ಕೇರಳ ಪ್ರವಾಹಕ್ಕೆ ಮಹಾತ್ಮ ಗಾಂಧೀಜಿ 6000 ರು. ದೇಣಿಗೆ!

By Web DeskFirst Published Aug 27, 2018, 12:52 PM IST
Highlights

ಕೇರಳವು 1924ರಲ್ಲಿಯೂ ಕೂಡ ಭೀಕರ ಪ್ರವಾಃಕ್ಕೆ ತುತ್ತಾಗಿತ್ತು. ಈ ವೇಳೆ ಮಹಾತ್ಮ ಗಾಂಧೀಜಿ ಅವರು 6000 ರು. ದೇಣಿಗೆಯಾಗಿ ನೀಡಿದ್ದರು. ದೇಣಿಗೆ ಸಂಗ್ರಹ ಮಾಡಿ ನೆರವಾಗಿದ್ದರು. ಇದೀಗ ಮತ್ತೆ ಕೇರಳವು ಅಂತಹದ್ದೇ ರೀತಿಯ ಪ್ರವಾಹಕ್ಕೆ ತುತ್ತಾಗಿದೆ. 

ತಿರುವನಂತಪುರಂ: ಹಾಲಿ ಭೀಕರ ಮಳೆ, ಪ್ರವಾಹದಿಂದ ತತ್ತರಿಸಿರುವ ಕೇರಳದಲ್ಲಿ 1924 ರಲ್ಲೂ ಇಂಥದ್ದೇ ದುರ್ಘಟನೆ ಸಂಭವಿಸಿತ್ತು. ಅಂದು ಮಹಾತ್ಮ ಗಾಂಧೀಜಿಯವರು 6000 ರು. ದೇಣಿಗೆ ಸಂಗ್ರಹಿಸಿ ಸಹಾಯ ಮಾಡಿದ್ದರು ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ. 

ಮಲೆಯಾಳಂ ಕ್ಯಾಲೆಂಡರ್ ‘ಕೊಲ್ಲ ವರ್ಷಂ 1099 ’ರಲ್ಲಿ ಇಂತಹುದೇ ಪ್ರವಾಹ ಸಂಭವಿಸಿದ್ದುದರಿಂದ ಇದನ್ನು ‘99ರ ಭೀಕರ ಪ್ರವಾಹ’ ಎಂದೇ ಕರೆಯಲಾಗುತ್ತದೆ. ಅಂದಿನ ಸನ್ನಿವೇಶ ಮತ್ತು ಗಾಂಧೀಜಿಯವರ ಪ್ರಯತ್ನವನ್ನು ಆಗ ವಿದ್ಯಾರ್ಥಿಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಕೆ.ಅಯ್ಯಪ್ಪನ್ ಪಿಳ್ಳೈ ಸ್ಮರಿಸಿದ್ದಾರೆ. 1924 ರ ಪ್ರವಾಹದ ಸಂದರ್ಭವೂ ಮುಲ್ಲಪೆರಿಯಾರ್ ಅಣೆಕಟ್ಟು ಬಾಗಿಲು ತೆರೆದಿದ್ದುದು ಹೆಚ್ಚಿನ ಅನಾಹುತಕ್ಕೆ ಕಾರಣವಾಗಿತ್ತು. 

ಆಗ ಕೇರಳದ ಬಹುತೇಕ ಜಿಲ್ಲೆಗಳಲ್ಲಿ ನೂರಾರು ಮಂದಿ ಪ್ರಾಣ ಕಳೆದುಕೊಂಡು ವ್ಯಾಪಕ ಹಾನಿಗಳಾಗಿದ್ದವು. ಪ್ರವಾಹಕ್ಕೆ ಸಂಬಂಧಿಸಿ ಗಾಂಧೀಜಿಯವರು ತಮ್ಮ ‘ಯಂಗ್ ಇಂಡಿಯಾ’ ಮತ್ತು ‘ನವಜೀವನ’ ಪತ್ರಿಕೆಯಲ್ಲಿ ಸಾಕಷ್ಟು ಲೇಖನಗಳನ್ನು ಪ್ರಕಟಿಸಿ, ಪ್ರವಾಹ ಪೀಡಿತ ಮಲಬಾರ್(ಕೇರಳ)ಗೆ ದೇಣಿಗೆ ನೀಡುವಂತೆ ಜನತೆಯಲ್ಲಿ ವಿನಂತಿಸಿದ್ದರು.

click me!