
- ಸಾಲಮನ್ನಾ ಮಾಡದಿದ್ರೆ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿ
- ನಟ ರಜನಿಕಾಂತ್, ಕಮಲ್ ಕನ್ನಡದ್ರೋಹಿಗಳು, ಅವರ ಸಿನಿಮಾ ಬಿಡುಗಡೆಗೆ ಅವಕಾಶ ನೀಡಲ್ಲ
ಕೊಪ್ಪಳ: ರಾಜ್ಯದ ರೈತರ ಸಾಲಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಾನು ರಾಜ್ಯದ ಜನರ ಮುಲಾಜಿನಲ್ಲಿಲ್ಲ. ಕಾಂಗ್ರೆಸ್‌ನ ಮುಲಾಜಿನಲ್ಲಿದ್ದೇನೆ ಎನುತ್ತಿದ್ದಾರೆ. ಜನರ ಮುಲಾಜಿನಲ್ಲಿಲ್ಲ ಅಂದರೆ ಸಿಎಂ ಏಕೆ ಆದರು. ರೈತರ ಸಾಲಮನ್ನಾ ಮಾಡದಿದ್ದರೆ, ಕೂಡಲೇ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಲಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸವಾಲು ಹಾಕಿದರು.
ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಮತಯಾಚಿಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸಾಲಮನ್ನಾ ವಿಷಯದಲ್ಲಿ ಈ ಮೈತ್ರಿ ಸರ್ಕಾರ ಯಾವುದೇ ನಾಟಕ ಮಾಡಬಾರದು. ಕುಮಾರಸ್ವಾಮಿ ಅವರು ನಾನು ಜನರ ಮುಲಾಜಿನಲ್ಲಿಲ್ಲ ಎನ್ನುವುದಾದರೆ ಸಿಎಂ ಯಾಕಾಗಬೇಕು? ಸಿಎಂ ಸ್ಥಾನ ಬಿಟ್ಟು ಹೋಗಬೇಕು. ಕುಮಾರಸ್ವಾಮಿ ಹಾಗೂ ಅವರ ತಂದೆ ದೇವೇಗೌಡರು ಹಿಂದಿನಿಂದಲೂ ಇದನ್ನೇ ಹೇಳಿಕೊಂಡು ಬಂದಿದ್ದಾರೆ. ರಾಜ್ಯದ ರೈತರ ಪರ ಸರ್ಕಾರ ಕೂಡಲೇ ಪ್ರಾಮಾಣಿಕ ನಿರ್ಧಾರ ತಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಸಮಿಶ್ರ ಸರ್ಕಾರ ರಚಿಸಲು ಅವರಿಗೆ ನಂಬಿಕೆ ಇದೆ. ನಾವಿಬ್ಬರೂ ಒಂದಾಗಿದ್ದೇವೆ ಎನ್ನುತ್ತಾರೆ. ಆದರೆ, ಸಾಲಮನ್ನಾ ವಿಚಾರದಲ್ಲಿ ಏಕೆ ನಂಬಿಕೆ ಬರುತ್ತಿಲ್ಲ. ಹಣಕಾಸು ಖಾತೆಗಾಗಿ ಜೆಡಿಎಸ್-ಕಾಂಗ್ರೆಸ್ ಬೀದಿರಂಪ ಮಾಡುತ್ತಿವೆ. ಇಬ್ಬರೂ ಸೇರಿ ಸಾಲಮನ್ನಾ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ರಾಜಿನಾಮೆ ಕೊಟ್ಟು ಹೊರ ನಡೆಯಲಿ. ಮತ್ತೆ ಚುನಾವಣೆ ನಡೆದರೂ ಚಿಂತೆ ಇಲ್ಲ ಎಂದರು.
ಕಮಲ್, ರಜನಿಕಾಂತ್ ನಾಡದ್ರೋಹಿಗಳು:
ಕಾವೇರಿ ವಿಷಯದಲ್ಲಿ ಸದಾ ತಮಿಳುನಾಡು ಪರ ವಕಾಲತ್ತು ವಹಿಸುವ ತಮಿಳು ಚಿತ್ರ ನಟರಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರು ಕನ್ನಡದ್ರೋಹಿಗಳು. ರಜನಿಕಾಂತ್ ಅವರ ‘ಕಾಲ’ ಸಿನಿಮಾ ಪ್ರದರ್ಶನಕ್ಕೆ ರಾಜ್ಯದಲ್ಲಿ ಅವಕಾಶ ನೀಡುವುದಿಲ್ಲ. ಚಿತ್ರಮಂದಿರದ ಮುಂದೆ ಗಲಾಟೆ ಮಾಡುತ್ತೇವೆ. ರಜನಿ ಹಾಗೂ ಕಮಲ್ ಕಾವೇರಿ ವಿಚಾರದಲ್ಲಿ ತಮಿಳುನಾಡು ಪರ ಇದ್ದಾರೆ. ಇವರ ವಿರುದ್ಧ ಹೋರಾಟ ನಡೆಸುತ್ತೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.