ಗ್ರಾಮೀಣ ಭಾಗದಲ್ಲಿ ಜನೌಷಧಿ ಕೇಂದ್ರ ಸ್ಥಾಪನೆ

By suvarna Web DeskFirst Published Nov 27, 2017, 3:34 PM IST
Highlights

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ ಬಡ್ಡಿ ಅವರು ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಅಕ್ಕಿ ಆಲೂರು, ಬಂಕಾಪುರ ಸೇರಿದಂತೆ 9 ಜನೌಷಧಿ ಕೇಂದ್ರಗಳನ್ನು ಆರಂಭಿಸಿರುವುದಾಗಿ ಸಭೆಗೆ ಮಾಹಿತಿ ನೀಡಿದರು.

ಹಾವೇರಿ (ನ.27): ಜಿಲ್ಲೆಯ ಗುತ್ತಲ, ರಟ್ಟೀಹಳ್ಳಿ, ಮಾಸೂರು, ಹತ್ತಿಮತ್ತೂರು ಸೇರಿದಂತೆ ಹೋಬಳಿ ಕೇಂದ್ರ ಗಳು ಹಾಗೂ ಹೆಚ್ಚು ಜನಸಂಖ್ಯೆ ಇರುವ ದೊಡ್ಡ ಗ್ರಾಮಗಳಲ್ಲೂ ಜನೌಷಧಿ ಮಳಿಗೆಗಳನ್ನು ಆರಂಭಿಸುವಂತೆ ಆರೋಗ್ಯಾಧಿಕಾರಿಗಳಿಗೆ ಸಂಸದ ಶಿವಕುಮಾರ ಉದಾಸಿ ಸೂಚಿಸಿದರು. ನಗರದ ಜಿಲ್ಲಾ ಆರೋಗ್ಯ ಭವನದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಜಿಲ್ಲಾ ಕೇಂದ್ರದಲ್ಲಿಯೂ ಹೆಚ್ಚುವರಿಯಾಗಿ ಜನೌಷಧಿ ಮಳಿಗೆ ಆರಂಭಿಸುವಂತೆ ಸೂಚಿಸಿದರು.

ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ದರದಲ್ಲಿ ಔಷಧಿ ಹಾಗೂ ಮಾತ್ರೆಗಳು ದೊರೆಯುವುದರಿಂದ ಮಧ್ಯಮ ಹಾಗೂ ಬಡ ರೋಗಿಗಳಿಗೆ ಅನುಕೂಲವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಅವಶ್ಯ ಇರುವ ಕಡೆಗಳಲ್ಲಿ ಮಳಿಗೆಗಳನ್ನು ಆರಂಭಿಸುವುದು ಅತ್ಯಗತ್ಯವಾಗಿದೆ. ಈ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ ಬಡ್ಡಿ ಅವರು ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಅಕ್ಕಿ ಆಲೂರು, ಬಂಕಾಪುರ ಸೇರಿದಂತೆ 9 ಜನೌಷಧಿ ಕೇಂದ್ರಗಳನ್ನು ಆರಂಭಿಸಿರುವುದಾಗಿ ಸಭೆಗೆ ಮಾಹಿತಿ ನೀಡಿದರು. ಜನನಿ ಸುರಕ್ಷಾ ಯೋಜನೆಯಡಿ ಹೆರಿಗೆಗೆ ನೀಡುವ ಸಹಾಯಧನ ಸಕಾಲದಲ್ಲಿ ಫಲಾನು ಭವಿಗಳಿಗೆ ದೊರಕುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಫಲಾನುಭವಿಗಳ ಶೂನ್ಯ ಖಾತೆ ಆರಂಭಿಸಿ ಹಣ ಜಮೆಮಾಡಲು ಕ್ರಮ ವಹಿಸ ಬೇಕು. ಮಹಿಳೆಯರು ಹಾಗೂ ಮಕ್ಕಳೂ ಒಳ ಗೊಂಡಂತೆ ಬಡ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾಗಳು ಹಲವು ಆರೋಗ್ಯ ಸೇವೆಗಳನ್ನು ಜಾರಿಗೆ ತಂದಿವೆ. ಅವುಗಳನ್ನು ಅರ್ಹರಿಗೆ ತಲುಪಿಸುವುದು ಎಲ್ಲರ ಜವಾಬ್ದಾರಿ ಯಾಗಿದೆ ಎಂದರು.

