ಪ್ರಿಯಾಂಕಾ ಹಟಕ್ಕೇ ಜಯ: ಎಸ್‌ಪಿ, ಬಿಎಸ್‌ಪಿಗೆ ಶಾಕ್‌ ಬಿಜೆಪಿಗೆ ಅಚ್ಚರಿ!

Published : Jul 21, 2019, 08:51 AM ISTUpdated : Jul 21, 2019, 08:52 AM IST
ಪ್ರಿಯಾಂಕಾ ಹಟಕ್ಕೇ ಜಯ: ಎಸ್‌ಪಿ, ಬಿಎಸ್‌ಪಿಗೆ ಶಾಕ್‌ ಬಿಜೆಪಿಗೆ ಅಚ್ಚರಿ!

ಸಾರಾಂಶ

ಪ್ರಿಯಾಂಕಾ ಹಟಕ್ಕೇ ಜಯ| ಪಟ್ಟು ಬಿಡದೇ ಸೋನ್‌ಭದ್ರ ಶೂಟೌಟ್‌ ಸಂತ್ರಸ್ತರ ಭೇಟಿ| ಕಾಶಿ ವಿಶ್ವನಾಥ, ಕಾಲಭೈರವ ದರ್ಶನ ಬಳಿಕ ದಿಲ್ಲಿಗೆ ವಾಪಸ್‌| ಎಸ್‌ಪಿ, ಬಿಎಸ್‌ಪಿಗೆ ಶಾಕ್‌ ಬಿಜೆಪಿಗೆ ಅಚ್ಚರಿ ಕೊಟ್ಟ ಪ್ರಿಯಾಂಕಾ ಧರಣಿ!

ಮಿರ್ಜಾಪುರ/ಲಖನೌ[ಜು.21]: ಉತ್ತರಪ್ರದೇಶದ ಸೋನ್‌ಭದ್ರದಲ್ಲಿ ಗ್ರಾಮ ಪಂಚಾಯಿತಿ ಮುಖ್ಯಸ್ಥನ ಬೆಂಬಲಿಗರು ನಡೆಸಿದ ಶೂಟೌಟ್‌ಗೆ ಬಲಿಯಾದ ಬುಡಕಟ್ಟು ಜನರ ಕುಟುಂಬ ಸದಸ್ಯರನ್ನು ಭೇಟಿಯಾಗಿಯೇ ತೀರುವುದಾಗಿ ಹಟ ಹಿಡಿದು ಕುಳಿತಿದ್ದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಅದರಲ್ಲಿ ಯಶಸ್ವಿಯಾಗಿದ್ದಾರೆ. ಪ್ರಿಯಾಂಕಾ ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು ಕಾಂಗ್ರೆಸ್‌ ನಾಯಕಿಯನ್ನು ಇಟ್ಟಿದ್ದ ಮಿರ್ಜಾಪುರ ಗೆಸ್ಟ್‌ಹೌಸ್‌ಗೆ ಬುಡಕಟ್ಟು ಜನರ 15 ಸದಸ್ಯರನ್ನು ಕರೆತಂದು ಭೇಟಿ ಮಾಡಿಸಿದ್ದಾರೆ.

ಇದರ ಬೆನ್ನಲ್ಲೇ ನನ್ನ ಉದ್ದೇಶ ಈಡೇರಿದೆ. ಸಂತ್ರಸ್ತರನ್ನು ಭೇಟಿ ಮಾಡಿದ್ದೇನೆ. ಈಗ ವಾಪಸ್‌ ಹೋಗುತ್ತಿದ್ದೇನೆ. ಮತ್ತೆ ಬರುತ್ತೇನೆ ಎಂದು ಮಿರ್ಜಾಪುರದಿಂದ ಪ್ರಿಯಾಂಕಾ ಹೊರಟಿದ್ದಾರೆ. ಬಳಿಕ ವಾರಾಣಸಿಗೆ ಆಗಮಿಸಿ ಕಾಶಿ ವಿಶ್ವನಾಥ ಹಾಗೂ ಕಾಲಭೈರವನ ದರ್ಶನ ಪಡೆದು ಶನಿವಾರ ದೆಹಲಿಗೆ ಮರಳಿದ್ದಾರೆ.

