’ಮೋದಿಯವರೇ ಬುಲೆಟ್‌ ರೈಲು ಬೇಡ, ಮೊದಲು ಇರೋ ರೈಲು ಸರಿ ಮಾಡಿ’

By Web DeskFirst Published Dec 27, 2018, 9:08 AM IST
Highlights

ಬುಲೆಟ್‌ ರೈಲು ಬೇಡ: ಮೊದಲು ಇರೋ ರೈಲು ಸರಿ ಮಾಡಿ: ಬಿಜೆಪಿ ನಾಯಕಿ | ಜನಸಾಮಾನ್ಯರು ಓಡಾಡುವ ರೈಲಿನ ವ್ಯವಸ್ಥೆಯನ್ನು ಸರಿ ಮಾಡಿಸಿ ಎಂದು ಬುದ್ದಿವಾದ ಹೇಳಿದ ಬಿಜೆಪಿ ನಾಯಕಿ 

ಅಮೃತಸರ (ಡಿ. 27): ‘ಮೋದೀಜೀ.. ನಮಗೆ ಬುಲೆಟ್‌ ರೈಲು ಬೇಕಿಲ್ಲ. ಇದರ ಬದಲು ಜನಸಾಮಾನ್ಯರು ಓಡಾಡುವ ಸಾಮಾನ್ಯ ರೈಲುಗಳ ವ್ಯವಸ್ಥೆಯನ್ನು ಸುಧಾರಿಸಿ’ ಎಂದು ಹೇಳುವ ಮೂಲಕ ವಯೋವೃದ್ಧ ಬಿಜೆಪಿ ನಾಯಕರೊಬ್ಬರು ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಪೀಯೂಶ್‌ ಗೋಯಲ್‌ ಅವರಿಗೆ ‘ಬುದ್ಧಿಮಾತು’ಗಳನ್ನು ಹೇಳಿದ್ದಾರೆ.

ಅಮೃತಸರದ ಬಿಜೆಪಿ ನಾಯಕಿ ಹಾಗೂ ಪಂಜಾಬ್‌ ಮಾಜಿ ಸಚಿವೆ ಲಕ್ಷ್ಮೇಕಾಂತಾ ಚಾವ್ಲಾ ಅವರೇ ಈ ಬುದ್ಧಿವಾದ ಹೇಳಿದ ಮಹಿಳೆಯಾಗಿದ್ದು, ಅವರು ಆಡಿದ ಮಾತುಗಳ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ಲಕ್ಷ್ಮೇ ಅವರು ಪ್ರಯಾಣಿಸುತ್ತಿದ್ದ ಸರಯೂ-ಯಮುನಾ ಎಕ್ಸ್‌ಪ್ರೆಸ್‌ ರೈಲು ಡಿಸೆಂಬರ್‌ 22ರಂದು ಯಾವುದೋ ಕಾರಣಕ್ಕೆ ಮಾರ್ಗ ಬದಲಿಸಿ 10 ತಾಸು ವಿಳಂಬವಾಗಿತ್ತು.

ಈ ವೇಳೆ ಎಸಿ-3 ಟಯರ್‌ ಬೋಗಿಯಲ್ಲಿ ಲಕ್ಷ್ಮೇ ಅವರೂ ಪ್ರಯಾಣಿಸುತ್ತಿದ್ದರು. ವಿಳಂಬದಿಂದ ರೋಸಿ ಹೋಗಿದ್ದಾಗಿ ವಿಡಿಯೋದಲ್ಲಿ ಹೇಳಿಕೊಳ್ಳುವ ಲಕ್ಷ್ಮೇ, ‘ರೈಲು ತನ್ನ ಮೂಲ ಮಾರ್ಗ ಬಳಸಿ ಬೇರೆಡೆ ಸಾಗಿ 10 ತಾಸು ವಿಳಂಬವಾಗಿದೆ. ವಿಳಂಬಕ್ಕೆ ಕಾರಣ ಕೇಳಿದರೆ ಯಾವ ರೈಲ್ವೆ ಅಧಿಕಾರಿಯೂ ಉತ್ತರಿಸುತ್ತಿಲ್ಲ. ನಮ್ಮಂಥ ವಯೋವೃದ್ಧರಿಗೆ ರೈಲಿನಲ್ಲಿ ಆಹಾರ ವ್ಯವಸ್ಥೆಯೂ ಇಲ್ಲ. ಹೀಗಾಗಿ 180 ಕಿ.ಮೀ. ವೇಗದ ರೈಲು ಅಥವಾ ಬುಲೆಟ್‌ ರೈಲು ಓಡಿಸುವ ಬದಲು ನಮ್ಮಂಥ ಸಾಮಾನ್ಯ ಪ್ರಯಾಣಿಕರು ಪ್ರಯಾಣಿಸುವ ಸಾಮಾನ್ಯ ರೈಲುಗಳ ವ್ಯವಸ್ಥೆ ಉದ್ಧಾರಕ್ಕೆ ಗಮನಕೊಡಿ ಮೋದೀ ಜೀ.. ಗೋಯಲ್‌ ಜೀ..’ ಎಂದು ಬಿನ್ನವಿಸಿಕೊಂಡಿದ್ದಾರೆ.
 

click me!