ಜನನಿ ಸುರಕ್ಷಾ ಫಲಾನುಭವಿಗಳಿಗೆ ಬ್ಯಾಂಕ್ ಖಾತೆ ಆರಂಭಿಸುವ ಕುರಿತಂತೆ ಸಮಸ್ಯೆಗಳಿದ್ದರೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ಖಾತೆ ಆರಂಭಕ್ಕೆ ಕ್ರಮವಹಿಸಿ. ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತನ್ನಿ ಎಂದು ವೈದ್ಯಾಧಿಕಾರಿಗಳಿಗೆ ಸಂಸದ ಉದಾಸಿ ಸೂಚಿಸಿದರು. ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಜಯಾನಂದ ಮಾತನಾಡಿ, 2017-18ನೇ ಸಾಲಿನಲ್ಲಿ ಅಕ್ಟೋಬರ್ ತಿಂಗಳ ವರೆಗೆ 13,205 ಸಾಂಸ್ಥಿಕ ಹೆರಿಗಳಾಗಿವೆ. ಶೇ. 99.97 ರಷ್ಟು ಆಸ್ಪತ್ರೆಗಳಲ್ಲಿ ಹೆರಿಗೆಯಾಗಿವೆ. ಸುರಕ್ಷಿತ ಹೆರಿಗೆ ಕ್ರಮ ವಹಿಸಲಾಗಿದೆ ಎಂದು ವಿವರಿಸಿದರು.

ದೆವ್ವ ಹಾಗೂ ದೇವರು ಮನುಷ್ಯರ ಮೈಮೇಲೆ ಬರುತ್ತವೆ ಎಂಬ ಮೂಢನಂಬಿಕೆಗಳಿಂದ ಜನರು ಖಿನ್ನತೆಗೆ ಒಳಗಾಗುವ ಪ್ರಕರಣಗಳು ನಡೆಯುತ್ತಿವೆ. ಈ ಕುರಿತಂತೆ ಮಾನಸಿಕ ಆರೋಗ್ಯ ತಜ್ಞರು ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿ ಸುವುದು ಅಗತ್ಯವಾಗಿದೆ ಎಂದರು.

ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಧಾರ್ಮಿಕ ಮುಖಂಡರು ತಾವೇ ಮುಂದೆ ಬಂದು ಆರೋಗ್ಯ ಇಲಾಖೆ ಸಹಯೋಗದಲ್ಲಿ ದರ್ಗಾದಲ್ಲಿ ಮೂಢನಂಬಿಕೆ ತೊರೆಯಲು ಜಾಗೃತಿ ಮೂಡಿಸುವ ವಿಚಾರ ಸಂಕಿರಣ ಆಯೋಜಿಸುತ್ತಿದ್ದಾರೆ. ಇದೇ ಮಾದರಿಯಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಿ. ಖಿನ್ನತೆಗೊಳಗಾದ ಜನರಿಗೆ ಕೌನ್ಸಲಿಂಗ್ ಮೂಲಕ ಸೂಕ್ತ ಚಿಕಿತ್ಸೆ ನೀಡಿ ಎಂದು ಸಲಹೆ ನೀಡಿದರು.

ಆಯುಷ್ ಇಲಾಖೆಯಿಂದ ಯೋಗ ತರಬೇತಿ ಆಯೋಜಿಸುವ ಸಂದರ್ಭದಲ್ಲಿ ನುರಿತ ಯೋಗ ತರಬೇತಿದಾರರಿಂದ ಯೋಗ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸೂಚನೆ ನೀಡಿದರು. ಜನರಿಗೆ ಆಯುಷ್ ಸೇರಿದಂತೆ ವಿವಿಧ ವೈದ್ಯ ಪದ್ಧತಿ ಹಾಗೂ ಸರ್ಕಾರದ ಯೋಜನೆಗಳ ಕುರಿತಂತೆ ಮಾಹಿತಿ ಒದಗಿಸಲು ಅಧಿಕಾರಿಗಳಿಗೆ ಸಂಸದರು ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ನಾಗರಾಜ ನಾಯಕ್, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭಾಕರ ಕುಂದೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

click me!