ಉ.ಪ್ರ. ವಿಧಾನಸಭೆಯಲ್ಲಿ ಪತ್ತೆಯಾದ ವೈಟ್ ಪೌಡರ್ ವಿನಾಶಕಾರಿ ಸ್ಫೋಟಕ: ಪರೀಕ್ಷೆಯಿಂದ ಬಯಲು

By Suvarna Web DeskFirst Published Jul 14, 2017, 1:39 PM IST
Highlights

ಪೆಂಟಾ ಎರಿಥ್ರಿಟೋಲ್ ಟೆಟ್ರಾನೈಟ್ರೇಟ್ ಸಮ್ಮಿಶ್ರಣವು ಶಕ್ತಿಶಾಲಿ ಸ್ಫೋಟಕ ವಸ್ತುವಾಗಿದೆ. ನೂರು ಗ್ರಾಮ್'ನಷ್ಟು ಈ ಪುಡಿಯು ಒಂದಿಡೀ ಕಾರನ್ನು ಚೂರುಚೂರಾಗಿಸುವಷ್ಟು ಶಕ್ತಿಶಾಲಿಯಾಗಿರುತ್ತದೆ. ಸೆಮ್'ಟೆಕ್ಸ್ ಅಥವಾ ಪ್ಲಾಸ್ಟಿಕ್ ಬಾಂಬ್ ತಯಾರಿಕೆಯಲ್ಲೂ ಈ ಪಿಇಟಿಎನ್ ಅನ್ನು ಬಳಸಲಾಗುತ್ತದೆ.

ಲಕ್ನೋ(ಜುಲೈ 14): ಉತ್ತರ ಪ್ರದೇಶದ ಅಸೆಂಬ್ಲಿಯಲ್ಲಿ ಮೊನ್ನೆ ಸಿಕ್ಕಿದ್ದ ವೈಟ್ ಪೌಡರ್ ಅಪಾಯಕಾರಿ ಸ್ಫೋಟಕ ಎಂಬುದು ಪರೀಕ್ಷೆಯಿಂದ ಗೊತ್ತಾಗಿದೆ. ಈ ಬಿಳಿ ಪುಡಿಯು ಅಂತಿಂಥದ್ದಲ್ಲ, ಪೆಂಟಾಎರಿತ್ರೈಟಾಲ್ ಟೆಟ್ರಾನೈಟ್ರೇಟ್(ಪಿಇಟಿಎನ್) ಎಂಬ ಪ್ರಬಲ ರಾಸಾಯನಿಕ ಎನ್ನಲಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಎನ್'ಐಎಯಿಂದ ತನಿಖೆ ನಡೆಸಲು ಮುಂದಾಗಿದ್ದಾರೆ.

ಅಧಿವೇಶನದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮೊನ್ನೆ ಬುಧವಾರ ಶ್ವಾನ ಪಡೆಯಿಂದ ವಿಧಾನಸಭೆಯ ತಪಾಸಣೆ ನಡೆಸಿದಾಗ ವಿಪಕ್ಷ ನಾಯಕ ರಾಮ್ ಗೋವಿಂದ್ ಚೌಧರಿಯವರ ಸೀಟಿನ ಬಳಿ 60 ಗ್ರಾಮ್'ನಷ್ಟು ವೈಟ್ ಪೌಡರ್ ಪತ್ತೆಯಾಗಿತ್ತು. ಆ ಬಳಿಕ ಅದನ್ನು ಫೋರೆನ್ಸಿಕ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದೀಗ ಅದು ಅಪಾಯಕಾರಿ ಸ್ಫೋಟಕ ಎಂಬುದು ತಿಳಿದುಬಂದಿದೆ.

ಏನಿದು ಪಿಇಟಿಎನ್?
ಪೆಂಟಾ ಎರಿಥ್ರಿಟೋಲ್ ಟೆಟ್ರಾನೈಟ್ರೇಟ್ ಸಮ್ಮಿಶ್ರಣವು ಶಕ್ತಿಶಾಲಿ ಸ್ಫೋಟಕ ವಸ್ತುವಾಗಿದೆ. ನೂರು ಗ್ರಾಮ್'ನಷ್ಟು ಈ ಪುಡಿಯು ಒಂದಿಡೀ ಕಾರನ್ನು ಚೂರುಚೂರಾಗಿಸುವಷ್ಟು ಶಕ್ತಿಶಾಲಿಯಾಗಿರುತ್ತದೆ. ಸೆಮ್'ಟೆಕ್ಸ್ ಅಥವಾ ಪ್ಲಾಸ್ಟಿಕ್ ಬಾಂಬ್ ತಯಾರಿಕೆಯಲ್ಲೂ ಈ ಪಿಇಟಿಎನ್ ಅನ್ನು ಬಳಸಲಾಗುತ್ತದೆ. ಈ ರಾಸಾಯನಿಕವನ್ನು ಕಣ್ತಪ್ಪಿಸಿ ಸಾಗಿಸುವುದು ಸುಲಭ. ಬಹುತೇಕ ಬಣ್ಣರಹಿತವಾಗಿರುವ ಇವು ಅಷ್ಟು ಸುಲಭಕ್ಕೆ ಬರಿಗಣ್ಣಿಗೆ ಕಾಣುವುದಿಲ್ಲ. ಮೆಟಲ್ ಡಿಟೆಕ್ಟರ್'ಗಳಲ್ಲೂ ಇವು ಪತ್ತೆಯಾಗುವುದಿಲ್ಲ.

ವಿಧಾನಸಭೆ ಸ್ಫೋಟಿಸುತ್ತೇನೆಂದವ ಅರೆಸ್ಟ್:
ಲಕ್ನೋನ ಎಡಿಜಿಯವರಿಗೆ ಫೋನ್ ಮಾಡಿ, ಉ.ಪ್ರ. ವಿಧಾನಸಭೆಯನ್ನು ಆಗಸ್ಟ್ 15ರಂದು ಸ್ಫೋಟಿಸುತ್ತೇನೆಂದು ಬೆದರಿಕೆ ಹಾಕಿದ ಫರ್ಹಾನ್ ಅಹ್ಮದ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಧಾನಸಭೆಯಲ್ಲಿ ಪತ್ತೆಯಾದ ಸ್ಫೋಟಕ ಪುಡಿಗೂ ಈತನ ಬೆದರಿಕೆ ಕರೆಗೂ ಏನಾದರೂ ಸಂಬಂಧ ಇದೆಯಾ ಎಂಬುದು ವಿಚಾರಣೆಯಿಂದ ಗೊತ್ತಾಗಬೇಕಿದೆ.

ಇದೇ ವೇಳೆ, ಈ ಘಟನೆಯ ಬಗ್ಗೆ ವಿಪಕ್ಷ ಮುಖಂಡರು ಕಂಗಾಲಾಗಿದ್ದಾರೆ. ಸ್ಫೋಟಕ ಪುಡಿಯು ವಿಧಾನಸಭೆಗೆ ಹೇಗೆ ಬಂತು ಎಂದು ಪ್ರಶ್ನಿಸಿರುವ ಸಮಾಜವಾದಿ ಪಕ್ಷದ ಮುಖಂಡ ರಾಜೇಂದ್ರ ಚೌಧರಿ, "ವಿಧಾನಸಭೆಯೇ ಸುರಕ್ಷಿತವಿಲ್ಲವೆಂದರೆ ರಾಜ್ಯದ ಬೇರೆ ಕಡೆ ಪರಿಸ್ಥಿತಿ ಹೇಗಿರಬಹುದು?" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

click me!