ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗಾಗಿ ಪಕ್ಷದ ಹಲವು ಹಿರಿಯ ನಾಯಕರ ಕಣ್ಣು ಬಿದ್ದಿದ್ದು, ಪಟ್ಟಕ್ಕಾಗಿ ಸಾಕಷ್ಟು ಕಸರತ್ತು ಆರಂಭವಾಗಿದೆ. ಹಾಲಿ ಅಧ್ಯಕ್ಷರಾಗಿರುವ ಬಿ.ಎಸ್.ಯಡಿಯೂರಪ್ಪ ಅವರ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಅಧ್ಯಕ್ಷ ಗಾದಿಗೆ ಸದ್ದಿಲ್ಲದೇ ಹಲವರು ಪೈಪೋಟಿ ನಡೆಸಿದ್ದು, ರಾಜ್ಯಾಧ್ಯಕ್ಷ ಸೀಟಿಗೆ ಬಹಿರಂಗವಾಗಿ ಒಂದು ಟವೆಲ್ ಬಿದ್ದಿದೆ.
ಕಲಬುರಗಿ, (ಮೇ.06): ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮತದಾನ ಮುಗಿದ ಬೆನ್ನಲ್ಲೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ.
ಈ ನಡುವೆ ಕರ್ನಾಟಕ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೇರಲು ರೆಡಿ ಎಂದು ಮಾಜಿ ಕೇಂದ್ರ ಸಚಿವ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೈ ಎತ್ತಿದ್ದಾರೆ.
ಸೋಮವಾರ ಕಲಬುರಗಿಯಲ್ಲಿ ಮಾತನಾಡಿದ ಅವರು, ಮುಂದಿನ ಅವಧಿಯ ಬಿಜೆಪಿ ರಾಜ್ಯಾಧ್ಯಕ್ಷರು ಉತ್ತರ ಕರ್ನಾಟಕದವರಾಗಬೇಕು ಎಂಬ ಬೇಡಿಕೆ ಇದೆ. ಹೀಗಾಗಿ ಉತ್ತರ ಕರ್ನಾಟಕಕ್ಕೆ ಬಿಜೆಪಿ ಅಧ್ಯಕ್ಷ ಸ್ಥಾನದ ಆದ್ಯತೆ ನೀಡುವ ವಿಶ್ವಾಸವಿದ್ದು, ನಾನು ಕೂಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಹೇಳಿದರು.
ಸಧ್ಯ ಬಿಜೆಪಿ ಹೈಕಮಾಂಡ್ ಲೋಕಸಭೆ ಚುನಾವಣೆಯಲ್ಲಿ ಮಗ್ನವಾಗಿದ್ದು, ಫಲಿತಾಂಶ ಹೊರ ಬಂದ ಬಳಿಕ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುವ ಸಾಧ್ಯತೆಗಳಿವೆ.
ಲೋಕಸಭಾ ಫಲಿತಾಂಶದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರು ಬದಲಾಗುತ್ತಾರೆ ಎನ್ನುವ ಮಾತುಗಳು ಪಕ್ಷದ ವಲಯದಲ್ಲಿ ಹರಿದಾಡುತ್ತಿದೆ. ಇದ್ರಿಂದ ಅಧ್ಯಕ್ಷ ಸ್ಥಾನಕ್ಕಾಗಿ ಆಕಾಂಕ್ಷಿಗಳು ಸಹ ಒಳಗೊಳಗೆ ಸದ್ದಿಲ್ಲದೇ ಲಾಬಿ ನಡೆಸಿದ್ದಾರೆ.
ಆದ್ರೆ ಯಾರೂ ಸಹ ಬಹಿರಂಗವಾಗಿ ಹೇಳಿಕೆ ನೀಡಲು ತಯಾರಿಲ್ಲ. ಆದ್ರೆ, ಇದೀಗ ಬಸವರಾಜ್ ಪಾಟೀಲ್ ಯತ್ನಾಳ್ ನಾನು ಆಕಾಂಕ್ಷಿ ಎಂದು ಹೇಳಿರುವುದು ಭಾರೀ ಕುತೂಹಲ ಕಾರಣವಾಗಿದೆ.