ಈ ನಡುವೆ, ನೀರು ಹಾಗೂ ವಿದ್ಯುತ್‌ ಇಲ್ಲದ ಗೆಸ್ಟ್‌ಹೌಸ್‌ನಲ್ಲಿ ಪ್ರಿಯಾಂಕಾ ಅವರನ್ನು ಬಂಧಿಸಿಡಲಾಗಿತ್ತು. ಪ್ರಜಾಪ್ರಭುತ್ವವನ್ನು ತುಳಿಯುವ ಉತ್ತರಪ್ರದೇಶ ಸರ್ಕಾರದ ಯತ್ನ ಇದಾಗಿದೆ ಎಂದು ಪ್ರಿಯಾಂಕಾ ಸೋದರ ರಾಹುಲ್‌ ಗಾಂಧಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಶೂಟೌಟ್ ಸ್ಥಳಕ್ಕೆ ತೆರಳುತ್ತಿದ್ದ ಪ್ರಿಯಾಂಕಾ ವಶಕ್ಕೆ!

ಆಗಿದ್ದೇನು?:

ಸೋನ್‌ಭದ್ರದಲ್ಲಿ ತುಂಡು ಭೂಮಿ ವಿವಾದ ಸಂಬಂಧ 10 ಬುಡಕಟ್ಟು ಜನರನ್ನು ಗುಂಡಿಟ್ಟು ಕೊಲ್ಲಲಾಗಿತ್ತು. ಆ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಶುಕ್ರವಾರ ಆಗಮಿಸಿದ್ದ ಪ್ರಿಯಾಂಕಾಗೆ ಪೊಲೀಸರು ತಡೆಯೊಡ್ಡಿದ್ದರು. ರಸ್ತೆಯಲ್ಲೇ ಕುಳಿತು ಧರಣಿ ಆರಂಭಿಸಿದ ಹಿನ್ನೆಲೆಯಲ್ಲಿ ಪ್ರಿಯಾಂಕಾ ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಗೆಸ್ಟ್‌ಹೌಸ್‌ವೊಂದಕ್ಕೆ ಕರೆದೊಯ್ದಿದ್ದರು. ಎಷ್ಟೇ ಮನವೊಲಿಕೆ ಮಾಡಿದರೂ ಪ್ರಿಯಾಂಕಾ ತೆರಳಿರಲಿಲ್ಲ. ರಾತ್ರಿಯನ್ನು ಗೆಸ್ಟ್‌ಹೌಸ್‌ನಲ್ಲಿ ಕಳೆದರು. ಈ ಹಿನ್ನೆಲೆಯಲ್ಲಿ ಸಂತ್ರಸ್ತ ಕುಟುಂಬಗಳನ್ನು ಕರೆತಂದು ಪ್ರಿಯಾಂಕಾ ಅವರನ್ನು ಅಧಿಕಾರಿಗಳು ಭೇಟಿ ಮಾಡಿಸಿದರು.

ಎಸ್‌ಪಿ, ಬಿಎಸ್‌ಪಿಗೆ ಶಾಕ್‌ ಬಿಜೆಪಿಗೆ ಅಚ್ಚರಿ ಕೊಟ್ಟ ಪ್ರಿಯಾಂಕಾ ಧರಣಿ!

