ಖಾಮೋಶ್: ಮೋದಿ ವಿರುದ್ಧ ಸ್ಪರ್ಧಿಸ್ತಾರೆ ಸ್ವಪಕ್ಷೀಯ ನಾಯಕ?

By Web DeskFirst Published Oct 12, 2018, 12:45 PM IST
Highlights

ಮೋದಿ ವಿರುದ್ಧ ಒಂದಾಗುತ್ತಿದೆ ವಿರೋಧಿ ಬಣ! ಪಕ್ಷದ ಒಳಗೇ ಆಕ್ಟೀವ್ ಆಗಿದೆ ಮೋದಿ ವಿರೋಧಿ ಬಣ! ಮೋದಿ ಶಕ್ತಿ ಕುಂದಿಸಲು ಯೋಜನೆ ರೂಪಿಸುತ್ತಿದೆ ಈ ಗುಂಪು! ಮೋದಿ ವಿರುದ್ಧ ವಾರಾಣಸಿಯಲ್ಲಿ ಸ್ಪರ್ಧೆ ಮಾಡ್ತಾರಾ ಶತ್ರುಘ್ನ ಸಿನ್ಹಾ?

ಲಕ್ನೋ(ಅ.12): 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ, ಮೋದಿ ಕಾರ್ಯವೈಖರಿ ಕುರಿತು ವಿಮರ್ಶೆ ಮಾಡುವವರಲ್ಲಿ ಸ್ವಪಕ್ಷದ ನಾಯಕರಾದ ಶತ್ರುಘ್ನ ಸಿನ್ಹಾ ಮೊದಲಿಗರಾಗಿ ನಿಲ್ಲುತ್ತಾರೆ. ನಗದು ಅಪದಿಕರಣ, ಜಿಎಸ್ ಟಿ, ಕಾಶ್ಮೀರ ಕುರಿತ ಕೇಂದ್ರ ಸರ್ಕಾರದ ನೀತಿ, ವಿದೇಶಾಂಗ ನೀತಿ ಹೀಗೆ ಮೋದಿ ಅವರ ಎಲ್ಲಾ ನಿರ್ಧಾರಗಳನ್ನು ಪ್ರಶ್ನಿಸಿದವರು ಶತ್ರುಘ್ನ ಸಿನ್ಹಾ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿರುವ ಸಿನ್ಹಾ, ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರನ್ನು ತಮ್ಮ ರಾಜಕೀಯ ಗುರು ಎಂದು ನಂಬುತ್ತಾರೆ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಲ್ಲಿ ಶತ್ರುಘ್ನ ಸಿನ್ಹಾ ಹೆಸರು ಅಗ್ರಪಂಕ್ತಿಯಲ್ಲಿದೆ.

ಆದರೆ ನರೇಂದ್ರ ಮೋದಿ ಸರ್ಕಾರದ ಮತ್ತು ಅಮಿತ್ ಶಾ ಪಕ್ಷದ ಅಧ್ಯಕ್ಷ ಜವಾಬ್ದಾರಿ ವಹಿಸಿಕೊಂಡ ಬಳಿಕ ಪಕ್ಷದ ಮೇಲೆ ಮುನಿಸಿಕೊಂಡವರ ಪಟ್ಟಿಯಲ್ಲಿ ಶತ್ರುಘ್ನ ಸಿನ್ಹಾ ಸೇರುತ್ತಾರೆ. ಯಶ್ವಂತ್ ಸಿನ್ಹಾ, ಮುರುಳಿ ಮನೋಹರ ಜೋಶಿ, ಅರುಣ್ ಶೌರಿ ಅವರಂತ ಹಿರಿಯ ಬಿಜೆಪಿ ನಾಯಕರು ಮೋದಿ, ಶಾ ಕಾರ್ಯವೈಖರಿಯನ್ನು ಟೀಕಿಸುತ್ತಿರುವ ಇತರ ಪ್ರಮುಖರು.

ಅದರಂತೆ ಇನ್ನೇನು 2019ರ ಲೋಕಸಭೆ ಚುನಾವಣೆ ಸನಿಹದಲ್ಲೇ ಇದೆ. ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಸೇರಿದಂತೆ ಎಲ್ಲಾ ಪ್ರಮುಖ ವಿಪಕ್ಷಗಳು ಒಂದಾಗುವತ್ತ ಹೆಜ್ಜೆ ಇರಿಸಿವೆ. ಅಲ್ಲದೇ ಬಿಜೆಪಿಯಲ್ಲೇ ಇರುವ ಮೋದಿ ವಿರೋಧಿ ಬಣ ಕೂಡ ಆ್ಯಕ್ಟೀವ್ ಆದಂತಿದೆ.

ಮೋದಿ ಅವರನ್ನು ಹಣಿಯಲು ಪಕ್ಷದ ಒಳಗಿನಿಂದ ಮತ್ತು ಹೊರಗಿನಿಂದ ಸಿದ್ಧತೆ ನಡೆಸಿರುವ ಈ ಬಣ, ಲೋಕಸಭೆ ಚುನಾವಣೆಗೆ ತನ್ನದೇ ಆದ ರಣತಂತ್ರ ರೂಪಿಸುತ್ತಿದೆ. ಅದರಂತೆ ಪಾಟ್ನಾ ಸಂಸದ ಶತ್ರುಘ್ನ ಸಿನ್ಹಾ ಸಮಾಜವಾದಿ ಪಕ್ಷ ಸೇರಿ, ವಾರಾಣಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧೆ ನಡೆಸುವ ಯೋಚನೆಯಲ್ಲಿದ್ದಾರೆ ಎನ್ನಲಾಗುತ್ತಿದೆ.

ಇದಕ್ಕೆ ಪುಷ್ಠಿ ನೀಡುವಂತೆ ಇತ್ತೀಚಿಗೆ ನಡೆದ ಸಮಾಜವಾಆದಿ ಪಕ್ಷದ ಕಾರ್ಯಕ್ರಮವೊಂದರಲ್ಲಿ ಎಸ್‌ಪಿ ನಾಯಕರೊಂದಿಗೆ ವೇದಿಕೆ ಹಂಚಿಕೊಂಡಿರುವ ಶತ್ರುಘ್ನ ಸಿನ್ಹಾ, ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

ಮೋದಿ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸಿ ಆ ಮೂಲಕ ಮೋದಿ ಪಕ್ಷ ಮತ್ತು ದೇಶವನ್ನು ಹೇಗೆ ನಿಯಂತ್ರಣಕ್ಕೆ ತರಲು ಪ್ರಯತ್ನ ನಡೆಸಿದ್ದಾರೆ ಎಂಬುದರ ಕುರಿತು ಪ್ರಚಾರ ಮಾಡುವ ಯೋಜನೆ ಶತ್ರುಘ್ನ ಸಿನ್ಹಾ ಅವರದ್ದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದಕ್ಕೆ ಹಿರಿಯ ನಾಯಕರಾದ ಯಶ್ವಂತ್ ಸಿನ್ಹಾ, ಅರುಣ್ ಶೌರಿ ಮುಂತಾದ ಹಿರಿಯ ಬಿಒಜೆಪಿ ನಾಯಕರ ಬೆಂಬಲ ಇದ್ದು, ಲೋಕಸಭೆ ಚುನಾವಣೆಯಲ್ಲಿ ಮೋದಿ ಅವರಿಗೆ ಮುಜುಗರ ತಂದಿಡುವ ಎಲ್ಲಾ ಪ್ರಯತ್ನಗಳು ಈ ಗುಂಪಿನಿಂದ ನಡೆಯಲಿರುವುದು ಖಚಿತ.

click me!