ಮಹಾ ಮೈತ್ರಿಕೂಟ: ವಿರೋಧಿಗಳನ್ನು ಎದುರಿಸೋ ತಾಕತ್ತು ಮೋದಿಗಿದೆಯಾ?

First Published May 21, 2018, 3:09 PM IST
Highlights

ಕರ್ನಾಟಕದಲ್ಲಿ ಸರಕಾರ ರಚಿಸಲು ಬಿಜೆಪಿ ವಿಫಲವಾದರೂ, ಅತಿ ಹೆಚ್ಚು ಸ್ಥಾನ ಗಳಿಸಿರುವ ಏಕೈಕ ಪಕ್ಷವಾಗಿ ಹೊರಹೊಮ್ಮುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಇದು ಮೋದಿ ಹಾಗೂ ಶಾ ಜೋಡಿ ಗೆಲವು ಎಂಬುವುದು ಸ್ಪಷ್ಟ. ಇಂಥ ಸಂದರ್ಭದಲ್ಲಿ ಮೋದಿಯನ್ನು ಮಣಿಸಲು ಎಲ್ಲ ರಾಜಕೀಯ ಪಕ್ಷಗಳು ಒಂದಾಗುತ್ತಿದ್ದು, ಜತೆಯಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಲು ಸಜ್ಜಾಗುತ್ತಿವೆ.

2014ರ ಚುನಾವಣೆಯಲ್ಲಿ ಯಾರೂ ಊಹಿಸದಂತೆ ದಿಗ್ವಿಜಯ ಸಾಧಿಸಿದ್ದ ಮೋದಿ, ಎಲ್ಲ ವಿರೋಧ ಪಕ್ಷಗಳನ್ನೂ ಧೂಳಿಪಟ ಮಾಡಿದ್ದರು. ಅದಾದ ನಂತರ ನಡೆದ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿಯೂ ಮೋದಿ ಅಶ್ವಮೇಧ ಕುದುರೆಯ ಓಟ ಮುಂದುವರಿದಿತ್ತು. ಆದರೆ, ಕರ್ನಾಟಕದಲ್ಲಿ ಮೋದಿ ಅಶ್ವಮೇಧದ ಕುದುರೆಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಕಟ್ಟಿ ಹಾಕಿವೆ. ಇಷ್ಟಾದರೂ ಕರ್ನಾಟಕದಲ್ಲಿ ಕಾಂಗ್ರೆಸ್​ ಅನ್ನು ದಯನೀಯ ಸ್ಥಿತಿಗೆ ತಂದ್ದದ್ದು ಮಾತ್ರ ಮೋದಿ ಎಂಬುದರಲ್ಲಿ ಅನುಮಾನವೇ ಇಲ್ಲ. ಈಗ ಮೋದಿಯನ್ನು 2019ಕ್ಕೆ ಕಟ್ಟಿಹಾಕಲು ಕರ್ನಾಟಕ ಮಾದರಿ ಮೂಲಕ ಮಹಾ ಮೈತ್ರಿ ಕಟ್ಟಿಕೊಳ್ಳಬೇಕು ಎಂಬ ಚರ್ಚೆ ಶುರವಾಗಿದೆ. 

ಮೋದಿಯನ್ನು ಮಣಿಸುತ್ತಾ ಮಹಾ ಮೈತ್ರಿಕೂಟ!

ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ಓಟವನ್ನು ತಡೆಯಲು ಮೋದಿ ವಿರುದ್ಧ ಇತರರು ಒಂದಾಗಿ ಹೋರಾಡಬೇಕಿದೆ. ಉತ್ತರ ಪ್ರದೇಶ ಉಪಚುನಾವಣೆ  ಮತ್ತು ಕರ್ನಾಟಕ ಚುನಾವಣೆ ಈ ಮಾತಿಗೆ ಪುಷ್ಠಿ ನೀಡುತ್ತಿವೆ. ಶಿವಸೇನೆ ಮತ್ತು ತೆಲುಗು ದೇಶಂ ಪಾರ್ಟಿ ಈಗಾಗಲೇ ಎನ್​ಡಿಎ ಮೈತ್ರಿಕೂಟದಿಂದ ಹೊರಬಿದ್ದಿವೆ. ಈ ಎರಡು ಪಕ್ಷಗಳೂ ಮೋದಿ ವಿರೋಧಿ ಒಕ್ಕೂಟದ ಭಾಗವಾಗೋದು ಖಚಿತ. ಪ್ರಾದೇಶಿಕ ಪಕ್ಷಗಳಿಗೆ ತಮ್ಮ ಅಸ್ಥಿತ್ವ ಉಳಿಸಿಕೊಳ್ಳುವುದೇ ಸವಾಲಾಗಿರುವ ಹಿನ್ನೆಲೆಯಲ್ಲಿ ಬಹುತೇಕ ಪಕ್ಷಗಳು ಒಕ್ಕೂಟದ ಭಾಗವಾಗಬಹುದು. ಆಗ ಮೋದಿ ವರ್ಸಸ್ ಅದರ್ಸ್ ಹೋರಾಟ ಶುರುವಾಗುತ್ತೆ. ಈ ಹಿಂದಿನ ಎಲ್ಲ ಚುನಾವಣೆಗಳಿಗಿಂತಲೂ 2019ರ ಲೋಕಸಭಾ ಚುನಾವಣೆ ರಣರಂಗವಾಗಲಿದೆ.

