ವಿಮಾನ ನಿಲ್ದಾಣಗಳಲ್ಲಿ ಇನ್ನು ಕನ್ನಡದಲ್ಲೇ ಉದ್ಘೋಷ!

By Web DeskFirst Published Dec 27, 2018, 9:28 AM IST
Highlights

ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಇನ್ನು ಕನ್ನಡದಲ್ಲೇ ಉದ್ಘೋಷ!  ಸ್ಥಳೀಯ ಭಾಷೆಗಳಲ್ಲಿ ಸಾರ್ವಜನಿಕ ಪ್ರಕಟಣೆ | ವಿಮಾನ ನಿಲ್ದಾಣಗಳಿಗೆ ಕೇಂದ್ರ ಸರ್ಕಾರ ಸೂಚನೆ

ನವದೆಹಲಿ (ಡಿ.27):  ದೇಶದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಸಾರ್ವಜನಿಕ ಪ್ರಕಟಣೆಗಳನ್ನು ಮೊದಲು ಆಯಾ ಸ್ಥಳೀಯ ಭಾಷೆ, ಬಳಿಕ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಹೇಳುವಂತೆ ಕೇಂದ್ರ ಸರ್ಕಾರ ಎಲ್ಲ ಏರ್‌ಪೋರ್ಟ್‌ಗಳಿಗೆ ಸೂಚನೆ ನೀಡಿದೆ. ಇದರಿಂದಾಗಿ ಕರ್ನಾಟಕದ ವಿಮಾನ ನಿಲ್ದಾಣಗಳಲ್ಲಿ ಕನ್ನಡದಲ್ಲೇ ಉದ್ಘೋಷ ಮೊಳಗಲಿದೆ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ)ದ ನಿಯಂತ್ರಣದಲ್ಲಿರುವ ಏರ್‌ಪೋರ್ಟ್‌ಗಳು ಹಾಗೂ ಖಾಸಗಿ ವಿಮಾನ ನಿಲ್ದಾಣಗಳಿಗೆ ನಾಗರಿಕ ವಿಮಾನಯಾನ ಸಚಿವ ಸುರೇಶ್‌ ಪ್ರಭು ಅವರು ಈ ಸಂಬಂಧ ಬುಧವಾರ ನಿರ್ದೇಶನ ನೀಡಿದ್ದಾರೆ. ಯಾವುದೇ ಘೋಷಣೆಗಳನ್ನೂ ಮಾಡದೇ ‘ನಿಶ್ಶಬ್ದ’ (ಸೈಲೆಂಟ್‌) ಆಗಿರುವ ವಿಮಾನ ನಿಲ್ದಾಣಗಳಿಗೆ ಈ ನಿರ್ದೇಶನ ಅನ್ವಯವಾಗುವುದಿಲ್ಲ.

ವಿಮಾನ ನಿಲ್ದಾಣಗಳಲ್ಲಿ ಸಾಮಾನ್ಯವಾಗಿ ಹಿಂದಿ ಹಾಗೂ ಇಂಗ್ಲಿಷ್‌ನಲ್ಲೇ ಪ್ರಕಟಣೆ ಹೊರಡಿಸುವುದರಿಂದ ಆ ಭಾಷೆ ಗೊತ್ತಿಲ್ಲದ ಸ್ಥಳೀಯ ಭಾಷಿಕರಿಗೆ ಸಮಸ್ಯೆ ಆಗುತ್ತಿತ್ತು. ಈಗಾಗಲೇ ರೈಲ್ವೆಯಲ್ಲಿ ಸ್ಥಳೀಯ ಭಾಷೆ, ಹಿಂದಿ ಹಾಗೂ ಇಂಗ್ಲಿಷ್‌ ಅನ್ನು ಬಳಸಲಾಗುತ್ತಿದೆ.

click me!