ಬನ್ನೇರುಘಟ್ಟಕ್ಕೆ ತೆರಳುವವರಿಗೆ ಗುಡ್ ನ್ಯೂಸ್

By Web DeskFirst Published Dec 27, 2018, 9:18 AM IST
Highlights

ಬನ್ನೇರುಘಟ್ಟಕ್ಕೆ ತೆರಳುವ ಪ್ರವಾಸಿಗರಿಗೆ ಇಲ್ಲಿದೆ ಗುಡ್ ನ್ಯೂಸ್. ಶೀಘ್ರದಲ್ಲೇ ಬ್ನನೇರುಘಟ್ಟದಲ್ಲಿ ಚಿರತೆ ಸಫಾರಿಯನ್ನು ಆರಂಭ ಮಾಡಲಾಗುತ್ತಿದೆ. 

ಬೆಂಗಳೂರು :  ಜೀವ ಜಗ​ತ್ತಿನ ಅತ್ಯಂತ ವೇಗದ ಸಸ್ತನಿ ಎಂಬ ಖ್ಯಾತಿ ಪಡೆ​ದಿ​ರುವ ಚಿರ​ತೆ​ಯನ್ನು ಉದ್ಯಾನ ನಗ​ರಿಯ ಸಮೀ​ಪವೇ ಸುರ​ಕ್ಷಿ​ತಾಗಿ ನೋಡುವ ಅವ​ಕಾಶ ಬೆಂಗ​ಳೂ​ರಿ​ಗ​ರಿಗೆ ಲಭ್ಯ​ವಾ​ಗ​ಲಿದೆ. ಬನ್ನೇ​ರು​ಘ​ಟ್ಟದ ಜೈವಿಕ ಉದ್ಯಾನ ರಾಜ್ಯದ ಮೊತ್ತ ಮೊದಲ ಹಾಗೂ ದೇಶದ ಎರ​ಡನೇ ಚಿರತೆ ಸಫಾ​ರಿ​ಯನ್ನು ಶೀಘ್ರ​ದಲ್ಲೇ ಆರಂಭಿ​ಸ​ಲಿ​ದೆ.

ಬನ್ನೇರುಘಟ್ಟದ್ದ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆ ಸಫಾರಿಗೆ ಅಗತ್ಯ ಸಿದ್ಧತೆಗಳು ನಡೆಯುತ್ತಿದ್ದು, ಭೋನಿನಲ್ಲಿರುವ ಚಿರತೆಗಳನ್ನು ಮಾತ್ರ ನೋಡಲು ಇದ್ದ ಅವಕಾಶ ಇದೀಗ ಕಾಡಿನಲ್ಲಿ ಸ್ವಾತಂತ್ರ್ಯವಾಗಿ ಓಡಾಡುವ ಚಿರತೆಗಳನ್ನು ಜನರು ಜೀಪು ಮತ್ತು ಅರಣ್ಯ ಇಲಾಖೆಯ ವಾಹನಗಳಲ್ಲಿ ಕುಳಿತು ಕಣ್ತುಂಬಿಕೊಳ್ಳಬಹುದಾಗಿದೆ. ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಬನ್ನೇರುಘಟ್ಟರಾಷ್ಟ್ರೀಯ ಉದ್ಯಾನವನದಲ್ಲಿ ಈಗಾಗಲೇ ಕರಡಿ ಮತ್ತು ಸಿಂಹಗಳ ಸಫಾರಿಗಳು ಇದೆ. ಇದೀಗ ಚಿರತೆ ಸಫಾರಿ ಪ್ರಾರಂಭವಾಗಲಿದೆ.

20 ಹೆಕ್ಟರ್‌ ಪ್ರದೇಶದಲ್ಲಿ ಸಫಾರಿ:  ಬನ್ನೇರುಘಟ್ಟದಲ್ಲಿ ಈಗಿರುವ ಕರಡಿ ಹಾಗೂ ಹುಲಿ ಮತ್ತು ಸಿಂಹ ಸಫಾರಿಗಳ ಮಧ್ಯೆ ಹೊಸ ಚಿರತೆ ಸಫಾರಿಯು ನಿರ್ಮಾಣವಾಗಲಿದೆ. ಸುಮಾರು 20 ಹೆಕ್ಟೇರ್‌ ಪ್ರದೇಶದಲ್ಲಿ ಚಿರತೆ ಸಫಾರಿಗೆ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಇನ್ನೆರೆಡು ತಿಂಗಳಲ್ಲಿ ಸಫಾರಿ ಪ್ರಾರಭವಾಗುತ್ತಿದ್ದು, ಪರಿಸರ ಪ್ರವಾಸೋದ್ಯಮದಲ್ಲಿ ಹೆಗ್ಗಳಿಗೆ ಪಡೆದಿರುವ ಬನ್ನೇರುಘಟ್ಟ, ಚಿರತೆ ಸಫಾರಿಯಿಂದ ಮತ್ತಷ್ಟುಸಾರ್ವಜನಿಕರು ಆಕರ್ಷಣೀಯ ಕೇಂದ್ರವಾಗಿ ಹೊರ ಹೊಮ್ಮಲಿದೆ.

