ಕಾರವಾರದಲ್ಲಿ ನಡೆದ ವೈನ್ ಮೇಳ ಯಶಸ್ವಿ

By suvarna Web DeskFirst Published Nov 27, 2017, 4:13 PM IST
Highlights

ಕರಾವಳಿ ಉತ್ಸವಕ್ಕೂ ಮುನ್ನ ಜಿಲ್ಲಾಡಳಿತದಿಂದ ನಡೆದ ಈ ವೈನ್ ಮೇಳಕ್ಕೆ ಜನತೆಯ ಅಭೂತಪೂರ್ವ ಪ್ರತಿಕ್ರಿಯೆ ದೊರೆಯಿತು. ಮೂರು ದಿನಗಳ ಕಾಲ ಆಯೋಜನೆಗೊಂಡಿದ್ದ ವೈನ್ ಉತ್ಸವ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಮೇಳದಲ್ಲಿ 10ಲಕ್ಷ ರು.ಗೂ ಹೆಚ್ಚಿನ ವ್ಯಾಪಾರವಾಗಿದೆ.

ಕಾರವಾರ(ನ.27): ನಗರದಲ್ಲಿ ಮೂರು ದಿನಗಳ ಕಾಲ ಆಯೋಜನೆಗೊಂಡಿದ್ದ ವೈನ್ ಉತ್ಸವ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಮೇಳದಲ್ಲಿ 10ಲಕ್ಷ ರು.ಗೂ ಹೆಚ್ಚಿನ ವ್ಯಾಪಾರವಾಗಿದೆ. 8 ಸಾವಿರಕ್ಕೂ ಅಧಿಕ ಮಂದಿ ಮೇಳಕ್ಕೆ ಭೇಟಿ ನೀಡಿ ಪ್ರದರ್ಶನ ವೀಕ್ಷಿಸಿದ್ದಾರೆ. ಕೋಡಿಬಾಗದಲ್ಲಿನ ಕಾಳಿ ರಿವರ್ ಗಾರ್ಡನ್ ಶುಕ್ರವಾರ, ಶನಿವಾರ, ಭಾನುವಾರ ಜನಜಂಗುಳಿಯಿಂದ ತುಂಬಿತ್ತು. ಆಬಾಲವೃದ್ಧರಾದಿಯಾಗಿ ಎಲ್ಲರೂ ಕಾರವಾರದ ಕಡೆಗೆ ಮುಖ ಮಾಡಿದ್ದರು.

ಸಂಗೀತ ಆಲಿಸುತ್ತ ವೈನ್ ಸವಿದು, ಖರೀದಿಸಿ ಸಂತಸಪಟ್ಟರು. ಕರಾವಳಿ ಉತ್ಸವಕ್ಕೂ ಮುನ್ನ ಜಿಲ್ಲಾಡಳಿತದಿಂದ ನಡೆದ ಈ ಕಾರ್ಯಕ್ರಮ ಜನತೆಯ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದ್ದು, ವೈನ್ ಮೇಳದ ಯಶಸ್ಸಿಗೆ ಕಾರಣವಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಹಾಗೂ ಗೋವಾದಿಂದ ಜನತೆ ವೈನ್‌ಮೇಳಕ್ಕೆ ಆಗಮಿಸಿದ್ದರು.  ಮೂರು ದಿನಗಳ ಕಾಲ ಸಂಜೆ 6ರಿಂದ 9ಗಂಟೆವರೆಗೆ ವೆಸ್ಟ್ರನ್ ಮ್ಯೂಸಿಕ್ ಕಾರ್ಯಕ್ರಮ ಕಳೆಗಟ್ಟಿತ್ತು. ಶುಕ್ರವಾರ ಶಿವಮೊಗ್ಗದ ಸಮನ್ವಯ ತಂಡ, ಬೆಂಗಳೂರಿನ ಡಾಯಿಸ್ ತಂಡ, ಭಾನುವಾರ ಜೆಹೆನ್ ತಂಡದಿಂದ ಕಾರ್ಯಕ್ರಮಗಳು ನಡೆದವು.

