
ಲಂಡನ್(ಮೇ.27): 2011ರ ಮೇ 1ರಂದು ಕುಖ್ಯಾತ ಉಗ್ರ ಒಸಾಮಾ ಬಿನ್ ಲಾಡೆನ್'ನ್ನು ಹೇಗೆ ಕೊಂದೆವು ಎಂಬುದರ ಬಗ್ಗೆ ಅಮೆರಿಕದ ನೌಕಾ ಪಡೆಯ ವಿಶೇಷ ಸಿಬ್ಬಂದಿ ಹಲವು ಬಾರಿ ಮಾಹಿತಿ ನೀಡಿದ್ದಾರೆ. ಆದರೆ ದಾಳಿಯ ವೇಳೆ ಮನೆಯೊಳಗಿನ ಪರಿಸ್ಥಿತಿ ಹೇಗಿತ್ತು ಎಂಬುದರ ಲಾಡೆನ್‌ನ ನಾಲ್ಕನೇ ಮತ್ತು ಅತ್ಯಂತ ಕಿರಿಯ ಪತ್ನಿ ಅಮಲ್ ಮೊದಲ ಬಾರಿ ಮಾಹಿತಿ ನೀಡಿದ್ದಾಳೆ. ‘ದ ಎಕ್ಸೈಲ್: ದ ಫ್ಲೈಟ್ ಆಫ್ ಒಸಾಮಾ ಬಿನ್ ಲಾಡೆನ್' ಎಂಬ ಪುಸ್ತಕದ ಲೇಖಕರಾದ ಕ್ಯಾಥಿ ಸ್ಕಾಟ್-ಕ್ಲಾಕ್ ಮತ್ತು ಆ್ಯಡ್ರಿಯನ್ ಲೆವಿಗೆ ಲಾಡೆನ್‌ನ ಕೊನೆಯ ಕ್ಷಣಗಳ ಬಗ್ಗೆ ಅಮಲ್ ಮಾಹಿತಿ ನೀಡಿದ್ದಾಳೆ.
ಆ ಪುಸ್ತಕದಲ್ಲಿ ಕೆಲ ಮಾಹಿತಿಯನ್ನು ಬ್ರಿಟನ್‌ನ ಪತ್ರಿಕೆಯೊಂದು ಪ್ರಕಟಿಸಿದೆ. ಅದರಲ್ಲಿ ಈ ಎಲ್ಲಾ ಮಾಹಿತಿ ಇದೆ ‘ಊಟ ಮುಗಿಸಿದ ಬಳಿಕ ನಾವು ಪಾತ್ರೆ ತೊಳೆದು ಮೇಲಿನ ಮಹಡಿಯಲ್ಲಿ ವಿಶ್ರಾಂತಿ ಪಡೆಯುತ್ತಾ ಇದ್ದೆವು. ಪಕ್ಕದಲ್ಲೇ ಅವರು ಮಲಗಿದ್ದರು. ಅಷ್ಟರಲ್ಲೇ ಮನೆಯ ಬಳಿ ಭಾರೀ ಸದ್ದು ಕೇಳಿಬಂತು. ಆತಂಕದಿಂದ ನಾನು ಪತಿಯನ್ನು ಎಬ್ಬಿಸಿದೆ. ಅವರು ಅಮೆರಿಕನ್ನರು ಬಂದಿದ್ದಾರೆ ಎಂದು ಭಯದಿಂದ ಕೂಗಿಕೊಂಡರು. ತಾನು ಸಿಕ್ಕಿಬಿದ್ದಿದ್ದೇನೆ ಎಂದು ಅವರಿಗೆ ಗೊತ್ತಾಗಿತ್ತು. ಅವರಿಗೆ ಬೇಕಾಗಿರುವುದು ನಾನು, ನೀವೆಲ್ಲಾ ಕೆಳಗಿನ ಮಹಡಿಗೆ ಹೋಗಿ ಎಂದು ಮೂವರು ಪತ್ನಿಯರು ಮತ್ತು ಮಕ್ಕಳಿಗೆ ಹೇಳಿದರು. ನಾನು ಮತ್ತು ನನ್ನ ಪುತ್ರ ಹುಸೇನ್ ಅವರ ಜೊತೆಗೇ ಉಳಿದುಕೊಂಡೆವು.'
‘ಮುಂದೆ ಕ್ಷಣಕ್ಷಣಕ್ಕೂ ಯೋಧರು ನಮ್ಮ ಸಮೀಪ ಆಗಮಿಸುತ್ತಿರುವ ಸದ್ದು ಜೋರಾಗಿ ಕೇಳಿಸತೊಡಗಿತು. ತಪ್ಪಿಸಿಕೊಳ್ಳೋಣವೆಂದರೆ ಯಾವುದೇ ಪರ್ಯಾಯ ಮಾರ್ಗ ನಮಗೆ ಉಳಿದಿರಲಿಲ್ಲ. ಲಾಡೆನ್ರ ಒಳವಸ್ತ್ರದಲ್ಲಿ ಬಚ್ಚಿಟ್ಟಿದ್ದ ಒಂದಿಷ್ಟುಹಣ ಮತ್ತು ಕೆಲ ಉಗ್ರರ ಟೆಲಿಫೋನ್ ಸಂಖ್ಯೆ ಬಿಟ್ಟರೆ ಅವರೇನೂ ತಮ್ಮ ಬಳಿ ಇಟ್ಟುಕೊಂಡಿರಲಿಲ್ಲ. ಕೊನೆಗೆ ಯೋಧರು ನಮ್ಮ ಕೊಠಡಿಗೂ ನುಗ್ಗಿದಾಗ, ನಾನು ಅವರತ್ತ ನುಗ್ಗಿ ಅವರನ್ನು ತಡೆಯಲು ಯತ್ನಿಸಿದೆ. ಈ ವೇಳೆ ಅವರು ಹಾರಿಸಿದ ಗುಂಡು ನನ್ನ ಕಾಲಿಗೆ ತಗಲಿತು. ನಾನು ಸತ್ತಂತೆ ಸುಮ್ಮನೆ ಮಲಗಿದೆ. ಇದಾದ ಕೆಲ ಸೆಕೆಂಡ್ಗಳಲ್ಲಿಯೇ ಯೋಧರು ಲಾಡೆನ್ರನ್ನು ಗುಂಡಿಕ್ಕಿ ಹತ್ಯೆ ಮಾಡಿದರು. ತಾವು ಕೊಂದಿದ್ದು ನಿಜವಾಗಿಯೂ ಲಾಡೆನ್ನನ್ನೇ ಎಂದು ಖಚಿತಪಡಿಸಿಕೊಳ್ಳಲು ಅವರು ಪುತ್ರಿಯರಾದ ಸುಮಯ್ಯಾ ಮತ್ತು ಮಿರಯ್ಯಾ ಅವರನ್ನು ಲಾಡೆನ್ ದೇಹದ ಬಳಿ ಹಿಡಿದು ಇದು ಯಾರು ಎಂದರು. ಇಬ್ಬರೂ, ಇದು ನಮ್ಮ ತಂದೆ ಲಾಡೆನ್ ಎಂದ ಬಳಿಕ ಅವರನ್ನು ಬದಿಗೆ ತಳ್ಳಿ ಶವ ಎಳೆದೊಯ್ದರು' ಎಂದು ಅಮಲ್ ಹೇಳಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.