ಶಬರಿಮಲೆಗೆ ತೆರಳಲು ಮತ್ತೊಬ್ಬ ಹೋರಾಟಗಾರ್ತಿ ಸಜ್ಜು : ಯಾರಾಕೆ..?

By Web DeskFirst Published Nov 15, 2018, 7:03 AM IST
Highlights

ಶಬರಿಮಲೆ ಅಯ್ಯಪ್ಪ ದೇಗುಲದ ಬಾಗಿಲು, ವಾರ್ಷಿಕ ಯಾತ್ರೆಯ ನಿಮಿತ್ತ ನ.16ರ ಸಂಜೆ 5 ಗಂಟೆಗೆ ತೆರೆಯಲಿದೆ. ಈ ವಾರ್ಷಿಕ ಯಾತ್ರೆಯಲ್ಲಿ ಭಾಗಿಯಾಗಲು 500ಕ್ಕೂ ಹೆಚ್ಚು ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ.

ತಿರುವನಂತಪುರ/ನವದೆಹಲಿ: ನಂಬಿಕೆ ಮತ್ತು ಕಾನೂನು ನಡುವಿನ ಸಂಘರ್ಷದಿಂದಾಗಿ ಹೋರಾಟದ ವೇದಿಕೆಯಾಗಿ ಪರಿವರ್ತನೆಗೊಂಡಿರುವ ಶಬರಿಮಲೆ ಅಯ್ಯಪ್ಪ ದೇಗುಲದ ಬಾಗಿಲು, ವಾರ್ಷಿಕ ಯಾತ್ರೆಯ ನಿಮಿತ್ತ ನ.16ರ ಸಂಜೆ 5 ಗಂಟೆಗೆ ತೆರೆಯಲಿದೆ. ಈ ವಾರ್ಷಿಕ ಯಾತ್ರೆಯಲ್ಲಿ ಭಾಗಿಯಾಗಲು 500ಕ್ಕೂ ಹೆಚ್ಚು ಮಹಿಳೆಯರು ಅರ್ಜಿ ಸಲ್ಲಿಸಿದ್ದು, ಪರಿಸ್ಥಿತಿಯನ್ನು ಮತ್ತಷ್ಟುಬಿಗಿಯಾಗಿಸಿದೆ. ಮತ್ತೊಂದೆಡೆ ಮಹಾರಾಷ್ಟ್ರದ ಶನಿ ಶಿಂಗಣಾಪುರ ದೇಗುಲದ ಗರ್ಭಗುಡಿ ಪ್ರದೇಶಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದ ಹೋರಾಟಗಾರ್ತಿ ತೃಪ್ತಿ ದೇಸಾಯಿ ನ.17ರಂದು ತಾವು ದೇವರ ದರ್ಶನಕ್ಕೆ ಆಗಮಿಸುತ್ತಿದ್ದು, ಸೂಕ್ತ ಭದ್ರತೆ ಒದಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇರಳ ಸಿಎಂ ಇ ಮೇಲ್‌ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಈ ನಡುವೆ 10-50ರ ವಯೋಮಾನದ ಮಹಿಳಾ ಭಕ್ತರು ದೇಗುಲ ಪ್ರವೇಶಿಸದಂತೆ ತಡೆಯಲು ವಿವಿಧ ಹಿಂದೂ ಸಂಘಟನೆಗಳು ಮತ್ತು ಅಯ್ಯಪ್ಪ ಭಕ್ತರು ಕೂಡಾ ಸಜ್ಜಾಗಿದ್ದಾರೆ. ಹೀಗಾಗಿ ನ.16ರ ಸಂಜೆಯಿಂದಲೇ ಶಬರಿಮಲೆ ದೇಗುಲ ಪ್ರದೇಶ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳು ಸಂಘರ್ಷ, ಹೋರಾಟಕ್ಕೆ ವೇದಿಕೆಯಾಗುವ ಎಲ್ಲಾ ಸಾಧ್ಯತೆಗಳು ಗೋಚರಿಸಿವೆ.

ಮಹಿಳೆಯರ ದೇಗುಲ ಪ್ರವೇಶಕ್ಕೆ ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಆದರೆ ಸಿಎಂ ಪಿಣರಾಯಿ ವಿಜಯನ್‌ ನೇತೃತ್ವದ ಸಿಪಿಎಂ ಸರ್ಕಾರ ಮಾತ್ರ ಸುಪ್ರೀಂಕೋರ್ಟ್‌ ಆದೇಶವನ್ನು ಮಾನ್ಯ ಮಾಡುವುದಾಗಿ ಹೇಳುವ ಮೂಲಕ ಸ್ಥಳೀಯರ ತೀವ್ರ ವಿರೋಧಕ್ಕೆ ಪಾತ್ರವಾಗಿದೆ. ಇಂಥ ಸ್ಥಿತಿಯಲ್ಲೇ 2018ರ ನ.16ರಿಂದ 2019ರ ಜ.20ರವರೆಗೆ ನಡೆಯಲಿರುವ ವಾರ್ಷಿಕ ಅಯ್ಯಪ್ಪ ಯಾತ್ರೆಯ ಅವಧಿ ಆರಂಭವಾಗಿದೆ. ಹೀಗಾಗಿ ಇಡೀ ಪ್ರಕರಣವನ್ನು ಕೇರಳ ಸರ್ಕಾರ ಯಾವ ರೀತಿಯಲ್ಲಿ ನಿಭಾಯಿಸಲಿದೆ ಎಂಬ ಕುತೂಹಲ ಇದೆ.

