
ಮುಂಬೈ (ಫೆ.23): ಸಾಮಾಜಿಕ ಜಾಲತಾಣದಲ್ಲಿ ತನ್ನ ಶರೀರ ಲೇವಡಿ (ಬಾಡಿ ಶೇಮಿಂಗ್) ಮಾಡಿದ ಖ್ಯಾತ ಬರಹಗಾರ್ತಿ ಶೋಭಾ ಡೇ ಅವರಿಗೆ ಮಧ್ಯಪ್ರದೇಶದ ಪೊಲೀಸ್ ಅಧಿಕಾರಿ ತಕ್ಕ ಉತ್ತರವನ್ನು ಕೊಟ್ಟಿದ್ದಾರೆ.
ಕಳೆದ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ದಪ್ಪಗಿರುವ ಪೊಲೀಸ್ ಅಧಿಕಾರಿಯ ಫೋಟೋ ಹಾಕಿ ‘ಮುಂಬೈಯಲ್ಲಿಂದು ಭಾರೀ ಪೊಲೀಸ್ ಬಂದೋಬಸ್ತ್’ ಎಂದು ವ್ಯಂಗ್ಯ ಶೀರ್ಷಿಕೆ ಕೊಟ್ಟಿದ್ದರು.
ಮುಂಬೈ ಪೊಲೀಸರು ಆ ಪೊಸ್ಟ್’ಗೆ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೇ, ಆ ಫೋಟೋ ಮುಂಬೈ ಪೊಲೀಸ್ ಅಧಿಕಾರಿಯದ್ದು ಅಲ್ಲವೆಂದು ಸ್ಪಷ್ಟೀಕರಿಸಿದ್ದರು.
ವಾಸ್ತವದಲ್ಲಿ ಆ ಅಧಿಕಾರಿ ಹೆಸರು ಜೋಗಾವತ್ ಎಂದಾಗಿದ್ದು, ಮಧ್ಯ ಪ್ರದೇಶ ಪೊಲೀಸ್ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪೊಲೀಸರನ್ನು ವ್ಯಂಗ ಮಾಡಬೇಕಾದಾಗ ಈ ಫೋಟೋವನ್ನೆ ‘ನೆಟಿಝನ್’ಗಳು ಬಳಸುತ್ತಾರೆ.
2019ರಲ್ಲಿ ನಿವೃತ್ತಿ ಹೊಂದಲಿರುವ ಜೋಗಾವತ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ದೇಹದಿಂದಾಗಿ ಲೇವಡಿಗೊಳ ಪಡುವುದು ಬಹಳನೋವನ್ನುಂಟು ಮಾಡುತ್ತದೆ ಎಂದು ಹೇಳುತ್ತಾರೆ.
ಇದು ನಾನು ಸಬ್ ಇನ್ಸ್ಪೆಕ್ಟರ್ ಆಗಿದ್ದಾಗಿನ ಫೋಟೋ, ಇದನ್ನು ಯಾರು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೋ ಗೊತ್ತಿಲ್ಲ, ಎಂದು ಜೋಗಾವತ್ ಹೇಳುತ್ತಾರೆ.
ಶೋಭಾ ಡೇ ದೊಡ್ಡವರು, ಬರೆಯುವಾಗ ಹೊಣೆಗಾರಿಕೆಯಿಂದ ಬರೆಯಬೇಕು. ಇದು ಪ್ರಜಾತಂತ್ರ ದೇಶ, ಅವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಆದರೆ ಪರರನ್ನು ನೋಯಿಸಬಾರದು. ನಾನು ವಕೀಲರ ಸಲಹೆ ಪಡೆದು ಅವರಿಗೆ ನೋಟಿಸ್ ಕಳುಹಿಸುತ್ತೇನೆ. ನನ್ನ ಬದಲು ಅವರ ಆಪ್ತರು ಯಾರಾದರೂ ಇದ್ದರೆ ಅವರು ಈ ರೀತಿ ಲೇವಡಿ ಮಾಡುತ್ತಿದ್ದರೇ ಎಂದು ಜೋಗಾವತ್ ಪ್ರಶ್ನಿಸಿದ್ದಾರೆ.
ನಾನು ಬಾಲ್ಯದಿಂದ ಈ ರೀತಿ ದಪ್ಪಗಾಗಿಲ್ಲ. ಪಿತ್ತಕೋಶದಲ್ಲಿದ್ದ ಕಲ್ಲುಗಳನ್ನು ತೆಗೆಯಲು ಶಸ್ತ್ರ ಚಿಕಿತ್ಸೆ ಮಾಡಿದ ಬಳಿಕ ಹೀಗಾಗಿದ್ದೇನೆ. ಶೋಭಾ ಡೇ ನನ್ನ ಫೋಟೋ ಅವರ ಖಾತೆಯಲ್ಲಿ ಅಪ್’ಲೋಡ್ ಮಾಡಿದ್ದಾರೆ, ಅವರು ನನ್ನ ಚಿಕಿತ್ಸೆಯ ಖರ್ಚು ಭರಿಸುವರೇ? ಎಂದು ಜೋಗಾವತ್ ಕೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.