ಯಾರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ?

Published : May 07, 2019, 07:20 AM IST
ಯಾರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ?

ಸಾರಾಂಶ

ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟದ ಬಗ್ಗೆ ಇದೀಗ ಎಲ್ಲೆಡೆ ಗಂಭೀರ ಚರ್ಚೆ ಆರಂಭವಾಗಿದೆ.  ರಾಷ್ಟ್ರೀಯ ಘಟಕದ ವಿಚಾರಧಾರೆಯೊಂದಿಗೆ ಹೊಂದಾಣಿಕೆಯಿಂದ ಹೆಜ್ಜೆ ಹಾಕುವ ಹಾಗೂ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಸಾಮರ್ಥ್ಯವುಳ್ಳವರಿಗೆ ಆದ್ಯತೆ ನೀಡುವ ಚಿಂತನೆ ನಡೆದಿದೆ.

ಬೆಂಗಳೂರು :  ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯ ಬಿಜೆಪಿ ಅಧ್ಯಕ್ಷ ಹುದ್ದೆಗೆ ಯಾರು ಬರಲಿದ್ದಾರೆ ಎಂಬ ಚರ್ಚೆ ತೆರೆಮರೆಯಲ್ಲಿ ಜೋರಾಗಿಯೇ ಆರಂಭವಾಗಿದೆ. ಜಾತಿ ಮತ್ತು ಪ್ರಾದೇಶಿಕ ಸಮೀಕರಣಕ್ಕೆ ಹೆಚ್ಚು ಒತ್ತು ನೀಡುವ ಬದಲು ರಾಷ್ಟ್ರೀಯ ಘಟಕದ ವಿಚಾರಧಾರೆಯೊಂದಿಗೆ ಹೊಂದಾಣಿಕೆಯಿಂದ ಹೆಜ್ಜೆ ಹಾಕುವ ಹಾಗೂ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಸಾಮರ್ಥ್ಯವುಳ್ಳವರಿಗೆ ಆದ್ಯತೆ ನೀಡುವ ಚಿಂತನೆ ನಡೆದಿದೆ.

ಇತ್ತೀಚಿನ ಕೆಲ ವರ್ಷಗಳಲ್ಲಿ ರಾಜ್ಯ ಬಿಜೆಪಿ ಮತ್ತು ಸಂಘ ಪರಿವಾರದ ನಡುವೆ ಮೊದಲಿನ ನಂಟು ಇರಲಿಲ್ಲ. ಕಳೆದ ವರ್ಷ ಈ ಬಗ್ಗೆ ಖುದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೂ ಪ್ರಸ್ತಾಪಿಸಿದ್ದರು. ಅವರು ಬೆಂಗಳೂರಿಗೆ ಭೇಟಿ ನೀಡಿದ ವೇಳೆ ಸಂಘ ಪರಿವಾರದ ಮುಖಂಡರು ಹಾಗೂ ರಾಜ್ಯ ಬಿಜೆಪಿ ನಾಯಕರ ನಡುವೆ ಇರುವ ಕಂದಕವನ್ನು ಕಡಿಮೆಗೊಳಿಸುವ ಪ್ರಯತ್ನ ಮಾಡಿದ್ದರು. ಹೀಗಾಗಿ, ಈಗ ಹೊಸ ಅಧ್ಯಕ್ಷರಾಗುವವರು ಸಂಘ ಪರಿವಾರಕ್ಕೂ ಸಮ್ಮತವಾಗಿರಬೇಕು ಎಂಬುದು ವರಿಷ್ಠರ ನಿಲುವಾಗಿದೆ.

ಜೊತೆಗೆ ರಾಜ್ಯ ಬಿಜೆಪಿಯ ಜೋಡೆತ್ತುಗಳು ಎಂದೇ ಕರೆಸಿಕೊಳ್ಳುತ್ತಿದ್ದ ಯಡಿಯೂರಪ್ಪ ಮತ್ತು ಅನಂತಕುಮಾರ್‌ ಪೈಕಿ ಅನಂತಕುಮಾರ್‌ ಅವರು ಈಗ ಇಲ್ಲ. ಯಡಿಯೂರಪ್ಪ ಅವರು ವಯಸ್ಸಿನ ಕಾರಣಕ್ಕಾಗಿ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗಾಗಿ ಎಲ್ಲೆಡೆ ಓಡಾಡಲು ಸಾಧ್ಯವಾಗಲಿಕ್ಕಿಲ್ಲ. ಹೀಗಿರುವಾಗ ಭವಿಷ್ಯದ ದೃಷ್ಟಿಯಿಂದ ಎರಡನೇ ಹಂತದ ನಾಯಕರನ್ನು ಮುಂದೆ ಕರೆತಂದು ಪಕ್ಷ ಮುನ್ನಡೆಸುವ ಜವಾಬ್ದಾರಿ ನೀಡಬೇಕು ಎಂಬ ಆಲೋಚನೆ ಪಕ್ಷ ಹಾಗೂ ಸಂಘ ಪರಿವಾರದ ವರಿಷ್ಠರಲ್ಲಿ ಮೂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸದ್ಯಕ್ಕೆ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗುವವರ ರೇಸ್‌ನಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ ಲಿಂಬಾವಳಿ, ಸಿ.ಟಿ.ರವಿ, ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ಇವರನ್ನು ಹೊರತುಪಡಿಸಿದರೆ ಬೇರೆಯವರ ಹೆಸರುಗಳು ಪ್ರಸ್ತಾಪವಾಗುತ್ತಿಲ್ಲ. ಕೊನೆಯ ಕ್ಷಣದಲ್ಲಿ ಅಚ್ಚರಿಯ ಹೆಸರು ತೇಲಿಬರುವ ಸಾಧ್ಯತೆ ಇರಬಹುದಾದರೂ ಪ್ರಸಕ್ತ ಸನ್ನಿವೇಶದಲ್ಲಿ ಅಂಥ ಯಾವುದೇ ಸಂಭವ ಇಲ್ಲ ಎನ್ನಲಾಗುತ್ತಿದೆ.

