ಜಯನಗರದಲ್ಲಿ ಬಿಜೆಪಿ ಸೋಲಿಗೆ ಪ್ರಮುಖ ಕಾರಣವೇನು..?

Published : Jun 14, 2018, 09:19 AM IST
ಜಯನಗರದಲ್ಲಿ ಬಿಜೆಪಿ ಸೋಲಿಗೆ ಪ್ರಮುಖ ಕಾರಣವೇನು..?

ಸಾರಾಂಶ

ನಗರ ಬಿಜೆಪಿಯ ನಾಯಕರ ನಿರಾಸಕ್ತಿ ಮತ್ತು ಹೊಂದಾಣಿಕೆ ರಾಜಕಾರಣದ ಫಲವಾಗಿ ಜಯನಗರ ವಿಧಾನಸಭಾ ಕ್ಷೇತ್ರ ಅತ್ಯಲ್ಪ ಮತಗಳ ಅಂತರದಿಂದ ಗೆಲುವು ಕೈತಪ್ಪಿ ಹೋಯಿತೆ ಎಂಬ ಚರ್ಚೆ ಇದೀಗ ಪಕ್ಷದ ಪಾಳೆಯದಲ್ಲಿ ಆರಂಭವಾಗಿದೆ.

ಬೆಂಗಳೂರು :  ನಗರ ಬಿಜೆಪಿಯ ನಾಯಕರ ನಿರಾಸಕ್ತಿ ಮತ್ತು ಹೊಂದಾಣಿಕೆ ರಾಜಕಾರಣದ ಫಲವಾಗಿ ಜಯನಗರ ವಿಧಾನಸಭಾ ಕ್ಷೇತ್ರ  ಅತ್ಯಲ್ಪ ಮತಗಳ ಅಂತರದಿಂದ ಗೆಲುವು ಕೈತಪ್ಪಿ ಹೋಯಿತೆ ಎಂಬ ಚರ್ಚೆ ಇದೀಗ ಪಕ್ಷದ ಪಾಳೆಯದಲ್ಲಿ ಆರಂಭವಾಗಿದೆ. ಕೇವಲ 2,899 ಮತಗಳ ಅಂತರದಿಂದ ಬಿಜೆಪಿಯ ಪ್ರಹ್ಲಾದ್ ಬಾಬು ಅವರು ಸೋಲುಂಡಿದ್ದು, ಜಯದ ಮಾಲೆ ಕಾಂಗ್ರೆಸ್ಸಿನ ಸೌಮ್ಯ  ರೆಡ್ಡಿ ಅವರ ಪಾಲಾಗಿದೆ. 

ಹಿಂದೆ ಎರಡು ಬಾರಿ ಶಾಸಕರಾಗಿದ್ದ ಹಾಗೂ ಸಜ್ಜನ ರಾಜಕಾರಣಿ ಎಂದೇ ಹೆಸರು ಗಳಿಸಿದ್ದ ಬಿ.ಎನ್.ವಿಜಯಕುಮಾರ್ ಅವರ ಸಾವಿನ  ನುಕಂಪವನ್ನು  ಮತಗಳನ್ನಾಗಿ ಪರಿವರ್ತಿಸಲು ಪಕ್ಷದ ಮುಖಂಡರು ತಾವು ಮಾಡಬೇಕಾದಷ್ಟು ಪ್ರಯತ್ನ, ರಣತಂತ್ರವನ್ನು ರೂಪಿ ಸಲಿಲ್ಲ ಎಂಬ ಮಾತು ಬಿಜೆಪಿಯಲ್ಲಿ ಬಲವಾಗಿ ಕೇಳಿಬಂದಿದೆ.

ಸಾರ್ವತ್ರಿಕ ಚುನಾವಣೆ ನಂತರ ಪ್ರತ್ಯೇಕವಾಗಿ ನಡೆದಿದ್ದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲೂ ಸೋಲು ಕಂಡಿದ್ದ ಬಿಜೆಪಿಗೆ  ಯನಗರ ಕ್ಷೇತ್ರದಲ್ಲಾದರೂ ಗೆಲುವು ಒಲಿಯಬಹುದು ಎಂಬ ನಿರೀಕ್ಷೆಯಿತ್ತು. ರಾಜರಾಜೇಶ್ವರಿನಗರ ಕ್ಷೇತ್ರಕ್ಕಿಂತ ಜಯನಗರದಲ್ಲಿನ  ಮತದಾರರ ಮನಸ್ಥಿತಿ ಭಿನ್ನ. ಪ್ರಜ್ಞಾವಂತ ಮತದಾರರೇ ಹೆಚ್ಚಾಗಿರುವ ಕ್ಷೇತ್ರವಿದು. ಅಕಾಲಿಕ ನಿಧನ ಹೊಂದಿದ ವಿಜಯಕುಮಾರ್ ಅವರ ಸಹೋದರನಿಗೇ ಟಿಕೆಟ್ ಕೊಟ್ಟಿದ್ದರಿಂದ ಗೆಲುವು ಸುಲಭವಾಗಲಿದೆ ಎಂಬ ಎಣಿಕೆ ಪಕ್ಷದಲ್ಲಿತ್ತು. 

