
ನವದೆಹಲಿ: ಇತ್ತೀಚೆಗೆ ಹಳೆಯ ಆಭರಣ ನಾಪತ್ತೆ ವಿವಾದದಲ್ಲಿ ಸಿಲುಕಿದ್ದ ತಿರುಪತಿ ತಿರುಮಲ ದೇವಸ್ಥಾನ ಸಮಿತಿಗೆ (ಟಿಟಿಡಿ) ಈಗ ಮತ್ತೊಂದು ಸವಾಲು ಎದುರಾಗಿದೆ. 16ನೇ ಶತಮಾನದ ವಿಜಯನಗರದ ಅರಸ ಕೃಷ್ಣದೇವರಾಯ ನೀಡಿದ ಆಭರಣಗಳು ಎಲ್ಲಿವೆ ಎಂದು ಕೇಂದ್ರೀಯ ಮಾಹಿತಿ ಆಯೋಗವು (ಸಿಐಸಿ) ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎಎಸ್‌ಐ), ಕೇಂದ್ರ ಸಾಂಸ್ಕೃತಿಕ ಸಚಿವಾಲಯ, ಆಂಧ್ರಪ್ರದೇಶ ಸರ್ಕಾರ ಹಾಗೂ ಟಿಟಿಡಿಗೆ ಪ್ರಶ್ನೆ ಮಾಡಿದೆ.
ತಿರುಪತಿ ತಿರುಮಲ ದೇವಸ್ಥಾನವನ್ನು ವಿಶ್ವ ಪರಂಪರೆ ಸ್ಮಾರಕಗಳು ಎಂದು ಘೋಷಿಸುವ ನಿಟ್ಟಿನಲ್ಲಿ ಪ್ರಧಾನಿ ಕಚೇರಿ ಯಾವ ಕ್ರಮ ಜರುಗಿಸಿದೆ ಎಂಬುದನ್ನು ಅರಿಯಲು ಬಿಕೆಆರ್‌ಎಸ್ ಅಯ್ಯಂಗಾರ್ ಎಂಬುವರು ಕೇಂದ್ರೀಯ ಮಾಹಿತಿ ಆಯೋಗದ ಮೊರೆ ಹೋಗಿದ್ದರು. ಅಲ್ಲದೆ, ಕೃಷ್ಣ ದೇವರಾಯ ನೀಡಿದ ಆಭರಣಗಳ ರಕ್ಷಣೆ ವಿಚಾರದಲ್ಲಿ ಟಿಟಿಡಿ ತೃಪ್ತಿಕರ ಉತ್ತರ ನೀಡಿಲ್ಲ ಎಂದೂ ದೂರು ಸಲ್ಲಿಸಿದ್ದರು.
ಇದರ ವಿಚಾರಣೆ ನಡೆಸಿದ ಮುಖ್ಯ ಮಾಹಿತಿ ಆಯುಕ್ತ ಶ್ರೀಧರ ಆಚಾರ್ಯುಲು, ತಿರುಮಲ ದೇವಸ್ಥಾನವನ್ನು ರಾಷ್ಟ್ರೀಯ ಹಾಗೂ ಪರಂಪರಾ ಸ್ಮಾರಕವನ್ನಾಗಿ ಮಾಡಲು ಕೈಗೊಂಡ ಕ್ರಮಗಳನ್ನು ಬಹಿರಂಗ ಮಾಡುವಂತೆ ಪ್ರಧಾನಿ ಕಚೇರಿಗೆ ಸೂಚಿಸಿದೆ. ಅಲ್ಲದೆ, ಕೃಷ್ಣದೇವರಾಯ ನೀಡಿದ ಆಭರಣ ಎಲ್ಲಿದೆ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಿದೆ.
16ನೇ ಶತಮಾನದಲ್ಲಿ ಕೃಷ್ಣದೇವರಾಯನು ತಿರುಪತಿ ದೇವಸ್ಥಾನಕ್ಕೆ ಆಭರಣಗಳನ್ನು ನೀಡಿದ ಎಂದು ದೇವಾಲಯದಲ್ಲಿನ ಕಲ್ಲಿನ ಕೆತ್ತನೆಗಳ ಮೇಲೆ ಇದೆ. ಹಾಗಿದ್ದಲ್ಲಿ ಕೃಷ್ಣದೇವರಾಯ ನೀಡಿದ್ದ ಆಭರಣ ಯಾವುವು ಎಂದು ಅಯ್ಯಂಗಾರ್ ಅವರು ಟಿಟಿಡಿಗೆ ಮಾಹಿತಿ ಹಕ್ಕು ಅಡಿ ಅರ್ಜಿ ಸಲ್ಲಿಸಿದ್ದರು. ಆದರೆ, 1952ಕ್ಕಿಂತ ಮುಂಚೆ ದೇಗುಲಕ್ಕೆ ಕಾಣಿಕೆಯಾಗಿ ಬಂದ ಆಭರಣಗಳ ಬಗ್ಗೆ ನೋಂದಣಿ ಪುಸ್ತಕ ಇಲ್ಲ ಎಂದು ಟಿಡಿಡಿ ಉತ್ತರಿಸಿತ್ತು. ಅಲ್ಲದೆ, ದೇಗುಲದಲ್ಲಿ ಇರುವ ಆಭರಣಗಳು ಯಾವ ರಾಜರಿಂದ ಕಾಣಿಕೆಯಾಗಿ ಬಂದಿವೆ ಎಂಬುದನ್ನು ಅರಿಯಲು ಪುರಾತತ್ವ ಇಲಾಖೆಯ ತಜ್ಞರ ಸಮಿತಿ ರಚಿಸಿತ್ತು.
ಆದರೆ, ತಜ್ಞರು ದೇವಾಲಯದ ಕಂಬದ ಮೇಲಿನ ಕೆತ್ತನೆಗಳ ಮೇಲಿನ ಆಭರಣಗಳ ಚಿತ್ರಗಳನ್ನು, ಲಭ್ಯ ಆಭರಣಗಳೊಂದಿಗೆ ತಾಳೆ ಹಾಕಿ ನೋಡಿದಾಗ, ಅವು ಕೃಷ್ಣದೇವರಾಯ ನೀಡಿದ ಆಭರಣ ಎಂದು ಸಾಬೀತಾಗಲಿಲ್ಲ. ಹೀಗಾಗಿ ಈ ಆಭರಣ ಕಳವಾಗಿರಬಹುದು ಅಥವಾ ಇಲ್ಲದೇ ಇರಬಹುದು ಅಥವಾ ಮೂಲಸ್ವರೂಪ ಕಳೆದುಕೊಂಡಿರಬಹುದು ಎಂದು ಪುರಾತತ್ವ ಇಲಾಖೆ ತಿಳಿಸಿತ್ತು.
ಈ ಹಿನ್ನೆಲೆಯಲ್ಲಿ ವಿಚಾರಣೆ ವೇಳೆ ಗರಂ ಆದ ಮುಖ್ಯ ಮಾಹಿತಿ ಆಯುಕ್ತ ಆಭರಣಗಳಿಗೆ ಸಂಬಂಧಿಸಿದಂತೆ ರಚಿಸಲಾದ ತಜ್ಞರ ಸಮಿತಿ ನೀಡಿದ ವರದಿ ಮೇಲೆ ಟಿಟಿಡಿ ಏಕೆ ಕ್ರಮ ಕೈಗೊಂಡ ವರದಿ ಹೊರತಂದಿಲ್ಲ? ಶ್ರೀಕೃಷ್ಣದೇವರಾಯ ನೀಡಿದ ಆಭರಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.