ಈ ಮೂವರು ನಾಯಕರೂ ಪಕ್ಷ ಸಂಘಟನೆಯಲ್ಲಿ ತಮ್ಮದೇ ಆದ ಹೆಸರು ಮತ್ತು ಪ್ರಭಾವವನ್ನು ಹೊಂದಿದವರು. ಆದರೆ, ಈ ಪೈಕಿ ಸಿ.ಟಿ.ರವಿ ಅವರ ಪರವಾಗಿ ಸಂಘ ಪರಿವಾರ ತುಸು ಹೆಚ್ಚಿನ ಒಲವು ಮತ್ತು ನಿರೀಕ್ಷೆ ಹೊಂದಿದೆ ಎಂದು ತಿಳಿದುಬಂದಿದೆ.

ಇದುವರೆಗೆ ಪಕ್ಷದ ಪಾಳೆಯದಲ್ಲಿ ರಾಜ್ಯಾಧ್ಯಕ್ಷರ ಆಯ್ಕೆ ಬಗ್ಗೆ ಗಂಭೀರವಾದ ಚರ್ಚೆ ಅಥವಾ ಪ್ರಯತ್ನ ನಡೆದಿಲ್ಲ. ತರಾತುರಿಯಲ್ಲಿ ನೂತನ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆಯೂ ಪಕ್ಷಕ್ಕಿಲ್ಲ. ಮೊದಲು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಬೇಕು. ನಂತರ ಕೇಂದ್ರ ಸರ್ಕಾರ ರಚನೆಯ ಕಸರತ್ತು ಮುಗಿಯಬೇಕು. ಆನಂತರ ಪಕ್ಷದ ಭವಿಷ್ಯದ ದೃಷ್ಟಿಯಿಂದ ಎಲ್ಲ ಸಾಧಕ ಬಾಧಕಗಳನ್ನು ಪರಿಶೀಲಿಸಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರ್ಹರನ್ನು ಆಯ್ಕೆ ಮಾಡಲಾಗುವುದು ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.

ಯಡಿಯೂರಪ್ಪ ಮಾತಿಗೆ ಮನ್ನಣೆ

ನೂತನ ರಾಜ್ಯಾಧ್ಯಕ್ಷರ ಆಯ್ಕೆಯಲ್ಲಿ ಹಾಲಿ ಅಧ್ಯಕ್ಷ ಯಡಿಯೂರಪ್ಪ ಅವರ ಮಾತಿಗೂ ಹೆಚ್ಚಿನ ಮನ್ನಣೆ ನೀಡಲಾಗುತ್ತದೆ. ಆದರೆ, ಅವರು ಇಂಥವರೇ ಆಗಬೇಕು ಎಂದು ಪಟ್ಟು ಹಿಡಿಯುವ ಸಾಧ್ಯತೆ ಕಡಿಮೆ. ಅವರು ಹೇಗಿದ್ದರೂ ವಿಧಾನಸಭೆಯ ಪ್ರತಿಪಕ್ಷದ ನಾಯಕನ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ. ಒಂದು ವೇಳೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಂಡು ಪರ್ಯಾಯ ಸರ್ಕಾರ ರಚನೆ ಅವಕಾಶ ಬಂದೊದಗಿದಲ್ಲಿ ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡುವ ಸಂಭವ ಹೆಚ್ಚಾಗಿದೆ. ಹೀಗಿರುವಾಗ ಯಡಿಯೂರಪ್ಪ ಅವರು ಇಂಥವರನ್ನೇ ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಿ ಎಂದು ಪಟ್ಟು ಹಿಡಿಯುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!