ತಡೆ ಇಲ್ಲ: ಸೆ.28ರಂದು ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌, ಅಯ್ಯಪ್ಪ ದೇಗುಲ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿತ್ತು. ಅದಾದ ಬಳಿಕ ಒಮ್ಮೆ 6 ದಿನ ಮತ್ತೊಮ್ಮೆ 2 ದಿನದ ಅವಧಿಗೆ ಅಯ್ಯಪ್ಪ ದೇಗುಲದ ಬಾಗಿಲು ಮಾಸಿಕ ಪೂಜೆಗಾಗಿ ತೆರೆಯಲಾಗಿತ್ತು. ಎರಡೂ ಬಾರಿಯೂ ಹಲವು ಮಹಿಳೆಯರು ದೇಗುಲ ಪ್ರವೇಶಕ್ಕೆ ಯತ್ನಿಸಿದ್ದರಾದರೂ, ಅದು ಭಕ್ತಾದಿಗಳ ಹೋರಾಟದ ಫಲವಾಗಿ ಫಲಿಸಿರಲಿಲ್ಲ.

ಈ ನಡುವೆ ಸೆ.28ರ ತನ್ನ ತೀರ್ಪಿನ ಮರುಪರಿಶೀಲನೆ ಕೋರಿ ಸಲ್ಲಿಸಿದ್ದ ಅರ್ಜಿಗಳ ಕುರಿತ ನ.13 ಮತ್ತು ನ.14ರಂದು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌, ತನ್ನ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತ್ತು. ಹೀಗಾಗಿ ಮಹಿಳೆಯರ ಪ್ರವೇಶಕ್ಕೆ ಎದುರಾಗಿದ್ದ ಮತ್ತೊಂದು ಅಡ್ಡಿಯೂ ನಿವಾರಣೆಯಾಗಿದೆ.

ನ.17ಕ್ಕೆ ತೃಪ್ತಿ:  ಮಹಾರಾಷ್ಟ್ರದ ಮಹಿಳಾ ಹೋರಾಟಗಾರ್ತಿ, ಭೂಮಾತಾ ಬ್ರಿಗೇಡ್‌ನ ತೃಪ್ತಿ ದೇಸಾಯಿ ನ.17ಕ್ಕೆ ದೇಗುಲಕ್ಕೆ ಆಗಮಿಸುವುದಾಗಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಗತ್ಯ ಭದ್ರತೆ ಒದಗಿಸುವಂತೆ ಕೋರಿ ಪ್ರಧಾನಿ ಮೋದಿ ಮತ್ತು ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಮನವಿ ಮಾಡಿದ್ದಾರೆ. ಅಲ್ಲದೆ ತಾವು ಅಯ್ಯಪ್ಪನ ದರ್ಶನ ಮಾಡದೇ ಮಹಾರಾಷ್ಟ್ರಕ್ಕೆ ಮರಳುವುದಿಲ್ಲ ಎಂದೂ ಘೋಷಿಸಿದ್ದಾರೆ.

ತೀರ್ಪು ತಡೆಗೆ ಸುಪ್ರೀಂ ನಕಾರ

ಈ ನಡುವೆ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ ಸೆ.28ರ ತನ್ನ ತೀರ್ಪಿಗೆ ತಡೆ ನೀಡಲು ಸುಪ್ರೀಂಕೋರ್ಟ್‌ ಮತ್ತೊಮ್ಮೆ ನಿರಾಕರಿಸಿದೆ. ಸೆ.28ರ ತೀರ್ಪು ಮರುಪರಿಶೀಲನೆ ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತು ಬುಧವಾರ ವಿಚಾರಣೆ ನಡೆಸಿದ ನ್ಯಾಯಾಲಯ, ತಕ್ಷಣಕ್ಕೆ ತಡೆ ನೀಡಲು ನಿರಾಕರಿಸಿತು. ಅದರೆ ಈ ಎಲ್ಲಾ ಅರ್ಜಿಗಳನ್ನು ಜ.22ರಂದು ಸೂಕ್ತ ಪೀಠ ಪರಿಶೀಲಿಸಲಿದೆ ಎಂದು ಸ್ಪಷ್ಟಪಡಿಸಿತು. ಮಂಗಳವಾರ ಕೂಡಾ ಇದೇ ಸಂಬಂಧ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆಯೂ ಇದೇ ಅಭಿಪ್ರಾಯವನ್ನು ಕೋರ್ಟ್‌ ವ್ಯಕ್ತಪಡಿಸಿತ್ತು.

click me!