ಆದರೆ, ಬುಧವಾರ ಫಲಿತಾಂಶ ಹೊರಬಿದ್ದ ನಂತರ ನಿರಾಸೆ ಕವಿದಿದೆ. ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ  ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದು ಮತ್ತು ಜೆಡಿಎಸ್ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿರುವುದು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ನೆರವಾಯಿತು ಎಂಬುದಾಗಿ ಬಿಜೆಪಿ ನಾಯಕರು ಇದೀಗ ಬಹಿರಂಗವಾಗಿ ಸಮಜಾಯಿಷಿ ನೀಡುತ್ತಿದ್ದಾರೆ. ಆದರೂ ಸ್ವಯಂಕೃತ ಅಪರಾಧದಿಂದಲೇ ಪಕ್ಷ ಸೋಲು ಕಾಣುವಂತಾಯಿತು ಎಂದು ಕೆಳಹಂತದ ಕಾರ್ಯಕರ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಪಕ್ಷದ ವಿರುದ್ಧ ಬಂಡಾಯ ಸಾರಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಘೋಷಿಸಿದ ಬೈರಸಂದ್ರ ವಾರ್ಡ್ ಸದಸ್ಯ ನಾಗರಾಜ್ ಅವರ  ವಾರ್ಡ್‌ನಲ್ಲಿಯೇ ಇದೀಗ ಕಾಂಗ್ರೆಸ್ ಅಭ್ಯರ್ಥಿ ಹೆಚ್ಚು ಮತಗಳನ್ನು ಗಳಿಸಿದ್ದಾರೆ. ಇದನ್ನು ತಡೆಯಬಹುದಿತ್ತು ಎನ್ನುವುದು ಪಕ್ಷದಲ್ಲಿ ಕೇಳಿಬರುತ್ತಿರುವ ಮಾತು. 

1 ಆರಂಭದಿಂದಲೂ ನಗರ ಬಿಜೆಪಿ ನಾಯಕರಿಗೆ ಜಯನಗರ ಕ್ಷೇತ್ರದ ಬಗ್ಗೆ ಅಷ್ಟೊಂದು ಆಸಕ್ತಿ ಇರಲಿಲ್ಲ. ನಗರದ ಉಸ್ತುವಾರಿ ಹೊತ್ತಿರುವ ಹಿರಿಯ ನಾಯಕರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸೌಮ್ಯರೆಡ್ಡಿ ಅವರ ತಂದೆಯೂ ಆಗಿರುವ ಮಾಜಿ ಸಚಿವ ಹಾಗೂ ಪಕ್ಕದ ಬಿಟಿಎಂ ಬಡಾವಣೆಯ ಶಾಸಕ ರಾಮಲಿಂಗಾರೆಡ್ಡಿ ಅವರೊಂದಿಗೆ ಆತ್ಮೀಯ ವಾದ ರಾಜಕೀಯ ಸಂಬಂಧ ಹೊಂದಿದ್ದರು. ಇದು ಪಕ್ಷದ ವಲಯದಲ್ಲಿ ಜನಜನಿತವಾದದ್ದು. ಇದನ್ನು ಸ್ವತಃ ಆಗ ಅಭ್ಯರ್ಥಿಯಾಗಿದ್ದ ವಿಜಯಕುಮಾರ್ ಅವರೂ ತಮ್ಮ ಆಪ್ತರೊಂದಿಗೆ ಹೇಳಿಕೊಂಡಿದ್ದರು ಎನ್ನಲಾಗಿದೆ.

2 ವಿಜಯಕುಮಾರ್ ಅವರು ಸಂಘ ಪರಿವಾರದ ನಿಷ್ಠಾವಂತ ವ್ಯಕ್ತಿಯಾಗಿದ್ದರು. ಅವರ ಸಹೋದರ ಪ್ರಹ್ಲಾದ್ ಬಾಬು ಕೂಡ ಸಂಘ ಪರಿವಾರದ ಮೂಲದವರೇ. ಅವರನ್ನೇ ಅಭ್ಯರ್ಥಿಯನ್ನಾಗಿಸ ಬೇಕು ಎಂಬ ನಿಲುವನ್ನು ಸಂಘ ಪರಿವಾರದ ಮುಖಂಡರು ಬಿಜೆಪಿ ನಾಯಕರಿಗೆ ತಿಳಿಸಿದ್ದರು.  ಪ್ರಹ್ಲಾದ್ ಬಾಬು ರಾಜಕೀಯಕ್ಕೆ ಹೊಸಬರು. ಇದರಿಂದಾಗಿ ನಗರದ ಬಿಜೆಪಿ ನಾಯಕರು ತಟಸ್ಥ ಧೋರಣೆ ತಳೆದರು. 