ಸೋನ್‌ಭದ್ರ ಶೂಟೌಟ್‌ ಘಟನೆ ಮುಂದಿಟ್ಟುಕೊಂಡು ಪ್ರಿಯಾಂಕಾ ವಾದ್ರಾ ನಡೆಸಿದ ಧರಣಿ, ಪ್ರತಿಭಟನೆ ರಾಜ್ಯದಲ್ಲಿ ನಿದ್ದೆಗಣ್ಣಿನಲ್ಲಿರುವ ಸಮಾಜವಾದಿ ಪಕ್ಷ ಮತ್ತು ಬಿಎಸ್‌ಪಿಗೆ ಶಾಕ್‌ ನೀಡಿದ್ದರೆ, ಆಡಳಿತಾರೂಢ ಬಿಜೆಪಿಗೆ ಅಚ್ಚರಿ ಮೂಡಿಸಿದೆ. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್‌ ಕಥೆ ಇನ್ನೇನು ಮುಗಿದುಹೋಯಿತು ಅನ್ನುವಷ್ಟರಲ್ಲೇ ಸೋನ್‌ಭದ್ರ ಘಟನೆಗೆ ಪ್ರಿಯಾಂಕಾ ಪ್ರತಿಕ್ರಿಯಿಸಿದ ರೀತಿ ಸಾಕಷ್ಟುಕುತೂಹಲಕ್ಕೆ ಕಾರಣವಾಗಿದೆ.

ಒಂದೇ ಘಟನೆಯಲ್ಲಿ 10 ಜನ ಸಾವನ್ನಪ್ಪಿದ್ದರೂ, ಎಸ್‌ಪಿ, ಬಿಎಸ್‌ಪಿ ನಾಯಕರು ಅತ್ತ ಮುಖ ಹಾಕಲಿಲ್ಲ. ಮತ್ತೊಂದೆಡೆ ಆಡಳಿತಾರೂಢ ಬಿಜೆಪಿ ನಾಯಕರೂ ಘಟನೆ ನಡೆದ ಸ್ಥಳಕ್ಕೆ ದೌಡಾಯಿಸಲಿಲ್ಲ. ಇಂಥ ಸಮಯದಲ್ಲೇ ಇಡೀ ದೇಶದ ಗಮನ ಸೆಳೆದಿದ್ದ ಘಟನೆಗೆ ಮಧ್ಯಪ್ರವೇಶ ಮಾಡಿದ ಪ್ರಿಯಾಂಕಾ ಇಡೀ ದೇಶ ಗಮನ ಸೆಳೆದರು. ಜೊತೆಗೆ ಸ್ಥಳೀಯ ಹಿಂದುಳಿದ ಸಮುದಾಯದ ಜನರ ಮೇಲೂ ಪರಿಣಾಮ ಬೀರುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಮುಂದಿನ ದಿನಗಳಲ್ಲಿ ಉತ್ತರಪ್ರದೇಶವನ್ನು ಪ್ರಿಯಾಂಕಾ ತಮ್ಮ ಹೋರಾಟದ ಭೂಮಿಯಾಗಿ ಮಾಡಿಕೊಳ್ಳುವ ಮುನ್ಸೂಚನೆ ಎನ್ನಲಾಗಿದೆ.

ಸಹಜವಾಗಿಯೇ ಈ ಬೆಳವಣಿಗೆ ಎಸ್‌ಪಿ, ಬಿಎಸ್‌ಪಿ ನಾಯಕರಿಗೆ ಶಾಕ್‌ ನೀಡಿದ್ದರೆ, ಬಿಜೆಪಿ ನಾಯಕರಲ್ಲಿ ಅಚ್ಚರಿ ಮೂಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಕಲಿ ಕ್ಯೂಆರ್​ ಕೋಡ್​ಗೆ ಬಲಿಯಾಗದಿರಿ ಎಚ್ಚರ! ಯಾಮಾರಿದ್ರೆ ಅಕೌಂಟ್​ ಖಾಲಿ: ನಕಲಿ ಗುರುತಿಸುವುದು ಹೇಗೆ?
ವಿಶ್ವ ಕನ್ನಡ ಹಬ್ಬ' ಹೆಸರಿನಲ್ಲಿ ಕೋಟಿ ಕೋಟಿ ವಂಚನೆ ಆರೋಪ: ಮಹಿಳೆಯರಿಗೆ ಪದವಿ ಆಮಿಷ; ಸರ್ಕಾರದ ₹40 ಲಕ್ಷ ದುರ್ಬಳಕೆ!