ಹಂಚಿಕೆಯಾದ ಖಾತೆ ವಾಪಸ್

First Published Jun 14, 2018, 8:47 AM IST
Highlights

ಸಚಿವ ಜಿ.ಟಿ.ದೇವೇಗೌಡ ಅವರಿಗೆ ಬೇರೊಂದು ಖಾತೆ ನೀಡುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಉನ್ನತ ಶಿಕ್ಷಣ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಬೆಂಗಳೂರು :  ಸಚಿವ ಜಿ.ಟಿ.ದೇವೇಗೌಡ ಅವರಿಗೆ ಬೇರೊಂದು ಖಾತೆ ನೀಡುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಉನ್ನತ ಶಿಕ್ಷಣ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಬುಧವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಎಂಜಿನಿಯರಿಂಗ್‌ ಶುಲ್ಕ ಹೆಚ್ಚಳ ಕುರಿತಂತೆ ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಸಭೆ ನಡೆಯಿತು. ಈ ಸಭೆಗೆ ಹಾಲಿ ಉನ್ನತ ಶಿಕ್ಷಣ ಸಚಿವರಾಗಿರುವ ಜಿ.ಟಿ.ದೇವೇಗೌಡ ಗೈರು ಹಾಜರಾಗಿದ್ದರು.

ಈ ಕುರಿತು ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಯಾರೊಬ್ಬರನ್ನೂ ಸದ್ಯ ಇಲಾಖೆಯಲ್ಲಿ ವರ್ಗಾವಣೆ ಮಾಡುವುದಿಲ್ಲ. ಮುಖ್ಯಮಂತ್ರಿಯಾಗಿರುವ ತನಕ ಉನ್ನತ ಶಿಕ್ಷಣ ಖಾತೆ ನನ್ನ ಬಳಿಯೇ ಉಳಿಯಲಿದೆ ಎಂದು ಸ್ಪಷ್ಟಪಡಿಸಿದರು.

ಇದಕ್ಕೂ ಮೊದಲು, ಮುಂದಿನ ಸಚಿವ ಸಂಪುಟ ವಿಸ್ತರಣೆವರೆಗೂ ಉನ್ನತ ಶಿಕ್ಷಣ ಖಾತೆ ನನ್ನ ಬಳಿಯೇ ಇರಲಿದೆ. ಈ ಬಗ್ಗೆ ವಾರದೊಳಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಆಗ, ಎಷ್ಟುದಿನಗಳಲ್ಲಿ ಸಚಿವರನ್ನು ನೇಮಕ ಮಾಡಲಾಗುವುದು ಎಂಬ ಪ್ರಶ್ನೆಗೆ ನನ್ನ ಬಳಿಯೇ ಖಾತೆಯನ್ನು ಉಳಿಸಿಕೊಳ್ಳಲಾಗುವುದು ಎಂದು ಹೇಳಿದರು.

ಖಾತೆಗಳ ಹಂಚಿಕೆ ನಂತರ ಜಿ.ಟಿ.ದೇವೇಗೌಡ ಅವರು ತಮಗೆ ಜನರೊಂದಿಗೆ ನೇರ ಸಂಪರ್ಕ ಇರುವ ಖಾತೆ ಬೇಕು ಎಂಬ ಬೇಡಿಕೆ ಸಲ್ಲಿಸಿದ್ದರು. ಹೀಗಾಗಿ, ದೇವೇಗೌಡರಿಗೆ ಶೀಘ್ರದಲ್ಲಿಯೇ ಬೇರೊಂದು ಖಾತೆಯ ಹೊಣೆ ವಹಿಸುವ ಸಾಧ್ಯತೆಯಿದೆ. ಈ ಬಗ್ಗೆ ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದ್ದರು.

click me!