ಆಕರ್ಷಿಸಿದ ಬ್ರಾಂಡ್'ಗಳು:ಸೂಲಾ ಕಂಪನಿಯ ಮದೇರಾ, ಹಿಂಡೋಲಿ, ಸತೋರಿ ಡ್ರೈ, ರೆಡ್ ವೈನ್, ಕೃಷ್ಣಾ ವ್ಯಾಲಿ ವೈನ್ಸ್ ಕಂಪನಿಯ ವಿಂಟೇಜ್, ಮಾನಸಾ, ನೇಸರ, ಸ್ವೀಟ್ ವೈನ್, ಫೀಜನ್, ವಿ5 ಕಂಪನಿಯ ರೋಸೋ, ಬ್ಯಾಕ್‌ಬಕ್, ರೆಡ್ ವೈನ್, ನಂದಿ ವ್ಯಾಲು ಸ್ಥಳೀಯ ಬ್ರಾಂಡ್‌ಗಳಾಗಿದ್ದರೆ, ಆಸ್ಟ್ರೇಲಿಯಾದ ಲಂಡನ್‌ಮೆನ್ಸ್, ರಾಸನ್ಸ್ ರೇಟಿವರ್, ಶಾಡೋನ್, ಕ್ಯಾಲಿಫೋರ್ನಿ ಯಾದ ರೈಡಿಂಗ್ ಹೈ, ಸೌತ್ ಆಫ್ರಿಕಾದ ಟೂ ಓಶಿಯನ್, ಇಟಲಿಯ ಪಾಯಿಂಟ್ ಗ್ರೈಗೊ ಮೊದಲಾದ ವೈನ್‌ಗಳು ಲಭ್ಯವಿದ್ದವು.

ಸೂಲಾ ಕಂಪನಿಯ ವೈನ್‌ಗಳು 110 ರು.ನಿಂದ 1000 ರು.ವರೆಗೆ, ಕೃಷ್ಣಾ ವ್ಯಾಲಿಯ ವೈನ್ಸ್‌ಗಳು 400 - 600 ರು., ವಿ5 ಕಂಪನಿಯ ವೈನ್ಸ್‌ಗಳು 110 ರು, 130 ರು, 140 ರು. ಹೀಗೆ ವಿವಿಧ ದರದ ವೈನ್‌ಗಳು ಮೇಳದಲ್ಲಿದ್ದವು. ವಿದೇಶಿ ವೈನ್‌ಗಳಿಗೆ 1000ರು. ಗೂ ಹೆಚ್ಚಿನ ದರವಿತ್ತು. ಸತೆ ಬ್ರಾಂಡ್‌ನ ವೈನ್‌ಗೆ 1700ಕ್ಕೂ ಅಧಿಕ ದರವಿದ್ದು, ಇದಕ್ಕೂ ಬಹಳಷ್ಟು ಬೇಡಿಕೆ ಇತ್ತು. ಈ ಉತ್ಸವಕ್ಕೆ 8 ಕಂಪನಿಗಳು ತಮ್ಮಲ್ಲಿನ ವಿವಿಧ ಬ್ರಾಂಡ್‌ನ ವೈನ್‌ಗಳನ್ನು ತಂದಿದ್ದು, ಮೊದಲ ದಿನವೇ 6 ಲಕ್ಷ ರು.ಗೂ ಅಧಿಕ ಹಾಗೂ 2ನೇ ದಿನ 3 ಲಕ್ಷ ರು.ಗೂ ಅಧಿಕ ವ್ಯಾಪಾರವಾಗಿದ್ದರೆ, 3ನೇ ದಿನಕ್ಕೆ ಬಹುತೇಕ ಕಂಪನಿಯ ದುಬಾರಿ ವೈನ್ಸ್‌ಗಳು ಖಾಲಿಯಾಗಿತ್ತು. ಸಂಘಟಕರ ನಿರೀಕ್ಷೆಗೂ ಮೀರಿ ಜನ ಆಗಮಿಸಿದ್ದರು.

click me!