3 ವಿಜಯಕುಮಾರ್ ಅಕಾಲಿಕ ನಿಧನದ ನಂತರ ಪಕ್ಷದ ಅಭ್ಯರ್ಥಿಯನ್ನಾಗಿ ಪ್ರಹ್ಲಾದ್ ಬಾಬು ಅವರನ್ನು ಆಯ್ಕೆ ಮಾಡುವ ವೇಳೆ ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು ಭಿನ್ನಮತಕ್ಕೆ ಕಾರಣವಾಯಿತು. ಮನಸ್ಸು ಮಾಡಿದ್ದರೆ ಪಕ್ಷದ ನಗರದ ಹಿರಿಯ ನಾಯಕರು ಈ ಭಿನ್ನಮತವನ್ನು ಆರಂಭದಲ್ಲೇ ಚಿವುಟಬಹುದಾಗಿತ್ತು. ಆದರೆ, ಹಾಗೆ ಮಾಡಲಿಲ್ಲ. ಅದನ್ನು ಬೆಳೆಯಲು ಬಿಟ್ಟರು. ಅದು ಕೂಡ ತಂತ್ರವಿರಬಹುದು. 

4 ಪಕ್ಷದ ಬಿಬಿಎಂಪಿ ಸದಸ್ಯರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದಾಗಲೂ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದ ಮಾಜಿ ಉಪಮುಖ್ಯ ಮಂತ್ರಿ ಆರ್.ಅಶೋಕ್ ಅವರು ಕ್ಯಾರೆ ಎನ್ನಲಿಲ್ಲ. ತಮಗೂ ಮತ್ತು ಕ್ಷೇತ್ರದಲ್ಲಿನ ಬೆಳವಣಿಗೆಗಳಿಗೂ ಸಂಬಂಧವೇ ಇಲ್ಲ ಎಂಬಂತೆಯೆ ಇದ್ದರು.

5 ಕೇಂದ್ರ ಸಚಿವ ಹಾಗೂ ಸ್ಥಳೀಯ ಸಂಸದ ಅನಂತಕುಮಾರ್ ಅವರನ್ನು ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನಾಗಿ ನೇಮಿಸಿದ ನಂತರ ತುಸು ಚಟುವಟಿಕೆಗಳು ಆರಂಭಗೊಂಡವು. ಆಗಲೂ ಅಶೋಕ್ ಅವರು ದೂರವೇ ಉಳಿದಿದ್ದರು. ಬೈರಸಂದ್ರ ವಾರ್ಡ್ ಸದಸ್ಯ ನಾಗರಾಜ್ ಅವರು ಬಹಿರಂಗವಾಗಿಯೇ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಘೋಷಿಸಿದಾಗಲೂ ಅವರನ್ನು ಮನವೊಲಿಸುವ ಪ್ರಯತ್ನ ನಡೆಯಲಿಲ್ಲ.

6 ಮತದಾನಕ್ಕೆ ಒಂದು ವಾರ ಬಾಕಿ ಇದ್ದ ವೇಳೆ ಬಿಜೆಪಿ ಪಾಳೆಯ ಕ್ರಿಯಾಶೀಲಗೊಂಡಿತು. ಆದರೆ, ಅಷ್ಟು ಹೊತ್ತಿಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಮುಗಿಸಿದ್ದರು. ಬಿಜೆಪಿಯ ಕೆಳಹಂತದ ಮುಖಂಡರನ್ನು ಸೆಳೆಯುವಲ್ಲಿ  ಯಶಸ್ವಿಯಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರವಾಸಿಗರ ಸ್ವರ್ಗ.. ಅಸ್ಸಾಂ ರಾಜ್ಯ ಯಾವುದಕ್ಕೆ ಪ್ರಸಿದ್ಧ ನಿಮಗೆ ಗೊತ್ತೇ?
ಬಿಜೆಪಿ ಮಹಾಯುತಿಗೆ ಕ್ಲೀನ್ ಸ್ವೀಪ್ ಗೆಲುವು, ಕೇರಳ ಗೆದ್ದಾಗ ಪ್ರಜಾಪ್ರಭುತ್ವ ಮಹಾರಾಷ್ಟ್ರ ಸೋತಾಗ ಕೊತ ಕೊತ