
ಬೆಂಗಳೂರು : ರಾಜಧಾನಿ ಪೊಲೀಸ್ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಮುಂದಾಗಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ನಗರ ಪೊಲೀಸ್ ಆಯುಕ್ತ ಹುದ್ದೆಯನ್ನು ಡಿಜಿಪಿ ಹುದ್ದೆಗೆ ಉನ್ನತೀಕರಿಸಿ ತಮ್ಮ ಪರಮಾಪ್ತ ಐಪಿಎಸ್ ಅಧಿಕಾರಿ ಸಿ.ಎಚ್.ಕಿಶೋರ್ ಚಂದ್ರ ಅವರನ್ನು ನೇಮಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಮೂಲಕ ಹಲವು ದಿನಗಳಿಂದ ಸರ್ಕಾರದ ಮುಂದೆ ಆಗಾಗ್ಗೆ ಮಂಡನೆಯಾಗುತ್ತಿದ್ದ ಮುಂಬೈನಂತೆ ಬೆಂಗಳೂರು ಪೊಲೀಸ್ ಆಡಳಿತ ವ್ಯವಸ್ಥೆ ಪುನರ್ ರಚನೆ ಪ್ರಸ್ತಾಪಕ್ಕೆ ಮರುಜೀವ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಹಣಕಾಸು ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗಳ ಮಟ್ಟದಲ್ಲಿ ಪ್ರಾಥಮಿಕ ಚರ್ಚೆ ಆಗಿದ್ದು, ಎಲ್ಲಾ ಅಂದುಕೊಂಡಂತಾದರೆ ಈ ತಿಂಗಳಾಂತ್ಯಕ್ಕೆ ಹುದ್ದೆ ಉನ್ನತೀಕರಿಸುವ ವಿಚಾರದ ಕುರಿತು ಸ್ಪಷ್ಟವಾದ ಚಿತ್ರಣ ಸಿಗಲಿದೆ ಎಂದು ರಾಜ್ಯ ಗೃಹ ಇಲಾಖೆಯ ಉನ್ನತ ಮೂಲಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿವೆ.
ಪ್ರಸುತ್ತ ಬೆಂಗಳೂರು ನಗರ ಆಯುಕ್ತ ಹುದ್ದೆಯು ಎಡಿಜಿಪಿ ದರ್ಜೆ ಅಧಿಕಾರಿಗಳಿಗೆ ಮೀಸಲಾಗಿದ್ದು, ಈ ಪದವಿಯನ್ನು ಕಿಶೋರ್ ಚಂದ್ರಗೆ ಕಲ್ಪಿಸುವ ಉದ್ದೇಶ ದಿಂದಲೇ ಡಿಜಿಪಿ ಹುದ್ದೆಗೇರಿಸಲು ಯತ್ನಿಸ ಲಾಗುತ್ತಿದೆ ಎಂಬ ಮಾತೂ ಕೇಳಿಬಂದಿದೆ. ಸದ್ಯ ರಾಜ್ಯ ಪೊಲೀಸ್ ಗೃಹ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ರಾಗಿರುವ ಕಿಶೋರ್ ಚಂದ್ರ, 2019ರ ಮೇ ತಿಂಗಳಲ್ಲಿ ಸೇವೆಯಿಂದ ನಿವೃತ್ತರಾಗಲಿದ್ದಾರೆ.
ಕೃಷ್ಣ ಸರ್ಕಾರದಲ್ಲೂ ಪ್ರಯತ್ನ: ಈ ಹಿಂದೆ ಎಸ್. ಎಂ.ಕೃಷ್ಣ ಸರ್ಕಾರವು ಅಜಯ್ ಕುಮಾರ್ ಸಿಂಗ್ ಅವರಿಗೆ ಕೆಲ ತಿಂಗಳ ಮಟ್ಟಿಗೆ ಆಯುಕ್ತ ಹುದ್ದೆಯನ್ನು ಡಿಜಿಪಿ ಹುದ್ದೆಗೆ ಮೇಲ್ದರ್ಜೆಗೇರಿಸಿತ್ತು. ನಂತರ ಎಡಿಜಿಪಿ ಹುದ್ದೆ ಸ್ಥಾನಮಾನ ಹೊಂದಿತ್ತು. ಆಮೇಲೂ ಕೆಲವು ಬಾರಿ ಡಿಜಿಪಿ ಹುದ್ದೆಗೆ ಉನ್ನತೀಕರಿಸುವ ಪ್ರಯತ್ನ ನಡೆದರೂ ಫಲಪ್ರದವಾಗಿರಲಿಲ್ಲ.
ಆದರೆ ಈ ಬಾರಿ ರಾಜ್ಯದ ಪ್ರಬಲ ಸಮುದಾಯದ ಲಾಬಿ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಒಲವು ತೋರಿರುವುದು ಉನ್ನತೀಕರಿಸುವ ಯತ್ನ ಕೈಗೂಡಬಹುದು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.