ನೌಕರರ ಕೈಗೆ ಕೋಲು ಕೊಟ್ಟು ಕೇಂದ್ರಕ್ಕೆ ಹೊಡೆಸಿದ ರಾಹುಲ್

By Web DeskFirst Published Oct 13, 2018, 10:36 PM IST
Highlights

ಎಚ್ಎಎಲ್ ಕೇವಲ ಕಂಪನಿ ಮಾತ್ರವಲ್ಲ. ಇದು ದೇಶದ ಶಕ್ತಿ. ಸ್ವಾತಂತ್ರ್ಯಾ ನಂತರ ಭಾರತ ಎರಡು ಅದ್ಭುತ ಆಸ್ತಿಗಳನ್ನು ಸೃಷ್ಟಿಸಿತ್ತು. ಐಐಟಿ ಉನ್ನತ ಶಿಕ್ಷಣಕ್ಕೆ ಅದ್ಭುತ ಕೊಡುಗೆ ನೀಡಿದರೆ,ಎಚ್ಎಎಲ್ ಭಾರತದ ವಾಯುಸೇನೆಗೆ ಭೀಮ ಬಲ ತಂದು ಕೊಟ್ಟಿದೆ - ರಾಹುಲ್ ಗಾಂಧಿ

ಬೆಂಗಳೂರು[ಅ.13]: ರಾಹುಲ್ ಗಾಂಧಿ ಇಂದು ಅಕ್ಷರಶಃ ಪ್ರಬುದ್ಧ ರಾಜಕಾರಣಿಗಿರಬೇಕಾದ ಗುಣಗಳನ್ನು ಹೊರಹಾಕಿದರು.

ಕೇಂದ್ರದ ವಿರುದ್ಧ ಎಂದಿನಂತೆ ತಾವು ವಾಗ್ದಾಳಿ ನಡೆಸುವ ಬದಲು, ಎಚ್ಎಲ್ ನೌಕರರ ಕೈಗೆ ಮೈಕ್ ಕೊಟ್ಟು ಅವರ ಸಹಾಯದಿಂದಲೇ ಮೋದಿ ಸರ್ಕಾರದ ವಿರುದ್ಧ ಮಾತಿನ ಬಾಣ ಹೂಡಿದರು. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಐಸಿಸಿ ಅಧ್ಯಕ್ಷ ರಫೇಲ್ ಡೀಲ್ ವಿರುದ್ಧ ಎಚ್ಎಎಲ್ ಅನ್ನೋ ಪ್ರಬಲ ಅಸ್ತ್ರ ಪ್ರಯೋಗಿಸಿದ್ದಾರೆ. ನಿವೃತ್ತ ಸಿಬ್ಬಂದಿಯ ಮೂಲಕವೇ ಎಚ್ಎಎಲ್ ಶಕ್ತಿ ಎಂಥದ್ದು ಅನ್ನುವ ಸತ್ಯವನ್ನ ಮೋದಿ ಸರ್ಕಾರಕ್ಕೆ ತಿಳಿಸಿದರು.

ರಫೇಲ್ ವಿವಾದದ ಹಿನ್ನೆಲೆಯಲ್ಲಿ ಮಿನ್ಸ್ಕ್ ಸ್ಕ್ವೇರ್ ಬಳಿ ಎಚ್ಎಎಲ್ ನಿವೃತ್ತ ನೌಕರರ ಜೊತೆ ಸಂವಾದ ನಡೆಸಿದ ರಾಹುಲ್ ಗಾಂಧಿ, ಎಚ್ಎಎಲ್ ಕೇವಲ ಕಂಪನಿ ಮಾತ್ರವಲ್ಲ. ಇದು ದೇಶದ ಶಕ್ತಿ. ಸ್ವಾತಂತ್ರ್ಯಾ ನಂತರ ಭಾರತ ಎರಡು ಅದ್ಭುತ ಆಸ್ತಿಗಳನ್ನು ಸೃಷ್ಟಿಸಿತ್ತು. ಐಐಟಿ ಉನ್ನತ ಶಿಕ್ಷಣಕ್ಕೆ ಅದ್ಭುತ ಕೊಡುಗೆ ನೀಡಿದರೆ,ಎಚ್ಎಎಲ್ ಭಾರತದ ವಾಯುಸೇನೆಗೆ ಭೀಮ ಬಲ ತಂದು ಕೊಟ್ಟಿದೆ. ಒಂದು ಕಾಲದಲ್ಲಿ ಎಚ್ಎಎಲ್ ಸಾಮರ್ಥ್ಯದ ಬಗ್ಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಮಾಮ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಒಬಾಮ ಅವರು ಹಾಗೆ ಹೇಳಲು ಎಚ್ಎಎಲ್ ನೌಕರರ ಅದ್ಭುತ ಕೊಡುಗೆಗಳೇ ಕಾರಣ. ಆದರೆ ಕೇಂದ್ರ ಮಾತ್ರ ಎಚ್ಎಎಲ್'ಗೆ ಯುದ್ಧ ವಿಮಾನ ತಯಾರಿಸುವ ಸಾಮರ್ಥ್ಯ ಇಲ್ಲ ಎನ್ನುತ್ತಿರುವುದು ಮಾತ್ರ ವಿಷಾದನೀಯ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ನೌಕರರಿಗೆ ಕೇಂದ್ರ ಸರ್ಕಾರದಿಂದ ಅವಮಾನ 
ಸುಖೋಯ್, ತೇಜಸ್ ನಂತಹ ಅದ್ಭುತ ಯುದ್ಧ ವಿಮಾನ ತಯಾರಿಕೆಗಾಗಿ ಎಚ್ಎಎಲ್ ದುಡಿದಿದೆ.  80 ವರ್ಷಗಳ ಕಠಿಣ ಪರಿಶ್ರಮಕ್ಕೆ ಕೇಂದ್ರ ಸರ್ಕಾರ ಅವಮಾನ ಮಾಡಿದೆ. ಕೇಂದ್ರದ ಈ ನಡೆ ರಕ್ಷಣಾ ಕ್ಷೇತ್ರದಲ್ಲಿ ಎಚ್ಎಎಲ್ ಮಾಡಿದ ಅದ್ಭುತ ಕೆಲಸವನ್ನು ಪ್ರಶ್ನಿಸುವಂತೆ ಮಾಡಿದೆ. ಅದಕ್ಕಾಗಿ ಕೇಂದ್ರ ಸರ್ಕಾರದ ಪರವಾಗಿ ನಾನು ನಿಮ್ಮ ಕ್ಷಮೆ ಕೇಳುತ್ತೇನೆ . ಅಲ್ಲದೇ ನಿಮಗಾದ ಅವಮಾನವನ್ನು ನಾವು ಸರಿ ಮಾಡುತ್ತೇವೆ ಎಂದು ವಾಗ್ದಾನ ನೀಡಿದರು.
 

click me!