ಚಿರತೆಗಳು ಅತ್ಯಂತ ವೇಗವಾಗಿ ಓಡುವುದು ಮತ್ತು ಎತ್ತರಕ್ಕೆ ಜಿಗಿಯುವುದರಲ್ಲಿ ಪರಿಣಿತಿ ಹೊಂದಿವೆ. ಅಂತಹವುಗಳನ್ನು ತೆರೆದ ಪ್ರದೇಶದಲ್ಲಿ ಬಿಡುವುದು ದೊಡ್ಡ ಸಾಹಸವಾಗಿದೆ. ಆದರೂ ಚಿರತೆಗಳನ್ನು ಹತೋ​ಟಿ​ಯ​ಲ್ಲಿ​ಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬನ್ನೇರುಘಟ್ಟಜೈವಿಕ ಉದ್ಯಾನವನದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬನ್ನೇರುಘಟ್ಟಮೃಗಾಲಯದಲ್ಲಿ ಪ್ರಾಣಿಗಳ ಪುನರ್ವಸತಿ ಕೇಂದ್ರ ಹಾಗೂ ಚಿರತೆ ಸಲಹುವ ಕೇಂದ್ರಗಳಿವೆ. ಮರಿಗಳು ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಚಿರತೆಗಳು ಇಲ್ಲಿವೆ. ಅಲ್ಲದೆ, ನಾಲ್ಕು ಚಿರತೆಗಳನ್ನು ಬೋನಿನಲ್ಲಿಟ್ಟು ಸಾರ್ವಜನಿಕರಿಗೆ ನೋಡಲು ಈಗ ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದ 8ರಿಂದ 10 ಚಿರತೆಗಳನ್ನು ಸಫಾರಿಗೆ ಬಿಡುವ ಚಿಂತ​ನೆ​ಯಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಪ್ರಾಣಿ ಸಂಗ್ರಹಾಲ​ಯ ಪ್ರಾಧಿಕಾರವು ಚಿರತೆ ಸಫಾರಿ ಯೋಜನೆಯನ್ನು ಮೈಸೂರಿನಲ್ಲಿ ಪ್ರಾರಂಭಿಸಲು ಉದ್ದೇ​ಶಿ​ಸಿತ್ತು. ಆದರೆ, ಮೈಸೂರು ಮೃಗಾಲಯದ ಆಡಳಿತವು ಸೆರೆಹಿಡಿದ ಚಿರತೆಗಳನ್ನು ಸ್ವೀಕರಿಸಲು ನಿರಾಕರಿಸಿತ್ತು. ಪರಿಣಾಮ ಬನ್ನೇರುಘಟ್ಟಜೈವಿಕ ಉದ್ಯಾನದಲ್ಲಿ ಚಿರತೆ ಸಫಾರಿ ಆರಂಭಿಸಲು ತೀರ್ಮಾನಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

6 ಕೋಟಿ ವೆಚ್ಚ:  ಚಿರತೆ ಸಫಾರಿಗೆ ಆರ್ಥಿಕ ನೆರವು ಕೋರಿ ರಾಜ್ಯ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಅಲ್ಲಿನ ಹಣ ಬಿಡುಗಡೆಯಾಗಿದ್ದು, ಬನ್ನೇರುಘಟ್ಟಜೈವಿಕ ಉದ್ಯಾನವನದಲ್ಲಿ ಸುಮಾರು 6 ಕೋಟಿ ವೆಚ್ಚ ಮಾಡಿ ಸಫಾರಿ ಪ್ರಾರಂಭಿಸಲಾಗುತ್ತಿದೆ.

ಇದೇ ಮೊದಲ ಬಾರಿಗೆ ಚಿರತೆ ಸಫಾರಿ ಪ್ರಾರಂಭಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಕೇಂದ್ರ ಅರಣ್ಯ ಇಲಾಖೆ ಸಮ್ಮತಿ ಸೂಚಿಸಿದೆ. ಚಿರತೆಗಳ ಸಫಾರಿ ಪ್ರಾರಂಭಕ್ಕಾಗಿ ಸಿವಿಲ್‌ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು, ಶೀಘ್ರದಲ್ಲಿ ಸಫಾರಿ ಪ್ರಾರಂಭಿಸಲಾಗುವುದು.

-ಸಂಜಯ್‌ ಬಿಜೂರು, ಬನ್ನೇರುಘಟ್ಟಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕರು.

 ವರದಿ : ರಮೇಶ್‌ ಬನ್ನಿ​ಕು​ಪ್ಪೆ

click me!