ಮೋದಿ ಜತೆಗೆ ಬರುವ ಪಕ್ಷಗಳೆಷ್ಟು?

2019ರ ಚುನಾವಣೆಯಲ್ಲಿ ಮೋದಿಯನ್ನು ಮಣಿಸಬೇಕಾದರೆ ಚುನಾವಣೋತ್ತರ ಮೈತ್ರಿಕೂಟವೇ ಮದ್ದು. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳದಿದ್ದರೆ ಅದರ ನೇರ ಲಾಭ ಮೋದಿಗೇ ಆಗುತ್ತದೆ. ಇದೇ ಕಾರಣದಿಂದ ತೃಣಮೂಲ ಕಾಂಗ್ರೆಸ್, ತೆಲುಗು ದೇಶಂ, ಟಿಆರ್​ಎಸ್, ಬಿಜೆಡಿ, ಎಸ್​ಪಿ, ಬಿಎಸ್​ಪಿ ಪಕ್ಷಗಳು ಕಾಂಗ್ರೆಸ್ ಜತೆ ಸೇರಿ ಮಹಾ ಮೈತ್ರಿ ಮಾಡಿಕೊಳ್ಳುವ ಲಕ್ಷಣಗಳು ಕಾಣುತ್ತಿವೆ. ಬಿಜೆಪಿ ಜತೆಯಲ್ಲಿ ಅಕಾಲಿದಳ ಮತ್ತು ಜೆಡಿಯು ಬಿಟ್ಟರೆ ಪ್ರಬಲ ಪಕ್ಷಗಳ ಬಲವಿಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ ಎನ್​ಡಿಎ ಮೈತ್ರಿಕೂಟದ ಬಲ ಹೆಚ್ಚಿಸಿಕೊಳ್ಳಲೂ ಯತ್ನಿಸಬಹುದು. 

ಮಹಾಮೈತ್ರಿ ಸುಲಭವೇ?

ಮೋದಿಯನ್ನು ಎದುರಿಸಲು ಮಹಾ ಮೈತ್ರಿಕೂಟ ರಚನೆಯೊಂದೇ ಅಸ್ತ್ರ ಅನ್ನೋದು ಎಲ್ಲ ಪಕ್ಷಗಳಿಗೂ ಗೊತ್ತು. ಆದರದು ಅಷ್ಟು ಸುಲಭದ ಮಾತಲ್ಲ. ಯಾಕಂದ್ರೆ ಮಹಾ ಮೈತ್ರಿ ಮಾಡಿಕೊಳ್ಳಲಿರುವ ಎಲ್ಲ ಪಕ್ಷಗಳಿಗೂ ಪ್ರಧಾನಿ ಹುದ್ದೆ ಮೇಲೆ ಕಣ್ಣಿದೆ. ರಾಹುಲ್ ಗಾಂಧಿ ಸಹಜವಾಗಿ ಕಾಂಗ್ರೆಸ್​ನ ಪ್ರಧಾನಿ ಅಭ್ಯರ್ಥಿಯಾದರೆ, ಮಮತಾ ಬ್ಯಾನರ್ಜಿ, ಬಿಜು ಪಟ್ನಾಯಕ್, ಚಂದ್ರಬಾಬು ನಾಯ್ಡು, ಮಾಯಾವತಿ, ಮುಲಾಯಂ ಸಿಂಗ್ ಎಲ್ಲಲೂ  ಪ್ರಧಾನಿ ಗಾದಿ ಕಣ್ಣಿಟ್ಟಿದ್ದಾರೆ. 

ದೆಹಲಿಯಲ್ಲಿ ಮೋದಿ ವಿರುದ್ಧ ಅರವಿಂದ್ ಕೇಜ್ರಿವಾಲ್ ಝೇಂಕರಿಸಿ ಗೆದ್ದಾಗ ಮತ್ತು ಬಿಹಾರದಲ್ಲಿ ನಿತೀಶ್​-ಲಾಲು ಮಧ್ಯೆ ಮೈತ್ರಿಯಾದಾಗಲೂ ಮಹಾ ಮೈತ್ರಿ ಆಸೆ ಕುದುರಿತ್ತು. ಆದ್ರೆ ಲೋಕಸಭಾ ಚುನಾವಣೆಯಲ್ಲಿ ಕೇಜ್ರಿ ಸೋತು ಸುಣ್ಣವಾದರೆ, ನಿತೀಶ್​ ಕುಮಾರ್ ಮತ್ತೆ ಎನ್​ಡಿಎ ಕಡೆಗೇ ಬಂದರು.  ಹಾಗಾಗಿ ಮಹಾ ಮೈತ್ರಿಕೂಟ ಯಶಸ್ವಿಯಾಗುವುದು ಸುಲಭವೂ ಅಲ್ಲ. ಅಸಾಧ್ಯವೆಲ್ಲೂ ಆಗುವುದಿಲ್ಲ. ಇಂಥ ಸಂದರ್ಭದಲ್ಲಿ ಮೋದಿ ಪ್ರಧಾನಿಯಾಗಿ ಮಂದುವರಿಯುತ್ತಾರಾ? 2019ರ ಚುನಾವಣೆಯಲ್ಲಿಯೂ ದೇಶದ ಜನ ಮೋದಿಯ ಕೈ ಹಿಡಿಯುತ್ತಾರಾ?

click me!