರಿಂದ ಆಕೆ ಅದೇ ರಸ್ತೆಯಲ್ಲಿ ಸಾಗಿದಳು. ಆಗ ಹಠಾತ್ತಾಗಿ ಮಗಳ ಬೈಕನ್ನು ಅಡ್ಡಗಟ್ಟಿದ ಕಾನ್‌ಸ್ಟೇಬಲ್‌ ವೆಂಕಟೇಶ್‌, ಬೈಕ್‌ಅನ್ನು ದೂರ ತಳ್ಳಿದರು. ಇದರಿಂದ ಬೈಕ್‌ನಿಂದ ಕೆಳಗೆ ಬಿದ್ದು ಮಗಳ ಕಾಲಿಗೆ ಪೆಟ್ಟಾಯಿತು. ಗಾಯಗೊಂಡು ನರಳಾಡುವಾಗ ಕನಿಷ್ಠ ಮಾನವೀಯತೆಯಿಂದಲೂ ಮಗಳ ನೆರವಿಗೆ ಪೊಲೀಸರು ಹೋಗಿಲ್ಲ. ಆ ಪರಿಸ್ಥಿತಿಯಲ್ಲೂ ಮಗಳಿಗೆ ಮನಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾನ್‌ಸ್ಟೇಬಲ್‌ ಅವಮಾನ ಮಾಡಿದರು. ಬಳಿಕ ಆಕೆಯನ್ನು ವಶಕ್ಕೆ ಪಡೆದು ಪೊಲೀಸರು ಹೈಗ್ರೌಂಡ್ಸ್‌ ಠಾಣೆಗೆ ಕರೆದೊಯ್ದಿದ್ದರು ಎಂದು ಕೃಷ್ಣ ವಿವರಿಸಿದರು.

ಆಗ ನನಗೆ ಕರೆ ಮಾಡಿ ಮಗಳು ತಿಳಿಸಿದ್ದಳು. ತಕ್ಷಣವೇ ನಾನು ಹೈಗ್ರೌಂಡ್ಸ್‌ ಠಾಣೆಗೆ ಹೋಗಿದ್ದೆ. ಅಂದು ರಾತ್ರಿ 9.30ರ ತನಕ ಠಾಣೆಯಲ್ಲೇ ಇದ್ದೆವು. ಮಗಳನ್ನು ಏತಕ್ಕೆ ಠಾಣೆ ಕರೆತರಲಾಯಿತು ಎಂಬುದನ್ನು ಪೊಲೀಸರು ತಿಳಿಸಲಿಲ್ಲ. ಕೊನೆಗೆ ಬೇಸತ್ತು ಠಾಣಾಧಿಕಾರಿಗಳಿಗೆ ಮಗಳನ್ನು ಏಕೆ ಠಾಣೆಯಲ್ಲಿ ಇಟ್ಟಿದ್ದೀರಿ? ಎಂದು ಪ್ರಶ್ನಿಸಿದೆ.

ಅದಕ್ಕೆ ಅವರು ಸ್ಪಷ್ಟ ಉತ್ತರ ನೀಡಲಿಲ್ಲ. ಕೊನೆಗೆ ನನ್ನಿಂದ ತಪ್ಪಾಗಿದ್ದರೆ ಕ್ಷಮಾಪಣ ಪತ್ರ ಬರೆದು ಕೊಡುವುದಾಗಿ ಸಾರಿಕಾ ಹೇಳಿದ್ದಳು. ಇದಕ್ಕೊಪ್ಪಿ ಆಕೆಯನ್ನು ಪೊಲೀಸರು ಬಿಟ್ಟು ಕಳುಹಿಸಿದರು. ಆದರೆ ಮರು ದಿನ (ಜೂ.13) ಮಗಳ ವಿರುದ್ಧ ಹಲ್ಲೆ ನಡೆಸಿದ ಆರೋಪ ಹೊರಿಸಿ ಕಾನ್‌ಸ್ಟೇಬಲ್‌ ವೆಂಕಟೇಶ್‌ ದೂರು ನೀಡಿದರೆ, ಘಟನೆ ನಡೆದು 48 ಗಂಟೆ (ಜೂ 14) ನಂತರ ಎಫ್‌ಐಆರ್‌ ದಾಖಲಾಗಿದೆ. ಮಗಳು ತಪ್ಪು ಮಾಡಿದ್ದರೆ ಅವತ್ತೇ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ. ದೂರು ದಾಖಲಿಸಲು ಕಾನ್‌ಸ್ಟೇಬಲ್‌ ತಡ ಮಾಡಿದ್ದೇಕೆ? ಎಂದು ಪ್ರಶ್ನಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಿತ್ತೂರು ಕರ್ನಾಟಕಕ್ಕೆ 5 ಸಾವಿರ ಕೋಟಿ ನೀಡಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ: ಶಾಸಕ ರಾಜು ಕಾಗೆ
ಪುರುಷರಿಗೆ ಮಾತ್ರವಲ್ಲ ಮೊಬೈಲ್‌ ಸೇಫ್ಟಿಗೆ ಬಂದಿದೆ ಕಾಂಡೋಮ್‌, ಏನಿದು USB ಕಾಂಡೋಮ್‌?