
ಬೆಂಗಳೂರು: ಸರಕಾರ ರಚನೆಯ ಒಂದು ಹಂತದ ಹೈಡ್ರಾಮಾ ಮುಗಿದಿದ್ದು, ಬಹುಮತ ಸಾಬೀತುಪಡಿಸುವವರೆಗೂ ಬಿಜೆಪಿ ಸರಕಾರ ಮುಂದುವರಿಯುತ್ತದೋ, ಇಲ್ಲವೋ ಎಂಬುದನ್ನು ಊಹಿಸಲು ಸಾಧ್ಯವಿಲ್ಲ.
ರೆಸಾರ್ಟ್ ರಾಜಕಾರಣ ನಡೆಯುತ್ತಿದ್ದು, ಕುದುರೆ ವ್ಯಾಪಾರವೂ ನಡೆಯುವ ಸಾಧ್ಯತೆಗಳಿವೆ. ಆದರೆ, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಬಹುಮತ ಸಾಬೀತುಪಡಿಸುವ ಬಗ್ಗೆ ಅಪಾರ ವಿಶ್ವಾಸ ಹೊಂದಿದ್ದಾರೆ. ಅಷ್ಟಕ್ಕೂ ಮುಂದಿನ ನಡೆ ಏನಾಗಬಹುದು? ಸರಕಾರ ಉಳಿಸಿಕೊಳ್ಳುವ ಸಾಧ್ಯತೆಗಳೇನು?
- ಪ್ರಮಾಣ ವಚನ ಸ್ವೀಕರಿಸಿದ ನಂತರ ಕಾಂಗ್ರೆಸ್ - ಜೆಡಿಎಸ್ ಪಾಳೆಯದ ಶಾಸಕರನ್ನು ಸೆಳೆದು ರಾಜೀನಾಮೆ ಕೊಡಿಸಿ ಸದನದ ಸಂಖ್ಯಾ ಬಲ ಕುಗ್ಗಿಸುವ ಮೂಲಕ ಬಹುಮತ ಗಳಿಸುವುದು.
- ಒಂದು ಪಕ್ಷದ ಶಾಸಕರ ಒಟ್ಟು ಸಂಖ್ಯೆಯ ಮೂರನೇ ಎರಡರಷ್ಟು ಶಾಸಕರು ಒಟ್ಟಾಗಿ ಬಿಜೆಪಿಗೆ ಬರುವಂತೆ ಮಾಡುವುದು. ಜೆಡಿಎಸ್ನಲ್ಲಿ ಮೂರನೇ ಎರಡರಷ್ಟು ಅಂದರೆ 26 ಶಾಸಕರು ವಲಸೆ ಹೋದರಷ್ಟೇ ಪಕ್ಷಾಂತರ ನಿಷೇಧದಿಂದ ಪಾರಾಗಬಹುದು. ಕಾಂಗ್ರೆಸ್ನಲ್ಲಿರುವ 78 ಶಾಸಕರ ಪೈಕಿ 52 ಶಾಸಕರು ವಲಸೆ ಹೋದರಷ್ಟೇ ಪಕ್ಷಾಂತರ ನಿಷೇಧ ಕಾಯ್ದೆ ಕಾನೂನಿನಿಂದ ಪಾರಾಗಬಹುದು. ಆದ್ದರಿಂದ ಇದು ಅಸಾಧ್ಯ.
- ಮನಸಾಕ್ಷಿಯ ಮತ ಗಳಿಸುವಲ್ಲಿ ಬಿಎಸ್ವೈ ಯಶಸ್ವಿಯಾಗಿ, ಕ್ರಾಸ್ ವೋಟಿಂಗ್ ನಡೆದರೂ ಬಹುಮತ ಪಡೆಯಬಹುದು. ಪಕ್ಷಾಂತರ ನಿಷೇಧ ಕಾಯ್ದೆಯ ವಿರುದ್ಧ ಕಾನೂನು ಹೋರಾಟದ ರಿಸ್ಕ್ ತೆಗೆದುಕೊಂಡು ಮನಸಾಕ್ಷಿಯ ಕ್ರಾಸ್ ವೋಟಿಂಗ್ ಮಾಡಿಸಬಹುದು.
- ಚುನಾಯಿತ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ ನಂತರವಷ್ಟೇ ಶಾಸಕರಾಗುವರು. ಆ ನಂತರವಷ್ಟೇ ಪಕ್ಷದ ವಿಪ್ ಜಾರಿ ಮಾಡಬಹುದು. ಚುನಾಯಿತ ಸದಸ್ಯರನ್ನೇ ಪ್ರಮಾಣ ವಚನದಿಂದ ದೂರ ಉಳಿಯುವಂತೆ ಮಾಡಿಯೂ ಸದನದ ಬಲ ಕುಗ್ಗಿಸಿ ಬಹುಮತ ಸಾಬೀತು ಮಾಡುವುದು. ಬಹುಮತದ ನಂತರವಷ್ಟೇ 16 ಚುನಾಯಿತ ಸದಸ್ಯರು ಪ್ರಮಾಣವಚನ ಸ್ವೀಕರಿಸುವಂತೆ ನೋಡಿಕೊಳ್ಳುವುದು. ಇದು ಈಗ ಕಾನೂನು ಚರ್ಚೆಗೆ ಒಳಗಾಗಿದೆ.
- ಮತ್ತೊಂದು ಸುತ್ತು ಜೆಡಿಎಸ್ ಜೊತೆ ಬೆಂಬಲ ಪಡೆಯುವ ಮಾತುಕತೆ ನಡೆಸಲು ಮುಂದಾಗಬಹುದು. ಕಾಂಗ್ರೆಸ್ ರೀತಿಯಲ್ಲಿಯೇ ಬೇಷರತ್ ಬೆಂಬಲ ನೀಡಲು ಬಿಜೆಪಿ ಮುಂದಾದರೂ ಆಶ್ಚರ್ಯವಿಲ್ಲ.
ಗಾಂಧಿ ಪ್ರತಿಮೆ ಮುಂದೆ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.